ಪುತ್ತೂರು: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ಇಂಟರ್ ಕ್ಲಬ್ ಓಪನ್ ಮೆನ್ ಅಕ್ವೆಟಿಕ್ ವಿಭಾಗದ ಜೀವರಕ್ಷಕ ವಿಶ್ವ ಚಾಂಪಿಯನ್ ಗೆ ಭಾರತದ ಈಜು ತಂಡದ ಸದಸ್ಯರಾಗಿ ಆಯ್ಕೆಗೊಂಡ ಈಜು ಪಟು ತ್ರಿಶೂಲ್ ಗೌಡ ಅವರನ್ನು ಬನ್ನೂರು ಕೃಷ್ಣನಗರದ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮತ್ತು ಎವಿಜಿ ಟ್ರಸ್ಟ್ ವತಿಯಿಂದ ಸನ್ಮಾನಿಸಿ, ಆರ್ಥಿಕ ನೆರವು ನೀಡಲಾಯಿತು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಾಕ್ರಿ ಕುಟುಂಬದ ಸದಸ್ಯ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ತ್ರಿಶೂಲ್ ಗೌಡ ಅವರಿಗೆ ಆಸ್ಟ್ರೇಲಿಯಾದ ಜೀವ ರಕ್ಷಕ ಚಾಂಪಿಯನ್ ಶಿಪ್ ಗೆ ತೆರಳಲು ಆರ್ಥಿಕ ಅಡಚಣೆ ಉಂಟಾಗಿತ್ತು. ಈ ಕುರಿತು ಸುದ್ದಿ ಪತ್ರಿಕೆ, ವೆಬ್ ಸೈಟ್ ವರದಿ ಮಾಡಿತ್ತು. ಇದೀಗ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬನ್ನೂರು ಪುತ್ತೂರು, ಎವಿಜಿ ಟ್ರಸ್ಟ್ ನ ಪದಾಧಿಕಾರಿಗಳು ಜಂಟಿಯಾಗಿ ಸನ್ಮಾನಿಸಿ ಆರ್ಥಿಕ ಧನ ಸಹಾಯವನ್ನಿತ್ತು ಶುಭ ಹಾರೈಕೆಗಳೊಂದಿಗೆ ನಮ್ಮ ದೇಶದ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೆರಿಸಲಿ ಎಂದು ಹಾರೈಸಿ ಬೀಳ್ಕೊಡಲಾಯಿತು. ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ,ಸಂಚಾಲಕ ಎ.ವಿ. ನಾರಾಯಣ ರವರು, ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ ರವರು, ಉಪಾಧ್ಯಕ್ಷ ಉಮೇಶ್ ಗೌಡ ಮಲುವೇಳುರವರು ಹಾಗೂ ವಿಷ್ಣು ಮೂರ್ತಿ ದೇವಸ್ಥಾನ ಕುರಿಯ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಧುನರಿಯೂರು, ಸಂಸ್ಥೆಯ ಶಿಕ್ಷಕವೃಂದ, ಬೋಧಕೇತವೃಂದ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.