ಪಡೀಲು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

0

ರೂ.33.83ಕೋಟಿ ವ್ಯವಹಾರ, ರೂ.24.01 ಲಕ್ಷ ಲಾಭ, ಶೇ.10ಡಿವಿಡೆಂಡ್

ಪುತ್ತೂರು:ಪಡೀಲು ಬಾಳಪ್ಪ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಪುತ್ತೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ರೂ.33.83 ಕೋಟಿ ವ್ಯವಹಾರ ಮಾಡಿ ರೂ.24.01 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಮಹಾಸಭೆಯು ಜು.27ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಂದರ ಪೂಜಾರಿ ಬಡಾವು, ವರದಿ ವರ್ಷದಲ್ಲಿ ಸಂಘವು 319 ಸದಸ್ಯರಿಂದ ರೂ. 5,54,292 ಪಾಲು ಬಂಡವಾಳ ಹೊಂದಿರುತ್ತದೆ. ರೂ.5,87,67,413.96 ವಿವಿಧ ರೂಪದ ಠೇವಣಿ, ರೂ.1,51,57,194.05 ಕ್ಷೇಮ ನಿಧಿ, ರೂ.25,000 ಇತರ ಸಹಕಾರಿ ಸಂಘದಲ್ಲಿ ಪಾಲು ಬಂಡವಾಳ ಹೊಂದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ರೂ.1,23,01,054, ಬಿ.ಸಿ ರೋಡ್ ಮೂರ್ತೆದಾರರ ಮಹಾಮಂಡಲದಲ್ಲಿ ರೂ.94,336, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಾಣಿ ಶಾಖೆಯಲ್ಲಿ ರೂ.5 ಲಕ್ಷ, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಕಬಕ ಶಾಖೆಯಲ್ಲಿ ರೂ.24,26,000 ಠೇವಣಿ ಹೂಡಿಕೆ ಮಾಡಲಾಗಿದೆ. ರೂ.7,65,55,065 ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಸಂಘವು ಒಟ್ಟು ರೂ.24,01,497.61 ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.


ಬಿ.ಸಿ ರೋಡ್ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಮೂರ್ತೆದಾರರ ಸೇವಾ ಸಹಕಾರಿ ಸಂಘವೂ ಬಲಿಷ್ಠವಾಗಿದ್ದು ಡಿಸಿಸಿ ಬ್ಯಾಂಕ್‌ಗಿಂತ ಹೆಚ್ಚು ಶಾಖೆ ತೆರಯುವಷ್ಟು ಶಕ್ತಿ ಬಿಲ್ಲವ ಸಮಾಜಕ್ಕಿದೆ. ಸಂಘದ ಶಾಖೆಗಳನ್ನು ಪ್ರಾರಂಭಿಸಿ ಸೇವೆಯ ಜೊತೆಗೆ ಉದ್ಯೋಗ ಸಮಾಜ ಬಾಂಧವರಿಗೆ ಉದ್ಯೋಗವನ್ನು ನೀಡಬೇಕು. ಸದಸ್ಯರೆಲ್ಲರೂ ಮಹಾಸಭೆಯಲ್ಲಿ ಭಾಗವಸಿ, ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.


ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಈ ಹಿಂದೆ ಸರಕಾರದಿಂದ ಶೇಂದಿ ಮಾರಾಟಕ್ಕೆ ಕಾದಿರಿಸಿದ್ದ ಜಾಗವನ್ನು ಮೂರ್ತೆದಾರರ ಸಹಕಾರಿ ಸಂಘಕ್ಕೆ ಮಂಜೂರುಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಮೂರ್ತೆದಾರರ ಸಹಕಾರ ಸಂಘಗಳನ್ನು ಒಗ್ಗೂಡಿಸಿಕೊಂಡಿ ಸಂಘಟಿತ ಸಾಮೂಹಿಕ ಹೋರಾಟ ನಡೆಸಬೇಕು ಎಂದರು. ಬಿ.ಸಿ. ರೋಡ್ ಮೂರ್ತೆದಾರರ ಮಹಾಮಂಡಲದ ನಿರ್ದೇಶಕ ಆರ್.ಸಿ ನಾರಾಯಣ ಮಾತನಾಡಿ, ಸಮಾಜ ಬಾಂಧವರ ಮೂಲಕ ಸಹಕಾರಿ ಸಂಘವು ವ್ಯವಸ್ಥಿತವಾಗಿ ಮುಂದುವರಿಯುತ್ತದೆ. ಸದಸ್ಯರ ಸಲಹೆಗಳ ಮೂಲಕ ಆಡಳಿತ ಮಂಡಳಿಯಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಲಿ ಮಹಾಸಭೆ ಸಹಕಾರಿಯಾಗಲಿದೆ. ನಮ್ಮ ಸಮಾಜದ ಮೇಲಿನ ವಿಶ್ವಾಸದಿಂದ ಸಂಘದಲ್ಲಿ ಠೇವಣಿಯಿಡುತ್ತಿದ್ದಾರೆ ಎಂದರು.


