ಪುತ್ತೂರು: ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿ ಸಂಚರಿಸುವವರು ಮಳೆಗಾಲದಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಹಲವು ಪ್ರಮುಖ ಪಟ್ಟಣಗಳನ್ನು ಬೆಸೆಯುವ ಪುತ್ತೂರು-ಉಪ್ಪಿನಂಗಡಿ ರಸ್ತೆ ಮೇಲ್ದರ್ಜೆಗೇರಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಕಾಣುತ್ತಿದೆ. ನೆಕ್ಕಿಲಾಡಿಯ ಬೇರಿಕೆಯಿಂದ ಆದರ್ಶನಗರ ಸಮೀಪದ ಬೊಳಂತಿಲ ತನಕ ನಡೆದ ಡಾಮರು ಕಾಮಗಾರಿಯಿಂದ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಈ ರಸ್ತೆಯ ಡಾಮಾರು ಎದ್ದು ಹೋಗಿದ್ದು ವಾಹನ ಸವಾರರು ಹಿಡಿಶಾಪ ಹಾಕಿಕೊಂಡು ಸಂಚರಿಸುವಂತಾಗಿದೆ. ಅಲ್ಲಲ್ಲಿ ಹೊಂಡ ನಿರ್ಮಾಣವಾಗಿದ್ದು ಡಾಮರು ಹಾಕಿ ಒಂದು ತಿಂಗಳ ಸಮಯದಲ್ಲೇ ರಸ್ತೆಯ ಕಳಪೆ ಕಾಮಗಾರಿಯನ್ನು ಎತ್ತಿ ತೋರಿಸಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಸುಮಾರು 13 ಕಿ.ಮೀ. ವ್ಯಾಪ್ತಿಯ ಪುತ್ತೂರು – ಉಪ್ಪಿನಂಗಡಿ ರಸ್ತೆಯಲ್ಲಿ ಮೂರು ಹಂತಗಳ ಚತುಷ್ಪಥ ಕಾಮಗಾರಿ ನಡೆಸಲಾಗಿದೆ. ಪುತ್ತೂರು – ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿ ಶಕುಂತಳಾ ಶೆಟ್ಟಿ ಶಾಸಕತ್ವದ ಸಮಯದಲ್ಲಿ ಆರಂಭಗೊಂಡಿತ್ತು. ಹಾರಾಡಿಯಿಂದ ಪಡೀಲ್ ತನಕ, ಬಳಿಕ ಕೇಪುಳುನಿಂದ ಕೆಮ್ಮಾಯಿ ತನಕ ಚತುಷ್ಪಥ ರಸ್ತೆ ನಿರ್ಮಿಸಲಾಗಿತ್ತು. ಸಂಜೀವ ಮಠಂದೂರುರವರ ಶಾಸಕತ್ವದ ಅವಽಯಲ್ಲಿ ಮಠಂತಬೆಟ್ಟು ಎಂಬಲ್ಲಿಂದ ಶಾಂತಿನಗರ ನೆಕ್ಕಿಲಾಡಿ ತನಕ ರೂ 12 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ನಡೆದು ಕಾಮಗಾರಿ ಆರಂಭಗೊಂಡಿತ್ತು. ಸಂಜೀವ ಮಠಂದೂರುರವರ ಶಾಸಕತ್ವದ ಅವಧಿ ಮುಕ್ತಾಯದ ಬಳಿಕ 2023ರಲ್ಲಿ ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈರವರು ರಸ್ತೆ ಕಾಮಗಾರಿ ವೀಕ್ಷಣೆ ಮಾಡಿ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ ತ್ವರಿತಗತಿಯಲ್ಲಿ ಕಾಮಗಾರಿ ಮಾಡುವಂತೆ ತಿಳಿಸಿದ್ದರು. ಅದರಂತೆ ಈ ಚತುಷ್ಪಥ ರಸ್ತೆ ಕಾಮಗಾರಿಗೆ ವೇಗ ಪಡೆದುಕೊಂಡಿತ್ತು. ಬೇರಿಕೆ ನೆಕ್ಕಿಲಾಡಿ ರಸ್ತೆ ಅಗಲೀಕರಣಗೊಂಡು ಈ ವರ್ಷದ ಮೇ-ಜೂನ್ ತಿಂಗಳಿನಲ್ಲಿ ನಡೆದ ಕಾಮಗಾರಿಯ ಡಾಮರು ಈಗಾಗಲೇ ಕಿತ್ತು ಹೋಗಿ ಅಲ್ಲಲ್ಲಿ ಹೊಂಡ, ಗುಂಡಿ ನಿರ್ಮಾಣವಾಗಿದೆ. ಈಗ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆಯ ಹೊಂಡದಲ್ಲಿ ನೀರು ನಿಂತು ವಾಹನ ಸವಾರರು ಕಷ್ಟದಲ್ಲಿಯೇ ವಾಹನ ಸಂಚರಿಸಬೇಕಾಗಿದೆ. ಬನ್ನೂರು- ಸೇಡಿಯಾಪು ರಸ್ತೆಯಲ್ಲಿಯೂ ಹೊಂಡ ಗುಂಡಿ ನಿರ್ಮಾಣವಾಗಿದೆ. ಪುತ್ತೂರು- ಉಪ್ಪಿನಂಗಡಿ ನಡುವಿನ 13 ಕಿಲೋ ಮೀಟರ್ ಉದ್ದದ ರಸ್ತೆ ಪೂರ್ತಿ ಚತುಷ್ಪಥಗೊಳ್ಳುವ ಸಮಯಕ್ಕೆ ರಸ್ತೆ ಡಾಮರು ಕೂಡ ಎದ್ದು ಹೋಗುತ್ತಾ ಇದೆ. ಪಾದಚಾರಿಗಳು ಕೂಡ ಕೆಸರಿನ ಅಭಿಷೇಕ ಅನುಭವಿಸುವಂಥಾಗಿದೆ. ಸಂಬಂಧಪಟ್ಟವರು ತಕ್ಷಣ ಇತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದುರಸ್ತಿಗೆ ಸೂಚನೆ ನೀಡಿದ್ದೇವೆ
ವಿಪರೀತ ಮಳೆಗೆ ಒಸರು ಬಂದು ಡಾಮರು ಎದ್ದು ಹೋಗಿದೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ರಿಪೇರಿ ಮಾಡಲು ಸೂಚನೆ ನೀಡಿದ್ದೇವೆ. ಮಳೆ ಮುಗಿದ ಕೂಡಲೇ ಡಾಮರು ಎದ್ದು ಹೋದ ಜಾಗದಲ್ಲಿ ಡಾಮರು ತೆಗೆದು ಹೊಸದಾಗಿ ಹಾಕುತ್ತೇವೆ.
ಬಿ. ರಾಜಾರಾಮ್ ಮುಖ್ಯ ಅಭಿಯಂತರರು
ಲೋಕೋಪಯೋಗಿ ಇಲಾಖೆ ಪುತ್ತೂರು