ಪುತ್ತೂರು: ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುಡಿಪಾಡಿ ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಇದರ ಎನ್.ಸಿ.ಸಿ. ಘಟಕ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ, 5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ, ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆ ಪುತ್ತೂರು ಇದರ ಎನ್.ಸಿ.ಸಿ. ಘಟಕ 91/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ, 41A/5 ಕರ್ನಾಟಕ ಎನ್.ಸಿ.ಸಿ. ನೌಕಾ ದಳ, 44/6 ಕರ್ನಾಟಕ ವಾಯುದಳ ಇವುಗಳ ಜಂಟಿ ಆಶ್ರಯದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವ, ವನಮಹೋತ್ಸವ ಮತ್ತು ಪೌಷ್ಠಿಕಾಂಶ ದಿನಗಳನ್ನು ಶಾಲೆಯ ಸಭಾಂಗಣದಲ್ಲಿ ಮತ್ತು ಶಾಲಾವರಣದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿ ಪುತ್ತೂರು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ನಿವೃತ ಯೋಧ ವಿಷ್ಣು ಪ್ರಸಾದ್ ತಮ್ಮ 16 ವರ್ಷ 2 ತಿಂಗಳಿನ ಸೇನೆಯ ಜೀವನ, ಶಿಸ್ತು, ಮತ್ತು ವಿವಿಧ ಪ್ರದೇಶಗಳ ಜೀವನಕ್ರಮದ ಬಗ್ಗೆ ತಿಳಿಸುತ್ತಾ ಸೇನೆಯು ‘ಒಂದುಗುಂಡು, ಒಬ್ಬ ವೈರಿ’ ಎಂಬ ದ್ಯೇಯದೊಂದಿಗೆ ಒಬ್ಬ ಸೈನಿಕ ತನ್ನನು ರಕ್ಷಿಸುವುದೊಂದಿಗೆ, ತನ್ನ ಎದುರಾಳಿಯ ಯೋಜನೆಗಳನ್ನು ನಿರ್ನಾಮ ಮಾಡುವ ಜೊತೆಯಾಗಿ ವೈರಿಯನ್ನು ಸದೆಬಡಿಯುವ ಮೂಲಕ ದೇಶವನ್ನು ರಕ್ಷಿಸುತ್ತಾರೆ. ಹಲವಾರು ಯುದ್ಧಗಳಲ್ಲಿ ದೇಶವು ಗೆಲುವು ಸಾಧಿಸಿದ್ದು, ಕಾರ್ಗಿಲ್ ಯುದ್ಧದ ಗೆಲುವು ಮತ್ತು ಪರಾಕ್ರಮವು ವಿಶ್ವದೆಲ್ಲೆಡೆ ಹರಡಲು ನಮ್ಮ ಸೈನ್ಯಧಿಕಾರಿಗಳು ಮತ್ತು ಯೋಧರು ತಮ್ಮ ಜೀವ ಲೆಕ್ಕಿಸದೆ ದೇಶಸೇವೆ ನೀಡಿರುತ್ತಾರೆ ಎಂದರು.
ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆ ಪುತ್ತೂರು ಇದರ 41A/5 ಕರ್ನಾಟಕ ಎನ್.ಸಿ.ಸಿ. ನೌಕಾದಳದ ಅಧಿಕಾರಿ ಕ್ಲೆಮೆಂಟ್ ಪಿಂಟೋ ಮಾತನಾಡಿ ಗಿಡ ಮರಗಳು ನಮಗೆ ಹಲವಾರು ಲಾಭಗಳು ನೀಡುತ್ತವೆ. ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ನ್ನು ಹೀರಿಕೊಂಡು ಆಮ್ಲಜನಕವನ್ನು ನಮಗೆ ನೀಡುತ್ತದೆ. ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ತರಲು ಮತ್ತು ನಮಗೆ ಉತ್ತಮ ಮಳೆ ಪಡೆಯಲು ಮರಗಿಡಗಳನ್ನು ನೆಟ್ಟು, ಬೆಳೆಸಿ ಪೋಷಿಸುವ ಜವಾಬ್ದಾರಿ ನಮ್ಮದಾಗಿದೆ. ಇಂದು ನಾವು ಈ ಶಾಲೆಯಲ್ಲಿ ಹಣ್ಣು ಹಂಪಲಿನ ಗಿಡಗಳನ್ನು ನೆಡುವಾಗ 2 ರೀತಿಯ ಲಾಭಗಳು ನಮಗೆ ದೊರೆಯುತ್ತವೆ. ಒಂದು ಹಣ್ಣುಗಳು ನಮಗೆ ತಿನ್ನಲು ಮತ್ತು ಉಸಿರಾಡಲು ಆಮ್ಲಜನಕವು ಪಡೆದುಕೊಳ್ಳುತ್ತೆವೆ ಎಂದರು.
