@ ಸಿಶೇ ಕಜೆಮಾರ್
ಪುತ್ತೂರು: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ಗಾಳಿ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗುರುಳುತ್ತಿದ್ದು ಅಪಾರ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮಳೆ ಕಡಿಮೆಯಾದರೂ ಏಕಾಏಕಿ ಬೀಸುವ ಸುಂಟರಗಾಳಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕಳೆದ ಎರಡುಮೂರು ದಿನಗಳಿಂದ ಗಾಳಿಯ ಅಬ್ಬರ ಜಾಸ್ತಿಯಾಗಿದ್ದು ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದು ಹಾನಿಯುಂಟಾಗಿದೆ. ಮುಖ್ಯವಾಗಿ ಮರಗಳು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದಾಗ ಹಲವು ವಿದ್ಯುತ್ ಕಂಬಗಳು ತುಂಡಾಗಿ ಬೀಳುತ್ತವೆ. ಇದರಿಂದಾಗಿ ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಅಲ್ಲದೆ ಸಾರ್ವಜನಿಕರು ವಿದ್ಯುತ್ ಇಲ್ಲದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮರಗಳು ಮನೆ ಮೇಲೆ ಮುರಿದು ಬಿದ್ದಾಗ ಮನೆಗಳಿಗೆ ಹಾನಿಯಾಗುವುದಲ್ಲದೆ ಜೀವ ಹಾನಿ ಕೂಡ ಸಂಭವಿಸುತ್ತದೆ. ಈಗಾಗಲೇ ಕೆಯ್ಯೂರು, ಅರಿಯಡ್ಕ ಗ್ರಾಮದಲ್ಲಿ ಬೀಸಿದ ಸುಂಟರಗಾಳಿಯಿಂದಾಗಿ ಹಲವು ಕಡೆಗಳಲ್ಲಿ ಮನೆ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ. ಇದಲ್ಲದೆ ಕುಂಬ್ರ ಮೆಸ್ಕಾಂ ವ್ಯಾಪ್ತಿಯಲ್ಲಿ ಹಲವು ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮನೆಗಳಿಗೆ ಮರ ಬಿದ್ದು ಹಾನಿ, ಅಪಾರ ನಷ್ಟ
ಕೆಯ್ಯೂರು, ಕೆದಂಬಾಡಿ, ಅರಿಯಡ್ಕ, ಒಳಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಕೆಯ್ಯೂರು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 6 ಮನೆಗಳಿಗೆ ಹಾನಿಯಾಗಿದ್ದು ಇದರಲ್ಲಿ 1 ಮನೆಗೆ ಸಿಡಿಲು ಬಡಿದು ಹಾನಿಯಾದರೆ, 2 ಮನೆಗಳಿಗೆ ಮರ ಬಿದ್ದು ಉಳಿದಂತೆ 3 ಮನೆಗಳಿಗೆ ಇತರೆ ರೂಪದಲ್ಲಿ ಹಾನಿಯುಂಟಾಗಿದೆ. ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 12 ಮನೆಗಳಿಗೆ ಹಾನಿಯುಂಟಾಗಿದೆ. ಇದರಲ್ಲಿ 4 ಮನೆಗಳಿಗೆ ಮರ ಬಿದ್ದು ಹಾನಿಯುಂಟಾದರೆ, 8 ಮನೆಗಳಿಗೆ ಮಳೆಯಿಂದಾಗಿ ಹಾನಿಯುಂಟಾಗಿದೆ. ಕೆದಂಬಾಡಿ ಗ್ರಾಪಂ ವ್ಯಾಪ್ತಿಯಲ್ಲಿ 2 ಮನೆಗಳಿಗೆ ಮರ ಬಿದ್ದು ಹಾನಿಯುಂಟಾಗಿದೆ. ಉಳಿದಂತೆ 2 ಮನೆಗಳ ಕೌಂಪೌಂಡ್ ಕುಸಿತಗೊಂಡಿದೆ. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಇನ್ನು ಒಳಮೊಗ್ರು ಗ್ರಾಮದಲ್ಲಿ 1 ಮನೆ ಹಾಗೂ 1 ಕೊಟ್ಟಿಗೆಗೆ ಹಾನಿಯುಂಟಾಗಿದೆ ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಅಪಾರ ಕೃಷಿ ಹಾನಿ
ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಸುಂಟರಗಾಳಿಗೆ ಅಪಾರ ಕೃಷಿ ಹಾನಿ ಉಂಟಾಗಿದೆ. ಕೆಯ್ಯೂರು, ಒಳಮೊಗ್ರು ಹಾಗೂ ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೀಸಿದ ಸುಂಟರಗಾಳಿಗೆ ಇಲ್ಲಿನ ಹಲವು ರೈತರ ತೋಟಗಳಿಗೆ ಹಾನಿಯುಂಟಾಗಿದೆ. ಅಡಿಕೆ ಮರಗಳು ಧರೆಗುರುಳಿದ್ದು ತೆಂಗಿನ ಮರಗಳಿಗೂ ಹಾನಿಯುಂಟಾಗಿದೆ. ಬಾಳೆ, ಅಡಿಕೆ ಸೇರಿದಂತೆ ಅಪಾರ ಕೃಷಿ ಸಂಪತ್ತಿಗೆ ಹಾನಿಯಂಟಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಧರೆಗುರುಳಿದ ವಿದ್ಯುತ್ ಕಂಬಗಳು, ಮೆಸ್ಕಾಂಗೆ ಲಕ್ಷಾಂತರ ರೂ.ನಷ್ಟ
ಮರ ಬಿದ್ದರೆ ಮೊದಲ ಹಾನಿ ಉಂಟಾಗುವುದೆ ಮೆಸ್ಕಾಂ ಇಲಾಖೆಗೆ ಏಕೆಂದರೆ ಮರ ಬಿದ್ದರೆ ಮೊದಲು ಮುರಿದು ಬೀಳುವುದೇ ವಿದ್ಯುತ್ ಕಂಬಗಳಾಗಿವೆ. ಬಹಳಷ್ಟು ಕಡೆಗಳಲ್ಲಿ ಅರಣ್ಯ ಪ್ರದೇಶದೊಳಗೆ ಹಾಗೇ ಕೃಷಿ ತೋಟದೊಳಗೆ ವಿದ್ಯುತ್ ತಂತಿಗಳು ಹಾದು ಹೋಗಿರುವುದರಿಂದ ಮರ ಅಥವಾ ಅಡಿಕೆ ಮರ ಯಾವುದೇ ಆದರೂ ಮುರಿದು ಬಿದ್ದರೆ ವಿದ್ಯುತ್ ಕಂಬಗಳ ಮೇಲೆ ಬಿದ್ದು ಕಂಬಗಳು ತುಂಡಾಗುತ್ತವೆ. ಈಗಾಗಲೇ ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪ ವಿಭಾಗದಲ್ಲಿ ೭ ದಿನಗಳಲ್ಲಿ ೮೮ ವಿದ್ಯುತ್ ಕಂಬಗಳು ಮುರಿದಿದ್ದು ಸುಮಾರು 10 ಲಕ್ಷ ರೂ.ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
1 ವಾರ 88 ವಿದ್ಯುತ್ ಕಂಬ ಹಾನಿ- ಮೆಸ್ಕಾಂಗೆ 10 ಲಕ್ಷ ರೂ.ನಷ್ಟ
ಕಳೆದ ಶನಿವಾರದಿಂದ ಅಂದರೆ ಜು.20 ರಿಂದ ಜು.26ರವರೆಗೆ ಕುಂಬ್ರ, ಸವಣೂರು, ಬೆಟ್ಟಂಪಾಡಿ, ಈಶ್ವರಮಂಗಲ ಸೇರಿದಂತೆ ಮೆಸ್ಕಾಂ ಗ್ರಾಮಾಂತರ ಉಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 88 ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. ಹೆಚ್ಚಿನ ಎಲ್ಲಾ ವಿದ್ಯುತ್ ಕಂಬಗಳು ಮರ ಬಿದ್ದ ಪರಿಣಾಮ ತುಂಡಾಗಿವೆ. ಇದಲ್ಲದೆ 1 ಟ್ರಾನ್ಸ್‌ಫರ್ಮರ್ ಕೆಟ್ಟು ಹೋಗಿದೆ. ಒಟ್ಟು 10 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಎಇ ಶಿವಶಂಕರ್‌ರವರು ಮಾಹಿತಿ ನೀಡಿದ್ದಾರೆ.
ಮರಗಳ ಬಗ್ಗೆ ಎಚ್ಚರವಿರಲಿ…!
ರಸ್ತೆ ಬದಿ ಸೇರಿದಂತೆ ಮನೆ, ಕಟ್ಟಡ ಇತ್ಯಾದಿಗಳ ಸುತ್ತಮುತ್ತ ಇರುವ ಮರಗಳ ಬಗ್ಗೆ ಎಚ್ಚರವಿರಲಿ…ಅಪಾಯಕಾರಿ ಅಂತ ಅನ್ನಿಸಿದರೆ ತಕ್ಷಣವೇ ಮರವನ್ನು ತೆರವು ಮಾಡುವ ಕೆಲಸ ಮಾಡಿ. ಮರ ಯಾವಾಗ ಬೀಳುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ ಆದ್ದರಿಂದ ರಸ್ತೆ ಬದಿಯಾಗಿರಲಿ ಅಥವಾ ಎಲ್ಲಿಯೂ ಆಗಿರಲಿ ಅಪಾಯಕಾರಿ ಮರ ಅಂತ ಅನ್ನಿಸಿದರೆ ಕೂಡಲೇ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಅಥವಾ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ಕೊಡಿ.