ಪುತ್ತೂರು: ಪರ್ಲಡ್ಕ ಶಿವಪೇಟಿಯಲ್ಲಿ ವಿವೇಕಾನಂದ ಶಿಶುಮಂದಿರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಶುಭಾರಂಭಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿ ಪ್ರೇಮಲತಾ ಉದಯರವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮನಸ್ಸು ಹಸಿಗೋಡೆ ಇದ್ದ ಹಾಗೆ. ಯಾವ ಆಚಾರ, ವಿಚಾರ ಸಂಸ್ಕೃತಿಯನ್ನು ಮಕ್ಕಳಲ್ಲಿ ತುಂಬುತ್ತೇವೋ ಅದು ದೃಢವಾಗಿ ನಿಲ್ಲುತ್ತದೆ. ಹೀಗೆ ಒಳ್ಳೆಯ ಆಚಾರ, ವಿಚಾರ, ರಾಷ್ಟ್ರಭಕ್ತಿ, ಸಂಸ್ಕೃತಿ ಆಧಾರಿತ ವೈಜ್ಞಾನಿಕ ಶಿಕ್ಷಣ ನೀಡುತ್ತಿರುವುದೇ ವಿವೇಕಾನಂದ ಶಿಶುಮಂದಿರದ ವೈಶಿಷ್ಟ್ಯ ಪ್ರೀತಿ, ಗೌರವ, ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುತ್ತಿರುವ ಈ ಸಂಸ್ಥೆ ಸೂರ್ಯಪ್ರಕಾಶದಂತೆ ಪ್ರಜ್ವಲಿಸಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕರವರು ಮಾತನಾಡಿ, ಇಂದಿನ ಯುವ ಪೀಳಿಗೆಗೆ ಸಂಸ್ಕೃತಿ ಇತಿಹಾಸಗಳ ಅರಿವು ಬಾಲ್ಯದಿಂದಲೇ ಸಿಗುವುದು ಅವಶ್ಯ. ಈ ನಿಟ್ಟಿನಲ್ಲಿ ಬಾಲ್ಯದ ಸಹಜ ಚಟುವಟಿಕೆಗಳ ಜೊತೆ ಸಂಸ್ಕೃತಿಯ ಬುನಾದಿ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಗೆ ಸೇರಿದ ನೀವೇ ಧನ್ಯರು ಎಂಬುದಾಗಿ ಅಭಿಪ್ರಾಯಪಟ್ಟರು.
ವಿವೇಕಾನಂದ ಶಿಶುಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ರಾಜಗೋಪಾಲ ಭಟ್‌ರವರು ಅತಿಥಿಗಳ ಪರಿಚಯದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶುಮಂದಿರದ ಮಾತಾಜಿಯವರಿಂದ ಮಕ್ಕಳಿಗೆ ಪ್ರವೇಶೋತ್ಸವ ನಡೆಯಿತು. ಶುಭಾರಂಭದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಶಿಶುಮಂದಿರದ ಪುಟಾಣಿಗಳು ಪ್ರಾರ್ಥಿಸಿದರು. ಪುಟಾಣಿ ಗೌರವ್ ಸ್ವಾಗತಿಸಿ, ವಿವೇಕಾನಂದ ಶಿಶುಮಂದಿರದ ಕೋಶಾಧಿಕಾರಿ ಚಂದ್ರಪ್ರಭಾ ಸತೀಶ್ ವಂದಿಸಿದರು. ಶ್ರೀಲಕ್ಷ್ಮೀಪ್ರಭಾ ಕಾರ್ಯಕ್ರಮ ನಿರೂಪಿಸಿದರು. ಶುಭಾರಂಭ ನಿಮಿತ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ಅನನ್ಯ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಮಾತಾಜಿಯವರು, ಹಿತೈಷಿಗಳು ಹಾಗೂ ಅನೇಕ ಅತಿಥಿ ಗಣ್ಯರು ಆಗಮಿಸಿದ್ದರು.