ಪುತ್ತೂರು: ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆಯ ನೆಲೆಯಲ್ಲಿ ಪುತ್ತೂರಿನಲ್ಲಿ ’ಅಮರ್ ಜವಾನ್ ಜ್ಯೋತಿ ಸ್ಮಾರಕ’ವನ್ನು ರೂಪಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಂದಾಳತ್ವದಲ್ಲಿ ಮಾಜಿ ಸೈನಿಕರ ಸಂಘ, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿಯೇ ಮೊದಲಾದ ಅನ್ಯಾನ್ಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ನಡೆಯುತ್ತಿದೆ.
ಬೆಳಗ್ಗೆ 9.3೦ಕ್ಕೆ ದರ್ಬೆ ವೃತ್ತದಿಂದ ಬೃಹತ್ ಮೆರವಣಿಗೆ ನಡೆಯಿತು. ಕಾರ್ಗಿಲ್ ಹೋರಾಟದಲ್ಲಿ ಮೆರೆದ ವಿಕ್ರಮಕ್ಕಾಗಿ ಸೇನೆಯ ಅತ್ಯುಚ್ಚ ಗೌರವವಾದ ಪರಮವೀರ ಚಕ್ರ ಪ್ರಶಸ್ತಿ ಪಡೆದ ಕ್ಯಾ.ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕಾರ್ಗಿಲ್ ಹೋರಾಟದಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿ, ಅಂತಿಮವಾಗಿ ತನ್ನ ಕಾಲುಗಳನ್ನು ಕಳೆದುಕೊಂಡರೂ ಸಾಹಸ ಬಿಡದ ಕೊಡಗಿನ ವೀರಯೋಧ, ಸೇನಾಪದಕ ಪುರಸ್ಕೃತ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ತೆರೆದ ವಾಹನದಲ್ಲಿ ಕಿಲ್ಲೆ ಮೈದಾನಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಮಳೆಯನ್ನೂ ಲೆಕ್ಕಿಸದೆ ಹಲವು ಮಹನೀಯರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.
ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಕ್ಯಾ ಯೋಗೀಂದ್ರ ಸಿಂಗ್ ಮತ್ತು ಕ್ಯಾ ನಾಗಪ್ಪ ಅವರಿಂದ ಹುತಾತ್ಮ ಯೋಧರಿಗೆ ಗೌರವ
ಮೆರವಣಿಗೆಯ ನಂತರ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಕ್ಯಾ ಯೋಗೀಂದ್ರ ಸಿಂಗ್ ಮತ್ತು ಕ್ಯಾ.ನವೀನ್ ನಾಗಪ್ಪ ಅವರಿಂದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.