ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿ ಪ್ರತಿ ವರ್ಷ ಸರಕಾರದಿಂದ ಹಿಂದಿನ ವರ್ಷದ ಪ್ರಗತಿಗೆ ಅನುಗುಣವಾಗಿ ಗುರಿಯನ್ನು ನಿಗದಿಪಡಿಸುತ್ತದೆ, ಅದರಂತೆ 2023-24ರಲ್ಲಿ ಪುತ್ತೂರು ತಾಲೂಕಿಗೆ 1,69,239 ಮಾನವ ದಿನ ಸೃಜನೆಯ ಗುರಿಯನ್ನು ನೀಡಲಾಗಿತ್ತು.2024ರ ಮಾರ್ಚ್ ಅಂತ್ಯಕ್ಕೆ 1,67,999 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.99 ಗುರಿಯನ್ನು ಸಾಧಿಸಿದೆ. ಅದರಲ್ಲೂ ಪುರುಷರಿಗೆ ಹಾಗೂ ಮಹಿಳೆಯರಿಗೆ ಸಮಾನ ವೇತನ ದೊರೆಯುತ್ತಿದ್ದು ಶೇ.57.75 ಮಹಿಳಾ ಭಾಗವಹಿಸುವಿಕೆ ಪ್ರಮಾಣದಲ್ಲಿ ಈ ಬಾರಿ ಹೆಚ್ಚಳ ಕಂಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಾರ್ಮಿಕರಿಗೆ ನೂರು ದಿನಗಳ ಕೂಲಿ ನೀಡುವುದನ್ನು ಖಾತ್ರಿಪಡಿಸುದರ ಜೊತೆಗೆ ಸಮುದಾಯಕ್ಕೆ ಹಾಗೂ ವೈಯಕ್ತಿಕ ಅರ್ಹ ಫಲಾನುಭವಿಗಳಿಗೆ ದೀರ್ಘ ಕಾಲಿಕ ಆಸ್ತಿಗಳನ್ನು ಸೃಜಿಸುವ ಆಶಯವನ್ನು ಈ ಯೋಜನೆ ಹೊಂದಿದೆ. ಪ್ರಸಕ್ತ ವರ್ಷ ಪ್ರತಿ ದಿನಕ್ಕೆ ಯೋಜನೆಯಡಿ 349 ರೂ. ಕೂಲಿ ಜೊತೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ವೇತನ ದೊರೆಯುತ್ತದೆ. ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‌ಗಳ ಪೈಕಿ ಹಿರೇಬಂಡಾಡಿ 16230, ನರಿಮೊಗ್ರು 13777, ಆರ್ಯಾಪು 12044, ಬಜತ್ತೂರು 11013, ನೆಟ್ಟಣಿಗೆ ಮುಡ್ನೂರು 9547, ಅರಿಯಡ್ಕ 9128, ಕೋಡಿಂಬಾಡಿ 8824, ಮುಂಡೂರು 8064, ಬಲ್ನಾಡು 7844, ಬೆಟ್ಟಂಪಾಡಿ 7658, ಉಪ್ಪಿನಂಗಡಿ 6499, ಬಡಗನ್ನೂರು 6302, ಕೆಯ್ಯೂರು 6116, ಒಳಮೊಗ್ರು 5964, ಕೆದಂಬಾಡಿ 5624, ಬನ್ನೂರು 5427, ಕೊಳ್ತಿಗೆ 5316, ನಿಡ್ಪಳ್ಳಿ 5304, ಕಬಕ 5111, ಪಾಣಾಜೆ 4321, ಕೊಡಿಪ್ಪಾಡಿ 4216, 34 ನೆಕ್ಕಿಲಾಡಿ ಗ್ರಾ.ಪಂ. 3670 ಮಾನವ ದಿನಗಳನ್ನು ಸೃಜಿಸಿದೆ.
