ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಹಣತೆ ಬೆಳಗಿ ಯೋಧರಿಗಾಗಿ ಪ್ರಾರ್ಥನೆ-ಅಂಬಿಕಾ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ರೂಪಿಸಿರುವ ಕಿಲ್ಲೆ ಮೈದಾನದ ಮುಂಭಾಗದಲ್ಲಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಶುಕ್ರವಾರ ದೀಪ ಪ್ರಜ್ವಲನ ಕಾರ್ಯಕ್ರಮ ನಡೆಯಿತು.

ದೇಶದ ನಾಗರಿಕರ ರಕ್ಷಣೆಗಾಗಿ ಹಗಲಿರುಳೆನ್ನದೆ ಕರ್ತವ್ಯಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವ ಯೋಧರಿಗೆ ಶುಭವನ್ನು ಹಾರೈಸುತ್ತಾ, ದೇಶಕ್ಕಾಗಿ ಪ್ರಾಣಾರ್ಪಣೆಗೈದ ಯೋಧರಿಗೆ ನಮನಗಳನ್ನು ಸಲ್ಲಿಸಲಾಯಿತು.ಕೆಲವು ದಿನಗಳ ಹಿಂದೆಯಷ್ಟೇ ಕಾರ್ಗಿಲ್ ವಿಜಯದ ಇಪ್ಪತ್ತೈದನೆಯ ವರ್ಷಾಚರಣೆಯನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಿದ್ದಾಗ, ಆ ಕಾರ್ಯಕ್ರಮವದಲ್ಲಿ ಭಾಗವಹಿಸಿದ್ದ ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಯೋಧರಿಗಾಗಿ ದೇವರಲ್ಲಿ ನಿತ್ಯ ಪ್ರಾರ್ಥಿಸಿ, ದೀಪ ಬೆಳಗುವಂತೆ ಕರೆ ನೀಡಿದ್ದರು. ಅವರ ಮಾತನ್ನು ಪುರಸ್ಕರಿಸುವ ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತು.


ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾರಾಯಣ ಭಟ್(Rtd.Petty Officer (Radio) Indian Navy) ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ರೀತ್ ಅರ್ಪಿಸಿ ಗೌರವ ಸಲ್ಲಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ದೀಪ ಬೆಳಗಿ ಯೋಧರಿಗಾಗಿ ಪ್ರಾರ್ಥಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಭಟ್, ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಹೆತ್ತವರು, ಬೋಧಕ – ಬೋಧಕೇತರ ವೃಂದ, ವಿವಿಧ ವಿದ್ಯಾಸಂಸ್ಥೆಗಳಿಂದ ಆಗಮಿಸಿದ್ದ ವಿದ್ಯಾರ್ಥಿ – ವಿದ್ಯಾರ್ಥಿನಿಯರು, ಮಾಜಿ ಸೈನಿಕರು ದೀಪ ಬೆಳಗಿ ಯೋಧ ನಮನ ಸಲ್ಲಿಸಿದರು. ಪ್ರತಿಯೊಬ್ಬರೂ ತಾವು ಹಣತೆ ತಂದು ಅಮರ್ ಜವಾನ್ ಜ್ಯೋತಿ ಸ್ಮಾರಕದೆದುರು ಉರಿಸಿ ನಮಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ ಹಾಗೂ ಪುತ್ತೂರಿನ ಮಾಜಿ ಸೈನಿಕರ ಸಂಘದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ ಎಂಟು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಹಣತೆ ಬೆಳಗುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

LEAVE A REPLY

Please enter your comment!
Please enter your name here