ಅಧ್ಯಕ್ಷ ಸುಂದರ ಪೂಜಾರಿ ಬಡಾವು ಮಾತನಾಡಿ, ನಮ್ಮ ಸಹಕಾರಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಹಲವು ವರ್ಷಗಳ ಆಶೆಯಿದೆ. ಇದಕ್ಕಾಗಿ ಕಳೆದ 10 ವರ್ಷಗಳಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೆ ಕಾನೂನಿನ ತೊಡಕಿಂದಾಗಿ ಸರಕಾರದಿಂದ ಜಾಗ ಮಂಜೂರಾಗದೇ ಇರುವುದರಿಂದ ನಮ್ಮ ಪ್ರಯತ್ನ ಈಡೇರಿಲ್ಲ. ಇನ್ನು ಸರಕಾರದಿಂದ ಜಾಗ ಮಂಜೂರಾಗದೇ ಇದ್ದರೂ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ಸದಸ್ಯರ ಸಹಕಾರ ಅಗತ್ಯ. ಮಹಾಸಭೆಯು ಅನುಮೋದನೆ ನೀಡಬೇಕು. ಜಾಗ ಖರೀದಿಸಿದ ಬಳಿಕ ಹಂತ ಹಂತವಾಗಿ ಕಟ್ಟಡ ನಿರ್ಮಿಸಲಾಗುವುದು. ನಂತರ ಶಾಖೆ ತೆರೆಯಲಾಗುವುದು. ನಮ್ಮ ಈಗಿನ ಆಡಳಿತ ಮಂಡಳಿಗೆ ಇನ್ನೂ ನಾಲ್ಕು ವರ್ಷಗಳ ಅವಧಿಯಿದ್ದು ಸ್ವಂತ ಕಟ್ಟಡ ನಿರ್ಮಾಣ ಹಾಗೂ ಶಾಖೆ ತೆರೆಯಲಾಗುವುದು ಎಂದರು.


ಸನ್ಮಾನ:
ಸಂಘದ ಪ್ರಾರಂಭ ಹಾಗೂ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಈಶ್ವರ ಪೂಜಾರಿ ಕಡೆಶೀವಾಲಯರವರನ್ನು ಸನ್ಮಾನಿಸಲಾಯಿತು. ಹಿರಿಯ ಮೂರ್ತೆದಾರರಾದ ಸಂಕಪ್ಪ ಪೂಜಾರಿ ಮುರ ಹಾಗೂ ಡೊಂಬಯ್ಯ ಪೂಜಾರಿ ಕೊಡಿಪ್ಪಾಡಿಯವರನ್ನು ಗೌರವಿಸಲಾಯಿತು. ಪಿಗ್ಮಿ ಸಂಗ್ರಾಹಕರಾದ ಸತೀಶ್ ಆರ್., ಭಾಸ್ಕರ್ ಕೆ., ದಿನೇಶ್ ಕೆ., ಶಿವಪ್ರಸಾದ್ ಹಾಗೂ ಗಣೇಶ್ ಬಿ., ಭರತ್ ಹಾಗೂ ಶ್ರುತಿಯವರಿಗೆ ಆರ್ಥಿಕ ಧನ ಸಹಾಯ ನೀಡಿ ಗೌರವಿಸಲಾಯಿತು.


ಉಪಾಧ್ಯಕ್ಷ ಬಿ.ಕೆ.ಆನಂದ ಸುವರ್ಣ ಬಪ್ಪಳಿಗೆ, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಶಯನಾ ಜಯಾನಂದ ಕೋಡಿಂಬಾಡಿ, ಜಯಲಕ್ಷ್ಮಿ ಸುರೇಶ್ ಕೇಪುಳು, ಜಿನ್ನಪ್ಪ ಪೂಜಾರಿ ಮುರ, ಉಮೇಶ್ ಪೂಜಾರಿ ರಾಗಿದಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಅಣ್ಣಿ ಪೂಜಾರಿ ಹಾಗೂ ಕೇಶವ ಪೆಲತ್ತಡಿ ಸಲಹೆ, ಸೂಚನೆಗಳನ್ನು ನೀಡಿದರು.
ಪಿಗ್ಮಿ ಸಂಗ್ರಾಹಕ ದಿನೇಶ್ ಕೆ. ಪ್ರಾರ್ಥಿಸಿದರು. ನಿರ್ದೇಶಕರಾದ ಪದ್ಮಪ್ಪ ಪೂಜಾರಿ ಮತಾವು, ಚಂದಪ್ಪ ಪೂಜಾರಿ ಕಾಡ್ಲ ಸ್ವಾಗತಿಸಿ, ಗೋಪಾಲಕೃಷ್ಣ ಸುವರ್ಣ ಗೆಣಸಿನಕುಮೇರು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಎ. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಪಿಗ್ಮಿ ಸಂಗ್ರಾಹಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಆದರ್ಶ, ಸವಿತಾ ಹಾಗೂ ಶ್ರುತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು.

LEAVE A REPLY

Please enter your comment!
Please enter your name here