ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಚೇರಿ ಕಟ್ಟಡದ ಉದ್ಘಾಟನೆ

0

ಪುತ್ತೂರು: ಸುಮಾರು 64 ವರ್ಷಗಳ ಇತಿಹಾಸವಿರುವ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳಿಯೂರುಕಟ್ಟೆಯಲ್ಲಿರುವ ಕೇಂದ್ರ ಕಚೇರಿಯ ನೂತನ ಸುಸಜ್ಜಿತ ಕಟ್ಟಡವು ಜು.20ರಂದು ಉದ್ಘಾಟನೆಗೊಂಡಿತು.


ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನಗೊಳ್ಳುತ್ತಿದ್ದರೆ ಸಹಕಾರಿ ಬ್ಯಾಂಕ್‌ಗಳು ವಿಸ್ತಾರಗೊಳ್ಳುತ್ತಿದೆ–ಡಾ| ಎಂ.ಎನ್ ರಾಜೇಂದ್ರ ಕುಮಾರ್:
ನೂತನ ಕೇಂದ್ರ ಕಚೇರಿ ಕಟ್ಟಡವನ್ನು ಉದ್ಘಾಟಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿಯ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಹುಟ್ಟಿಕೊಂಡಿರು ದ.ಜ ಜಿಲ್ಲೆಯನ್ನು ಬ್ಯಾಂಕ್‌ಗಳ ತವರೂರು ಎಂದು ಹೇಳಲಾಗುತ್ತಿದೆ. ಆದರೆ ಆ ಬ್ಯಾಂಕ್‌ಗಳ ವಿಲೀನಗೊಳ್ಳುವ ಮೂಲಕ ಕೆಲವು ಬ್ಯಾಂಕ್‌ಗಳ ಹೆಸರುಗಳೇ ಇಲ್ಲದಂತಾಗಿದೆ. ಸಹಕಾರಿ ಬ್ಯಾಂಕ್‌ಗಳು ತಮ್ಮ ಸೇವೆಯನ್ನು ವಿಸ್ತರಿಸುತ್ತಾ ಶಾಖೆಗಳನ್ನು ತೆರೆದು ಜನರಿಗೆ ಸೇವೆ ನೀಡುತ್ತಿದೆ. ಸಹಕಾರಿ ಕ್ಷೇತ್ರದ ಮೂಲಕ ಜನತೆ ಉತ್ತಮ ಸೇವೆ ನೀಡುವ ಮೂಲಕ ಸಹಕಾರಿ ಸಂಘಗಳು ಬೆಳೆಯುತ್ತಿದ್ದು ದ.ಕ ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಬಲಾಢ್ಯವಾಗಿದೆ. ಕಳೆದ 28 ವರ್ಷಗಳಿಂದ ಕೃಷಿ ಸಾಲಗಳು ಶೇ.100ರಷ್ಟು ಮರುಪಾವತಿಯಾಗುತ್ತಿದೆ. ಎಲ್ಲಾ ಕಡೆ ರೈತರ ಆತ್ಮಹತ್ಯೆಗಳು ನಡೆಯುತ್ತಿದೆ. ದೇಶದಲ್ಲಿ ರೈತರು ಆತ್ಮಹತ್ಯೆ ಮಾಡದ ಜಿಲ್ಲೆಯಿದ್ದರೆ ಅದು ದಕ್ಷಿಣ ಕನ್ನಡ ಮಾತ್ರ ಎಂದ ಅವರು ಒಂದೇ ಗ್ರಾಮಕ್ಕೆ ಸೀಮಿತವಾದ ಬಲ್ನಾಡಿನ ಸಹಕಾರಿ ಸಂಘವು ರೈತರಿಗೆ ಉತ್ತಮ ಸೇವೆ ನೀಡುತ್ತಿದೆ. ನೂತನ ಕೇಂದ್ರ ಕಚೇರಿಯ ಕಟ್ಟಡಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ರೂ.10ಲಕ್ಷ ದೇಣಿಗೆ ನೀಡುವುದಾಗಿ ಅವರು ಘೋಷಣೆ ಮಾಡಿದರು.


