ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಶೀಘ್ರದಲ್ಲೇ ಹೆಚ್ಚಳ -ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆಗೆ ಸಚಿವರ ಉತ್ತರ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಬಂದಿದ್ದು, ಶೀಘ್ರವೇ ಹೆಚ್ಚಳ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ವಿಧಾನಸಭೆಯಲ್ಲಿ ತಿಳಿಸಿದರು.

ಬುಧವಾರ ಪ್ರಶೋತ್ತರ ಕಲಾಪದ ವೇಳೆ ಸುಳ್ಯ ಶಾಸಕಿ  ಭಾಗೀರಥಿ ಮುರಳ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳ ಮಾಡಿದ್ದರು. ಆದಾದ ಮೇಲೇ ಗೌರವ ಧನ ಹೆಚ್ಚಳವನ್ನೇ ಮಾಡಿಲ್ಲ; ಈಗ ಗೌರವ ಧನ ಹೆಚ್ಚಳದ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಬಾಡಿಗೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಸಾಲಿನ ಬಾಡಿಗೆ ಪಾವತಿಗೆ ಅನುದಾನದ ಕೊರತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಹೇಳಿದರು.

ಬಸವನಗುಡಿ ಶಾಸಕ ಎಲ್. ಎ. ರವಿ ಸುಬ್ರಹ್ಮಣ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ 2024-25ನೇ ಸಾಲಿನ ಡಿಸೆಂಬರ್ ತಿಂಗಳವರೆಗೆ ಅಂಗನವಾಡಿ ಕೇಂದ್ರಗಳ ಬಾಡಿಗೆ ಮೊತ್ತವನ್ನು ಪಾವತಿಸಲಾಗಿದೆ ಎಂದರು.

ಅಂಗನವಾಡಿ ಕೇಂದ್ರಗಳ ಮಕ್ಕಳು, ಇತರೆ ಫಲಾನುಭವಿಗಳು ಇಲಾಖೆಯ ಯಾವುದೇ ಸೇವೆಗಳಿಂದ ವಂಚಿತರಾಗದಂತೆ ಕ್ರಮ ವಹಿಸಲಾಗಿದೆ. ಸ್ವಂತ ಕಟ್ಟಡಗಳಿಲ್ಲದ ಪ್ರದೇಶದಲ್ಲಿ ಅಂಗನವಾಡಿಗಳನ್ನು ಬಿಬಿಎಂಪಿ, ಇನ್ನಿತರ ಸರ್ಕಾರಿ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ; ಕೆಲವೆಡೆ ಉತ್ತಮ ಮೂಲ ಸೌಕರ್ಯವುಳ್ಳ ಬಾಡಿಗೆ ಕಟ್ಟಡಗಳಲ್ಲೂ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ರಾಜ್ಯದಲ್ಲಿ 20,266 ಲಿಂಗತ್ವ ಅಲ್ಪಸಂಖ್ಯಾತರು
ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರಮಾಣದ ಬಗ್ಗೆ ಮೂಡಿಗೆರೆಯ ಆಡಳಿತ ಪಕ್ಷದ ಸದಸ್ಯೆ ನಯನಾ ಮೋಟಮ್ಮ ಅವರು ಕೇಳಿದ ಉಪ ಪ್ರಶ್ನೆಗೆ ಉತ್ತರಿಸಿದ ಸಚಿವರು, 2011ರ ಜನಗಣತಿಯ ಪ್ರಕಾರ, ರಾಜ್ಯದಲ್ಲಿ 20,266 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಇನ್ನು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳಿಂದ ಪಡೆದ ಅಂಕಿ ಅಂಶಗಳ ಪ್ರಕಾರ 43,752 C ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here