ಉಪ್ಪಿನಂಗಡಿ: ನಿರಂತರ ಮಳೆಯಿಂದಾಗಿ ಈ ಭಾಗದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು, ಅರ್ಧಂಬರ್ಧ ಕಾಮಗಾರಿ ಹಾಗೂ ಹೆದ್ದಾರಿಯಲ್ಲಿ ಹೊಂಡ- ಗುಂಡಿಗಳಿಂದಾಗಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ.
ಈ ಭಾಗದ ಹೆದ್ದಾರಿ ಚತುಷ್ಪಥ ಕಾಮಗಾರಿಯ ಗುತ್ತಿಗೆಯನ್ನು ಕೆಎನ್ಆರ್ ಸಂಸ್ಥೆ ವಹಿಸಿಕೊಂಡಿತ್ತು. ಆದರೆ ಕಾಮಗಾರಿ ಅಪೂರ್ಣವಾಗಿ ಉಳಿದಿದ್ದು, ಅಲ್ಲಲ್ಲಿ ಕಾಮಗಾರಿಗಾಗಿ ಅಗೆದು ಹಾಕಲಾಗಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಹಳೆಯ ರಾಷ್ಟ್ರೀಯ ಹೆದ್ದಾರಿಯಿಡೀ ಹೊಂಡಗಳು ನಿರ್ಮಾಣವಾಗಿವೆ. ಕೆಲವು ಕಡೆ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಹಳ್ಳಗಳು ಕೂಡಾ ನಿರ್ಮಾಣವಾಗಿವೆ. ಇದರಿಂದಾಗಿ ಕೆಲವೆಡೆಗಳಲ್ಲಿ ರಸ್ತೆಯ ಒಂದು ಬದಿ ಮಾತ್ರ ವಾಹನ ಸಂಚರಿಸುವಂತಾಗಿದ್ದು, ಅಪಘಾತಕ್ಕೂ ಕಾರಣವಾಗುತ್ತಿವೆ.
ಕೂಟೇಲು, ಹಳೆಗೇಟು ಪ್ರದೇಶದಲ್ಲಿ ಹೆದ್ದಾರಿಯ ಹೊಂಡಗಳನ್ನು ಜಲ್ಲಿ ಹಾಗೂ ಸಿಮೆಂಟ್ ಮಿಶ್ರಣದಿಂದ ವಾರಕ್ಕೆರಡು ಬಾರಿ ಮುಚ್ಚುವ ಪ್ರಯತ್ನ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಮಾಡಿದರೂ, ಒಂದೇ ಮಳೆಗೆ ಅದರ ಸಿಮೆಂಟ್ ಮಿಶ್ರಣ ಕರಗಿ ಹೋಗಿ ಮತ್ತದೇ ಹೊಂಡಗಳು ಬಾಯ್ದೆರೆದು ನಿಲ್ಲುತ್ತಿದ್ದವು. ಹೆದ್ದಾರಿಯಲ್ಲಿ ಹೊಂಡಗಳಿಗೆ ಹಾಕಿದ ಮಿಶ್ರಣದಿಂದಾಗಿ ದೊಡ್ಡ ಜಲ್ಲಿ ಕಲ್ಲುಗಳು ರಸ್ತೆಯಿಡೀ ಹರಡಿಕೊಂಡಿದ್ದು, ದ್ವಿಚಕ್ರ ವಾಹನ ಹಾಗೂ ಲಘು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.