ಉತ್ತಮ ಕಟ್ಟಡ ಲೋಕಾರ್ಪಣೆ ಮಾಡಿ ಇತಿಹಾಸ ಸೃಷ್ಠಿಸಿದೆ-ಅಶೋಕ್ ಕುಮಾರ್ ರೈ:
ಆಡಳಿತ ಕಚೇರಿ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಗೌಡ ನೇತೃತ್ವದಲ್ಲಿ ಉತ್ತಮ ಕಟ್ಟಡ ನಿರ್ಮಿಸಿ ಸಮಾಜಕ್ಕೆ ಅರ್ಪಣೆ ಮಾಡುವ ಮೂಲಕ ಇತಿಹಾಸ ಸೃಷ್ಠಿ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಉತ್ತಮ ವ್ಯವಸ್ಥೆಗಳು ಸಹಕಾರ ಸಂಘಗಳಲ್ಲಿದೆ. ಕೇಂದ್ರ, ರಾಜ್ಯ ಸಚಿವರ ಕಚೇರಿಯನ್ನು ಮೀರಿಸುವ ಮಾದರಿಯಲ್ಲಿ ಆಡಳಿತ ಕಚೇರಿಗಳು ಸಹಕಾರಿ ಸಂಘಗಳಲ್ಲಿದೆ. ಸತೀಶ್ ಗೌಡರವರ ಸಾಧನೆಯ ಹಾದಿಯು ಇತಿಹಾಸದ ಪುಸ್ತಕದಲ್ಲಿ ಬರೆದಿಡುವಂತಾಗಿದೆ. ಸಹಕಾರಿ ಸಂಘಗಳೂ ಯಾವುದೇ ಒತ್ತಡಕ್ಕೆ ಮಣಿಯದೇ ವ್ಯವಹರಿಸಬೇಕು. ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಕೃಷಿಯೂ ಬೆಳೆದಾಗ ಸಹಕಾರಿ ಕ್ಷೇತ್ರ ಅಭಿವೃದ್ಧಿಯಲ್ಲಿ ಸಾಗಲಿದೆ ಎಂದರು.ಈ ಭಾರಿ ಹವಾಮಾನ ಆದಾರಿತ ಬೆಲೆ ವಿಮೆಯು ನಿಲ್ಲುವ ಪರಿಸ್ಥಿತಿಯಿತ್ತು. ಅದು ಸ್ಥಗಿತಗೊಂಡರೆ ರೈತರಿಗೇ ತೊಂದರೆಯಾಗಲಿದೆ. ಬೆಳೆ ವಿಮೆ ಬೇಡ ಎಂಬ ಅಭಿಪ್ರಾಯವಿತ್ತು. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ ಬಳಿಕ ಬಂದಿದೆ. ಬೆಳೆವಿಮೆಯಲ್ಲಿ ಶೇ.60ಕೇಂದ್ರ ಸರಕಾರ, ಶೇ.30 ರಾಜ್ಯ ಸರಕಾರ ಹಾಗೂ ಶೇ.10 ರೈತರು ಪಾವತಿಸಿದ ಹಣದಲ್ಲಿ ನೀಡಲಾಗುತ್ತಿದೆ. ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಕೃಷಿ ಬೆಳೆಯನ್ನಾಗಿ ಪರಿವರ್ತಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಅಡಿಕೆ ನಿಂತರೆ ಜಿಲ್ಲೆಯ ರೈತರಿಗೆ ತೊಂದರೆಯಾಗಲಿದೆ. ರೈತ ಪರವಾದ ಹೋರಾಟ ಕಡಿಮೆಯಾಗಿದೆ. ಹಳದಿ, ಎಳೆಚುಕ್ಕಿ ರೋಗದ ಬಗ್ಗೆ ಎಚ್ಚರ ವಹಿಸಬೇಕು. ಇದರ ಬಗ್ಗೆ ರೈತರು ಸರಕಾಹ ಗಮನ ಸೆಳೆಯಬೇಕು. ಅಡಿಕೆಗೆ ಪರ್ಯಾಯ ಬೆಳೆ ಆವಶ್ಯಕತೆಯಿದೆ. ಶಾಸಕನಾಗಿ ನಾನು ಭ್ರಷ್ಟಾಚಾರ ರಹಿತವಾಗಿ ಸೇವೆ ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.


