ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2024-25 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಶಿಕ್ಷಕ-ರಕ್ಷಕ ಸಂಘದ ರಚನೆ ಕಾಲೇಜಿನ ಆಡಳಿತ ಮಂಡಳಿ ಸಮ್ಮುಖದಲ್ಲಿ ನಡೆಯಿತು. ಪುತ್ತೂರಿನ ನೆಲ್ಲಿಕಟ್ಟೆ ನಿವಾಸಿಯಾದ ಹರಿಣಾಕ್ಷಿ. ಜೆ. ಶೆಟ್ಟಿ ನ್ಯಾಯವಾದಿಗಳು, ಪುತ್ತೂರು ಇವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯದ ಶಿಕ್ಷಕರಾದ ಉಮೇಶ ಶೆಟ್ಟಿ ಎಂ ಮತ್ತು ಸಂತ ಫಿಲೋಮಿನ ಕಾಲೇಜಿನ ಉಪನ್ಯಾಸಕಿ ಉಷಾ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಕಡಬದ ಕಂಪ್ಯೂಟರ್ ಹಾರ್ಡ್ ವೇರ್ ಸಂಸ್ಥೆಯ ಮಾಲಕ ಹಾಗೂ ಕೃಷಿಕರಾದ ಪ್ರಸನ್ನ ಕುಮಾರ್.ಎಂ.ಎಸ್ ಹಾಗೂ ಪುತ್ತೂರಿನ ಎಸ್.ಬಿ.ಐ ಸೇವಾಕೇಂದ್ರದ ಪ್ರೊವೈಡರ್ ವೀಣಾ ಕಿರಣ.ಬಿ ನೇಮಕಗೊಂಡರು.
ಶಿಕ್ಷಕ-ರಕ್ಷಕ ಸಂಘದ ನೂತನ ಅಧ್ಯಕ್ಷೆ ಹರಿಣಾಕ್ಷಿ ಜೆ. ಶೆಟ್ಟಿ ಮಾತನಾಡಿ “ವಿವೇಕಾನಂದ ವಿದ್ಯಾಸಂಸ್ಥೆ ಶಿಕ್ಷಣ ಸಂಸ್ಥೆಗಳಲ್ಲಿಯೇ ಪ್ರತಿಷ್ಠಿತವಾದ ವಿದ್ಯಾಸಂಸ್ಥೆಯಾಗಿದೆ. ವಿದ್ಯಾರ್ಥಿಗಳ ಏಳಿಗೆಗೆ ನಿರಂತರವಾಗಿ ಶ್ರಮವಹಿಸುತ್ತಾ ಅವರ ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಒಂದು ಅಂಗವಾಗಿ ರಚನೆಯಾಗುವ ಶಿಕ್ಷಕ-ರಕ್ಷಕ ಸಂಘವು ಮಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ವನ್ನು ನೀಡಿ ಕಾರ್ಯೋನ್ಮುಖವಾಗಲಿದೆ” ಎಂದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, “ಬದುಕು ಅರ್ಥಪೂರ್ಣವಾಗಬೇಕಾದರೆ ನಾವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿ, ಪಾಲಕ, ಶಿಕ್ಷಕ, ಆಡಳಿತ ಮಂಡಳಿ ಈ ನಾಲ್ಕು ವಿಭಾಗಗಳಿಂದ ಸಮಾನ ರೀತಿಯ ಆಸಕ್ತಿ ಮತ್ತು ಪ್ರೋತ್ಸಾಹ ಸಿಕ್ಕಿದಾಗ ಶಿಕ್ಷಣ ಸಂಸ್ಥೆಯು ಸದೃಢವಾಗುತ್ತದೆ” ಎಂದರು.

ಸಭೆಯಲ್ಲಿ ಹಿಂದಿನ ವರ್ಷದ ಆಯವ್ಯಯ ಹಾಗೂ 2024-25 ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಬಹುದಾದ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ದೇವಿಚರಣ್ರೈ, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು ಪ್ರಾಂಶುಪಾಲರಾದ ಮಹೇಶ ನಿಟಿಲಾಪುರ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಾರ್ಥಿಸಿ, ಉಪನ್ಯಾಸಕಿ ದಿವ್ಯಾ ಕೆ ನಿರೂಪಿಸಿ, ವಂದಿಸಿದರು.