ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಮತ್ತು ವಿದ್ಯಾರ್ಥಿ ನಿಲಯ ರಾಮಕುಂಜ ಹಾಗೂ ನೇತ್ರಾವತಿ ತುಳುಕೂಟ ರಾಮಕುಂಜ ಇದರ ವತಿಯಿಂದ ಮಕ್ಕಳಿಗೆ ಭತ್ತದ ಗದ್ದೆಯ ನಾಟಿಯ ಪ್ರಾಯೋಗಿಕ ಕಾರ್ಯಕ್ರಮ ಜು.24ರಂದು ಹಮ್ಮಿಕೊಳ್ಳಲಾಯಿತು.
ಆಲಂಕಾರಿನ ಮೂಲೆತಮಜಲು ಬಿ.ಎಲ್.ಜನಾರ್ದನರವರ ಗದ್ದೆಯಲ್ಲಿ ವಿದ್ಯಾರ್ಥಿಗಳು ನೇಜಿನಾಟಿ ಮಾಡಿ ಸಂಭ್ರಮಿಸಿದರು. ಗದ್ದೆಯ ಕೃಷಿ ವಿಧಾನ ಹಾಗೂ ಅದರ ಉಪಯುಕ್ತತೆಯನ್ನು ಬಿ.ಎಲ್.ಜನಾರ್ದನ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಂಸ್ಥೆಯ ಕಾರ‍್ಯದರ್ಶಿ ಕೆ.ಸೇಸಪ್ಪ ರೈ ಅವರು ಮಾತನಾಡಿ, ಗದ್ದೆಯಲ್ಲಿ ಬರುವ ಫಸಲಿನ ಅರ್ಧಾಂಶವನ್ನು ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಿಸಿಯೂಟದ ಮೂಲಕ ಆಹಾರವಾಗಿ ನೀಡುವ ಈ ನೆನಪು ವಿದ್ಯಾರ್ಥಿಗಳ ಜೀವನದಲ್ಲಿ ಸದಾ ಉಳಿಯಲು ಸಹಕಾರವಾಗುತ್ತದೆ ಎಂದು ತಿಳಿಸಿದರು.
ಈ ಪ್ರಾತ್ಯಕ್ಷಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಸಾಯಿರಾಂ, ಪ್ರಸ್ತುತ ಅಧ್ಯಕ್ಷರಾದ ಹರೀಶ್ ಬಾರಿಂಜ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ, ಸಂಸ್ಥೆಯ ವ್ಯವಸ್ಥಾಪಕರಾದ ರಮೇಶ್ ರೈ ಆರ್.ಬಿ, ಶಾಲಾ ಮುಖ್ಯೋಪಾಧ್ಯಾಯರು, ಸ್ಥಳೀಯರಾದ ವಿನಯ ಕೆದಿಲ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಸಂಸ್ಥೆಯ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಸುಮಾರು 200 ವಿದ್ಯಾರ್ಥಿಗಳು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.