ರಾಮಕುಂಜ: ಕಡಬ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣವೊಂದನ್ನು ಪತ್ತೆ ಮಾಡಿರುವ ಪೊಲೀಸರು ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ್ದ ಪಿಕ್‌ಅಪ್ ವಾಹನ ವಶಪಡಿಸಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಕೊಯಿಲ ಶಾಖೆಪುರ ಕಡೆಯಿಂದ ಪಿಕ್‌ಅಪ್ ವಾಹನದಲ್ಲಿ ಎರಡು ಹೋರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸರು ವಾಹನವನ್ನು ಕೊಯಿಲದಲ್ಲಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ರಾಮಕುಂಜ ಗ್ರಾಮದ ನೀರಾಜೆ ನಿವಾಸಿಗಳಾದ ಸಿರಾಜ್ ಹಾಗೂ ಆತನ ಸಹೋದರ ಜಾಬಿರ್ ಎಂಬವರು ಪರಾರಿಯಾಗಿದ್ದಾರೆ. ಈ ಹೋರಿಗಳನ್ನು ಸಿರಾಜ್ ಮನೆಯಲ್ಲಿ ನಡೆಯುವ ಅಕ್ರಮ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಕಡಬ ಎಸ್.ಐ ಅಭಿನಂದನ್ ಅವರ ನಿರ್ದೇಶನದಲ್ಲಿ ಹೆಡ್‌ಕಾನ್‌ಸ್ಟೇಬಲ್ ಹರೀಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಪಿಕ್‌ಅಪ್ ವಾಹನ ಹಾಗೂ ಹೋರಿಗಳನ್ನು ವಶಪಡಿಸಿಕೊಂಡಿರುವ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.