ಒಟ್ಟು ವೈಯಕ್ತಿಕ ಕಾಮಗಾರಿಗಳು
ಕಳೆದ ಆರ್ಥಿಕ ವರ್ಷದಲ್ಲಿ ಹೈನುಗಾರರಿಗೆ ಜೈವಿಕ ಅನಿಲ ಘಟಕ (ಬಯೋಗ್ಯಾಸ್) ರಚನೆಗೆ ಅವಕಾಶ ಕಲ್ಪಿಸಿತ್ತು. ಈ ಪೈಕಿ 15 ಬಯೋ ಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದೆ. 159 ದನದ ಹಟ್ಟಿ ನಿರ್ಮಾಣ, 18 ಗೊಬ್ಬರದ ಗುಂಡಿ, 4 ಕೃಷಿ ಹೊಂಡ, 10 ಆಡು ಶೆಡ್, 5 ಹಂದಿ ಶೆಡ್, 27 ಕೋಳಿ ಶೆಡ್, 242 ಬಚ್ಚಲು ಗುಂಡಿ ನಿರ್ಮಾಣ, 233 ವಸತಿ ಯೋಜನೆಯ ಮನೆಗಳಿಗೆ ಕೂಲಿ, 73 ಮನೆಗಳಿಗೆ ಶೌಚಾಲಯ ನಿರ್ಮಾಣ, 85 ಬಾವಿ ನಿರ್ಮಾಣ, 829 ತೋಟಗಾರಿಕೆ ಕಾಮಗಾರಿಗಳು, 47 ತೋಟಕ್ಕೆ ಬಸಿ ಕಾಲುವೆ ನಿರ್ಮಾಣಗಳಿಗೆ ಆರ್ಥಿಕವಾಗಿ ಸಹಕಾರವನ್ನು ನೀಡಿದೆ. ಈ ಮೂಲಕ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ಯೋಜನೆ ತಲುಪಲು ಸಾಧ್ಯವಾಗಿದೆ.
ಸಮುದಾಯ ಕಾಮಗಾರಿಗಳ ಅನುಷ್ಟಾನ
ನರೇಗಾ ಯೋಜನೆಯಡಿ 5 ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದಡಿ 5 ಲಕ್ಷ ರೂ. ಒಗ್ಗೂಡಿಸುವಿಕೆಯಲ್ಲಿ ಹಿರೇಬಂಡಾಡಿ, ಆರ್ಯಾಪು, ಪಾಣಾಜೆ, 34 ನೆಕ್ಕಿಲಾಡಿ, ಒಳಮೊಗ್ರು ಗ್ರಾ.ಪಂ. ಗಳಲ್ಲಿನ ಶಿಥಿಲಗೊಂಡ ಅಂಗನವಾಡಿಗಳಿಗೆ ಹೊಸ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ.ಸಮಗ್ರ ಶಾಲಾಭಿವೃದ್ಧಿ ಕಾರ್ಯಕ್ರಮದಡಿ 4 ಶಾಲೆಗಳಿಗೆ ಆವರಣಗೋಡೆ ನಿರ್ಮಾಣ, 18 ಶಾಲೆಗಳಿಗೆ ಶೌಚಾಲಯ, 2 ಶಾಲಾ ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗಿದೆ. 4 ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಒಗ್ಗೂಡಿಸುವಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗೋಮಾಳ, ಗ್ರಾ.ಪಂ. ಮೀಸಲಿಟ್ಟ ಜಮೀನಿನಲ್ಲಿ ಗಿಡನೆಡುವುದು, ಮಳೆ ನೀರು ಶೇಖರಣೆಗೆ ಇಂಗುಗುಂಡಿ ನಿರ್ಮಾಣ, ಸಾರ್ವಜನಿಕ ಬಾವಿ ರಚನೆ, ಕಾಂಕ್ರೀಟ್ ರಸ್ತೆ ನಿರ್ಮಾಣ, ಸಂಜೀವಿನಿ ಒಕ್ಕೂಟದವರಿಗಾಗಿ ಎನ್ ಆರ್ ಎಲ್ ಎಂ ವರ್ಕ್ ಶೆಡ್ ನಿರ್ಮಾಣ, ಸಮುದಾಯ ಬಚ್ಚಲು ಗುಂಡಿ, ಜಲಮರುಪೂರಣ ಘಟಕ, ಮಳೆ ನೀರು ಕೊಯ್ಲು, ಸ್ಮಶಾನ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ ರಸ್ತೆ ಬದಿ ನೆಡುತೋಪು ರಚಿಸಲಾಗಿದೆ.