ಸಹಕಾರಿ ಕ್ಷೇತ್ರದ ಮೂಲಕ ರೈತರ ಮನೆಬಾಗಿಲಿಗೆ ಸೇವೆ-ಸಂಜೀವ ಮಠಂದೂರು:
ಭದ್ರತಾ ಕೊಠಡಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದ.ಕ ಜಿಲ್ಲೆ ಸಹಕಾರಿ ಕ್ಷೇತ್ರದ ಕಾಶಿ. ದ.ಕ ಜಿಲ್ಲೆಯಲ್ಲಿ ಸಂಘದ ನಿರ್ದೇಶಕ ರಾಷ್ಟ್ರದ ಜನ ಅಧ್ಯಾಯ, ಜಿಲ್ಲೆಯ ಜನತೆಯ ಆರ್ಥಿಕ ಪ್ರಜ್ಞೆಯಿಂದಾಗಿ ಸಹಕಾರಿ ಕ್ಷೇತ್ರವು ಹೆಮ್ಮರವಾಗಿ ಬೆಳೆಸಿದೆ. ರೈತರ ಬೇಡಿಕೆಗಳು ಇಂದು ಸಹಕಾರಿ ಕ್ಷೇತ್ರದ ಮೂಲಕ ಮನೆ ಬಾಗಿಲಿಗೆ ನೀಡುತ್ತಿದೆ. ಕಲ್ಪವೃಕ್ಷದಂತೆ ಎಲ್ಲಾ ಸೇವೆಗಳು ಸಹಕಾರಿ ಕ್ಷೇತ್ರದ ಮೂಲಕ ದೊರೆಯುತ್ತಿದೆ ಎಂದರು. ಪ್ರಸ್ತುತ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಶೂನ್ಯ ಬಡ್ಡಿ ದರದ ಸಾಲವನ್ನು ರೂ.3ಲಕ್ಷದಿಂದ ರೂ.5ಲಕ್ಷಕ್ಕೆ ಏರಿಕೆ ಹಾಗೂ ಶೇ.3 ಬಡ್ಡಿಯ ರೂ.10ಲಕ್ಷದ ಸಾಲವನ್ನು ರೂ.15ಲಕ್ಷಕ್ಕೆ ಏರಿಕೆ ಮಾಡಿ ಕಳೆದ ರಾಜ್ಯ ಸರಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದನ್ನು ತಕ್ಷಣ ನೀಡುವ ಮೂಲಕ ರೈತ ಸ್ನೇಹಿ ಸರಕಾರ ಎಂದು ತೋರಿಸಿಕೊಂಡುವಂತೆ ಆಗ್ರಹಿಸಿದರು.


ನಾಲ್ಕೂವರೆ ತಿಂಗಳಲ್ಲಿ ಸುಸಜ್ಜಿತ ಕಟ್ಟಡ ಸಮಾಜಕ್ಕೆ ಅರ್ಪಣೆ-ಶಶಿಕುಮಾರ್ ರೈ ಬಾಲ್ಯೊಟ್ಟು:
ನೂತನ ಗೋದಾಮು ಕಟ್ಟಡ ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಅವಿಭಜಿತ ಉಡುಪಿ, ದ.ಕ ಜಿಲ್ಲೆಯಲ್ಲಿ 168 ಸಹಕಾರಿ ಸಂಘಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಾಹಿಸುತ್ತಿದೆ. 169ನೇ ಕಟ್ಟಡವಾಗಿ ಬಲ್ನಾಡಿನಲ್ಲಿ ನಿರ್ಮಾಣಗೊಂಡಿದೆ. ಹಳೆಯ ಕಟ್ಟಡ ಭದ್ರತೆಯಿಲ್ಲದಿರುವ ಬಗ್ಗೆ ಸಹಕಾರ ಇಲಾಖೆಯ ಉಪನಿಬಂಧಕರ ಸೂಚನೆಯಂತೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಇದಕ್ಕಾಗಿ ಸಂಘದ ಸದಸ್ಯರು ತಮ್ಮ ಡಿವಿಡೆಂಡ್‌ನ ಶೇ.50ರಷ್ಟನ್ನು ಕೊಡುಗೆ ನೀಡಿದ್ದಾರೆ. ಶಿಲಾನ್ಯಾಸಗೊಂಡು ಕೇವಲ ನಾಲ್ಕೂವರೆ ತಿಂಗಳಲ್ಲಿ ಕೇಂದ್ರ ಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಬಲ್ನಾಡು ಜನತೆಗೆ ಅರ್ಪಣೆಯಾಗಿದೆ. ಗ್ರಾಮದ ಜನತೆ ಸಂಘದ ಮೂಲಕ ವ್ಯವಹರಿಸಿ ಸಂಘದ ಬೆಳವಣಿಗೆ ಸಹಕರಿಸುವಂತೆ ವಿನಂತಿಸಿದರು.