ಗೌರವ ಅತಿಥಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಗೌರವಾಧ್ಯ ರಾಮಜೋಯಿಸ ಮಾತನಾಡಿ ನಾವೆಲ್ಲರೂ ಸೈನಿಕರು. ಹೇಗೆ ಗಡಿ ಕಾಯುವ ಸೈನಿಕ ತನ್ನ ಜವಾಬ್ದಾರಿಯನ್ನು ಅರಿತು ತನ್ನ ಕಾರ್ಯ ನಿಷ್ಠೆಯನ್ನು ಯಶಶ್ವಿಯಾಗಿ ನಿಭಾಯಿಸುತಾನೋ ಅದೇ ರೀತಿ ನಾವೆಲ್ಲರೂ ಸೈನಿಕರಂತೆ ನಮ್ಮ ಜವಾಬ್ದಾರಿಗಳನ್ನು ಅರಿತು ನಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ದಿನೇಶ್ ಗೌಡರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ನೆಟ್ಟ ಗಿಡಗಳನ್ನು ಪೋಷಿಸಿ ಬೆಳೆಸಬೇಕಾಗಿದೆ. ನಮ್ಮ ಸೈನಿಕರನ್ನು ನಾವು ಅತ್ಯಂತ ಗೌರವದಿಂದ ನೋಡಬೇಕು. ಸೈನ್ಯಕ್ಕೆ ಸೇರುವ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಬೇಕು. ಈ ರೀತಿ ನಮ್ಮ ದೇಶವನ್ನು ಬಲಿಷ್ಠ ದೇಶವನ್ನಾಗಿ ಮಾಡಲು ನಮ್ಮ ಸಹಕಾರ ಅತೀ ಮುಖ್ಯ. ಈ ಗ್ರಾಮದ ಕೆಲವರು ದೇಶದ ಸೈನಿಕರಾಗಿದ್ದಾರೆ ಅಂತೆಯೇ ನಿಮ್ಮಂಥ ವಿದ್ಯಾರ್ಥಿಗಳು ಸೇನೆಗೆ ಭರ್ತಿಗೊಳ್ಳುವ ಮೂಲಕ ನಮ್ಮ ಗ್ರಾಮಕ್ಕೆ ಮತ್ತು ಶಾಲೆಗೆ ಇನ್ನಷ್ಟು ಹೆಸರು ಬರಲಿ ಎಂದು ಹೇಳಿದರು.
ಕುಡಿಪಾಡಿ ಶಾಲೆಯ ಮುಖ್ಯೋಪಾಧ್ಯಾಯ ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ ವಿಶೇಷ ದಿನಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿ, ನಿವೃತ ಯೋಧ ವಿಷ್ಣು ಪ್ರಸಾದ್ ದೇಶಕ್ಕಾಗಿ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾ. ಜೋನ್ಸನ್ ಡೇವಿಡ್ ಸಿಕ್ವೇರಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢ ಶಾಲೆಯ ಎನ್.ಸಿ.ಸಿ. ಭೂದಳ ಅಧಿಕಾರಿ ನರೇಶ್ ಲೋಬೊ, ಎನ್.ಸಿ.ಸಿ. ವಾಯುದಳ ಅಧಿಕಾರಿ ರೋಶನ್ ಸಿಕ್ವೇರಾ ಉಪಸ್ಥಿತರಿದ್ದರು. ಕುಡಿಪಾಡಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದ್ಯಸರು ಮತ್ತು ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಾಮಾಜಿಕ ಅರಣ್ಯ ಇಲಾಖೆ ಪುತ್ತೂರಿನಿಂದ ವನಮಹೋತ್ಸವ ಕಾರ್ಯಕ್ರಮಕ್ಕೆ ಹಣ್ಣು ಹಂಪಲಿನ ಗಿಡಗಳನ್ನು ನೀಡಿದರು.ಗಿಡಗಳನ್ನು ಶಾಲೆಯ ಆವರಣದಲ್ಲಿ ಎನ್.ಸಿ.ಸಿ. ಕೆಡೆಟ್ಗಳು ಮತ್ತು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗಿಡಗಳನ್ನು ನೆಟ್ಟರು.ಶಾಲಾ ಶಿಕ್ಷಕ ಗಣೇಶ್ ಸ್ವಾಗತಿಸಿ, ಶಿಕ್ಷಕಿ ಅಶ್ವಿನಿ ವಂದಿಸಿದರು. ಶಿಕ್ಷಕಿ ಜಾನೆಟ್ ಸಿಕ್ವೇರಾ ಕಾರ್ಯಕ್ರಮವನ್ನು ನಿರೂಪಿಸಿದರು. ಕುಡಿಪಾಡಿ ಶಾಲೆಯ ವಿದ್ಯಾರ್ಥಿಗಳು, ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ಎನ್.ಸಿ.ಸಿ. ಭೂದಳ, ನೌಕಾದಳ, ವಾಯುದಳದ ಕೆಡೆಟ್ ಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.