ಪ್ರತಿ ವರ್ಷ ಗುರಿ ಮೀರಿದ ಸಾಧನೆ
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತಾಲೂಕು ಪ್ರತಿ ವರ್ಷ ಗುರಿ ಮೀರಿದ ಸಾಧನೆಯನ್ನು ಮಾಡುತ್ತಿದೆ. ಈ ವರ್ಷ ನರೇಗಾ ಯೋಜನೆಯಡಿ ಅರ್ಹ ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ವರೆಗಿನ ಆಸ್ತಿಗಳನ್ನು ಸೃಜಿಸಲು ಅವಕಾಶ ಕಲ್ಪಿಸಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಪಶುಸಂಗೋಪನೆ, ತೋಟಗಾರಿಕೆ ಹೀಗೆ ದುರ್ಬಲ ವರ್ಗದವರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ವೈಯಕ್ತಿಕವಾಗಿ ಹೊಸದಾಗಿ ಬಾವಿ ನಿರ್ಮಾಣಕ್ಕೆ ಸುಮಾರು 1.5 ಲಕ್ಷ. ರೂ. ವರೆಗೆ ಅನುದಾನ ನೀಡಲಾಗುತ್ತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಮ್ಮ ಜಮೀನಿನಲ್ಲಿ, ತಾವು ಕುಶಲ ಕೆಲಸ ನಿರ್ವಹಿಸಿದರೆ ಯೋಜನೆ ಮೂಲಕ ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ.
ನವೀನ್ ಕುಮಾರ್ ಭಂಡಾರಿ,
ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಪುತ್ತೂರು
ಬಡಜನರ ಆರ್ಥಿಕ ಮಟ್ಟ ಹೆಚ್ಚಿಸುವಲ್ಲಿ ನರೇಗ ಪಾತ್ರ
ಪುತ್ತೂರು ತಾಲೂಕಿನಲ್ಲಿ ನರೇಗಾ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡು, ತೆರೆದ ಬಾವಿ, ಜಲಸಂರಕ್ಷಣಾ ಇಂಗುಗುಂಡಿ, ಬಚ್ಚಲು ಗುಂಡಿ, ಕೊಳವೆ ಬಾವಿಗಳಿಗೆ ಮರುಪೂರಣಾ ಘಟಕ, ಮುಂತಾದ ಕಾಮಗಾರಿಗಳನ್ನು ಅಭಿಯಾನ ರೂಪದಲ್ಲಿ ಹಮ್ಮಿಕೊಂಡು ಈ ವರ್ಷ ಕೂಡಾ ಗುರಿಮೀರಿದ ಸಾಧನೆ ಮಾಡಲಿದ್ದೇವೆ. ಪ್ರಸ್ತುತ ಕೊಳವೆ ಬಾವಿ ಮರುಪೂರಣಾ ಘಟಕಗಳಿಗೆ ರೂ.45ಸಾವಿರ ಘಟಕ ವೆಚ್ಚವಿದ್ದು, ಎಲ್ಲಾ ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಒಟ್ಟಾರೆಯಾಗಿ ನರೇಗಾ ಯೋಜನೆಯು ಬಡ ಜನರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ.
ಶೈಲಜ ಎ., ಸಹಾಯಕ ನಿರ್ದೇಶಕರು (ಗ್ರಾ.ಉ.) ತಾಲೂಕು ಪಂಚಾಯತ್ ಪುತ್ತೂರು