ರೂ.123ಕೋಟಿ ವ್ಯವಹಾರ ಶ್ಲಾಘನೀಯ-ಶಕುಂತಳಾ ಟಿ. ಶೆಟ್ಟಿ:
ಸಭಾ ಭವನ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಬಲ್ನಾಡು ಒಂದು ಗ್ರಾಮಕ್ಕೆ ಸೀಮಿತವಾಗಿರುವ ಸಹಕಾರಿ ಸಂಘವು ರೂ.123 ಕೋಟಿ ವ್ಯವಹಾರ ನಡೆಸಿರುವುದು ಶ್ಲಾಘನೀಯ. ಪ್ರತಿಯೊಬ್ಬರ ಪ್ರಾಮಾಣಿಕ ಸೇವೆಯಿಂದ ಸಂಘಕ್ಕೆ ಜಾಗ ಖರೀದಿಸಿ ಸುಂದರ ಕಟ್ಟಡ ನಿರ್ಮಾಣಗೊಂಡಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಹಕಾರ, ಮಾರ್ಗದರ್ಶನಗಳಲ್ಲಿ ಪ್ರಾಥಮಿಕ ಸಂಘಗಳು ಅಭಿವೃದ್ಧಿಯತ್ತಾ ಸಾಗಿ ಉಭಯ ತಾಲೂಕಿನ 19 ಸಹಕಾರಿ ಸಂಘದ ಕಚೇರಿಗಳು ಹವಾನಿಯಂತ್ರತವಾಗಿ ನಿರ್ಮಾಣಗೊಂಡಿದೆ ಎಂದರು.


ಹೈನುಗಾರಿಕೆಗೂ ಸಹಕಾರ-ಎಸ್.ಬಿ ಜಯರಾಮ ರೈ:
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ ಜಯರಾಮ ರೈ ಮಾತನಾಡಿ, 119 ವರ್ಷಗಳ ಇತಿಹಾಸ ಇರುವ ಸಹಕಾರಿ ಕ್ಷೇತ್ರ ಇಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ|ಎಂ.ಎನ್ ರಾಜೇಂದ್ರ ಕುಮಾರ್‌ರವರು ಸಹಕಾರಿ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದವರು. ಅವರ ಮಾರ್ಗದರ್ಶನದಲ್ಲಿ ಅವಿಭಜಿತ ದ.ಕ, ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಸದೃಡವಾಗಿ ಬೆಳೆದಿದೆ. ಕೃಷಿಯಂತೆ ಸಹಕಾರಿ ಸಂಘಗಳ ಮೂಲಕ ಹೈನುಗಾರಿಕೆಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸೌಲಭ್ಯ ಸಹಕಾರ ನೀಡುತ್ತಿದೆ ಎಂದರು.


ಗ್ರಾಮದವರು ಹೆಮ್ಮೆ ಪಡುವ ವಿಷಯ-ಪ್ರಸಾದ್ ಕೌಶಲ್ ಶೆಟ್ಟಿ:
ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಸದಸ್ಯರ ಸಹಕಾರ ಅಗತ್ಯ. ಸಹಕಾರಿ ಕ್ಷೇತ್ರದ ತವರೂರು ಆಗಿರುವ ದ.ಕ ಜಿಲ್ಲೆಯಲ್ಲಿ ಬಲ್ನಾಡು ಸಹಕಾರಿ ಸಂಘದ ಕಟ್ಟಡ ಎದ್ದು ನಿಂತಿದ್ದು ಗ್ರಾಮದವರು ಹೆಮ್ಮೆ ಪಡುವಂತಾಗಿದೆ. ಹಲವು ವರ್ಷಗಳ ನಂತರ ಬಲ್ನಾಡಿಗೆ ಸಂತೋಷದ ದಿನ ಬಂದಿದ್ದು ಅದರಲ್ಲಿ ಪಾಲು ಪಡೆಯುವ ಅವಕಾಶ ತನಗೂ ದೊರೆತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.


ಕೇಂದ್ರ ಕಚೇರಿಯಲ್ಲಿರುವ ಎಲ್ಲಾ ಸೇವೆಗಳು ಶಾಖೆಯಲ್ಲಿಯೂ ದೊರೆಯಲಿ-ಚನಿಲ ತಿಮ್ಮಪ್ಪ ಶೆಟ್ಟಿ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಒಂದು ಗ್ರಾಮಕ್ಕೆ ಸೀಮಿತವಾಗಿದೆ. ಸಂಘದ ವ್ಯಾಪ್ತಿಯ ಮೂರನೇ ಒಂದು ಭಾಗದ ನಗರ ಸಭೆ ವ್ಯಾಪ್ತಿಯಲ್ಲಿದೆ. ಆದರೂ ಸಂಘವು ಅಭಿವೃದ್ಧಿಯಲ್ಲಿ ಮುನ್ನಡೆಯುತ್ತಿದೆ. ಸಂಘದ ಉಜ್ರುಪಾದೆಯಲ್ಲಿರುವ ಶಾಖೆಯಲ್ಲಿ ಕೇಂದ್ರ ಕಚೇರಿಯಲ್ಲಿರುವ ಎಲ್ಲಾ ರೀತಿಯ ಸೇವೆಗಳನ್ನು ಸದಸ್ಯರಿಗೆ ನೀಡಿದಾಗ ಸಂಘವು ಇನ್ನಷ್ಟು ಲಾಭದಾಯಕವಾಗಿ ಮುನ್ನಡೆಯಲು ಸಾಧ್ಯ ಎಂದರು.


ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, 1960ರಲ್ಲಿ ಶೀನ ಶೆಟ್ಟಿಯವರು ಸಂಘವನ್ನು ಹುಟ್ಟುಹಾಕಿ ಮುನ್ನುಡಿ ಬರೆದಿದ್ದಾರೆ. ಹಲವು ಮಂದಿ ಅಧ್ಯಕ್ಷರಾಗಿ, ಕಾರ್ಯನಿರ್ವಹಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದು ನೂತನ ಕಟ್ಟಡದಲ್ಲಿ ಅವರೆಲ್ಲರ ಪಾಲಿದೆ. ಸಂಘದ ಮಹಾಸಭೆಯ ನಿರ್ಣಯದಂತೆ ಸಂಘಕ್ಕೆ 40 ಸೆಂಟ್ಸ್ ಜಾಗ ಖರೀದಿಸಿ ಅದರಲ್ಲಿ ಸುಸಜ್ಜಿತ ಕೇಂದ್ರ ಕಚೇರಿಯ ಕಟ್ಟಡ ನಿರ್ಮಾಣಗೊಂಡಿದೆ. ಮುಂದಿನ ವರ್ಷಕ್ಕೆ ನೂತನ ಕೇಂದ್ರ ಕಚೇರಿ ನಿರ್ಮಿಸುವುದಾಗಿ ಕಳೆದ ಮಹಾಸಭೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ. ತನ್ನ ಅಧ್ಯಕ್ಷ ಅವಧಿಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದ ಸಂಘದ ಉಜ್ರುಪಾದೆ ಶಾಖೆಗೆ ಜಾಗ ಖರೀದಿಸಿ ಸುಸಜ್ಜಿತ ಕಟ್ಟಡ, ಕೇಂದ್ರ ಕಚೇರಿಗೆ ಜಾಗ ಖರೀದಿಸಿ ಸುಸಜ್ಜಿತ ಕಟ್ಟಡಗಳ ನಿರ್ಮಾಣಗೊಂಡಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ನಿರ್ದೇಶಕ ಶಶಿಕುಮಾರ್ ರೈಯವರ ಸಹಕಾರ, ಮಾರ್ಗದರ್ಶದಲ್ಲಿ ಜಾಗ ಖರೀದಿ ಹಾಗೂ ನೂತನ ಕಟ್ಟಡ ನಿರ್ಮಾಣವಾಗಿದೆ. ಜಾಗ ಖರೀದಿಗೆ ಡಿವಿಡೆಂಡ್‌ನ್ನು ಕೊಡುಗೆಯಾಗಿ ನೀಡಿ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆಗಳು. ಸಂಘದ ಮುಂದಿನ ಯೋಜನೆಗಳಿಗೆ ಸದಸ್ಯರು ಸಹಕರಿಸುವಂತೆ ಅವರು ವಿನಂತಿಸಿದರು.


ಸನ್ಮಾನ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಶಾಸಕ ಅಶೋಕ್ ಕುಮಾರ್ ರೈ, ಸಂಘದ ಮಾಜಿ ಅಧ್ಯಕ್ಷರಾದ ಬಿ.ಎಂ ಬಾಲಕೃಷ್ಣ ರೈ ಮುಗೆರೋಡಿ, ತಿಮ್ಮಪ್ಪ ಶೆಟ್ಟಿ ಚನಿಲ, ಚೆನ್ನಪ್ಪ ಪೂಜಾರಿ ಬಾಯಾರು, ಬಾಪ ಕುಂಞಿ, ಎ.ಎಂ ಪ್ರಕಾಶ್ಚಂದ್ರ ಆಳ್ವ, ಎ.ಎಂ ಪ್ರವೀಣಚಂದ್ರ ಆಳ್ವ, ಚಂದಪ್ಪ ಪೂಜಾರಿ ಕಾಡ್ಲ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ರೈ ಕೆಳಿಗಿನಮನೆ, ನಿವೃತ್ತ ಸಿಬಂದಿಗಳಾದ ವೆಂಕಟಕೃಷ್ಣ ಪಾಳೆಚ್ಚಾರು, ವಿಲಾಸಿನಿ ವಿ.ರೈ, ಸಂಘದ ಪ್ರಸ್ತುತ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ, ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ, ಕಟ್ಟಡ ಜಾಗ ನೀಡಿದ ಪ್ರಜ್ಚಲ್ ಸೊರಕೆ, ಕಾಮಗಾರಿ ನಿರ್ವಹಿಸಿದ ಮಾಸ್ಟರ್ ಪ್ಲಾನರಿಯ ಪ್ರಭಾಕರ್, ಇಂಜಿನಿಯರ್ ರೋಹಿತ್‌ರವರನ್ನು ಸನ್ಮಾನಿಸಲಾಯಿತು. ನೂತನ ಕಟ್ಟಡ ನಿರ್ಮಾಣ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬಂದಿ ಆರ್.ಬಿ ಸುವರ್ಣ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮೇಲ್ವಿಚಾರಕರಾದ ವಸಂತ, ರಕ್ಷಿತ್ ಹಾಗೂ ಸ್ವಯಂಸೇವಕರಾಗಿ ಸಹಕರಿಸಿದ ಬೆಳಿಯೂರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ, ವಿದ್ಯಾರ್ಥಿಗಳು ಮತ್ತು ಸಂಘದ ನಿರ್ದೇಶಕರು ಹಾಗೂ ಸಿಬಂದಿಗಳನ್ನು ಗೌರವಿಸಲಾಯಿತು.


ಬೆಳಿಯೂರುಕಟ್ಟೆ ಶಾಲಾ ವಿದ್ಯಾರ್ಥಿಗಳಾದ ಅಭಿಶ್ರೀ, ಧನುಶ್ರೀ, ಶರಣ್ಯ, ಉಮಾಶಂಕರಿ, ತೃಷಾ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ಸ್ವಾಗತಿಸಿದರು. ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ಎ.ಎಂ ಪ್ರಕಾಶ್ಚಂದ್ರ ಆಳ್ವ , ಕೆ.ಚಂದಪ್ಪ ಪೂಜಾರಿ, ಅಂಬ್ರೋಸ್ ಡಿ ಸೋಜ, ಸೀತಾರಾಮ ಗೌಡ, ನವೀನ್ ಕರ್ಕೇರ, ಸುರೇಶ್ ಎನ್., ಪ್ರಮೋದ್ ಬಿ., ಸೀತಾರಾಮ ಗೌಡ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಅತಿಥಿಗಳನ್ನು ಸಹಕಾರಿ ಶಾಲು, ಪುಷ್ಪ ನೀಡಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ವಂದಿಸಿದರು. ರೈತಗೀತೆ ಹಾಗೂ ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಸಹಭೋಜನವನ್ನು ಏರ್ಪಡಿಸಿದ್ದರು. ಪುತ್ತೂರು ಹಾಗೂ ಕಡಬ ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here