ಅವಿಭಜಿತ ದ.ಕ.ದಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆ ಯಶಸ್ವಿ ಮುಕ್ತಾಯ – ಆಗಸ್ಟ್‌ 16ರಂದು ಆಯಾ ಜಿಲ್ಲೆಗಳ ಸಂಯೋಜಕ ಉಸ್ತುವಾರಿಯಲ್ಲಿ ಪ್ರಾಯೋಗಿಕ ಪರೀಕ್ಷೆ

0

ಪುತ್ತೂರು: ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ ನಡೆದ ಎರಡು ದಿನಗಳ ಸಂಗೀತ, ನೃತ್ಯ ಹಾಗೂ
ತಾಳವಾದ್ಯ ಲಿಖಿತ ಪರೀಕ್ಷೆ ಭಾನುವಾರ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮಂಗಳೂರಿನ ಬಲ್ಮಠದ ಮಹಿಳಾ ಪದವಿ ಪೂರ್ವ ಕಾಲೇಜು, ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರಾಥಮಿಕ ಶಾಲೆ ಹಾಗೂ ಉಡುಪಿಯ ಅಜ್ಜರಕಾಡಿನ ಸರ್ಕಾರಿ ಮಹಿಳಾ
ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಪರೀಕ್ಷೆಗಳು ನಡೆಯಿತು.

ಶನಿವಾರ ಮಧ್ಯಾಹ್ನ ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ ಮತ್ತು ನೃತ್ಯ ಪರೀಕ್ಷೆ ನಡೆಯಿತು. ನಂತರ ಶ್ರವಣ ಜ್ಞಾನ/ದೃಶ್ಯ ಜ್ಞಾನ ಪರೀಕ್ಷೆಗಳು ನಡೆದವು. ಭಾನುವಾರ ಸೀನಿಯರ್‌ ವಿಭಾಗದ ಪರೀಕ್ಷೆಗಳು ನಡೆದಿವೆ. ಬೆಳಗ್ಗೆ ಹಾಡುಗಾರಿಕೆ, ವಾದ್ಯ ಸಂಗೀತ, ತಾಳವಾದ್ಯ ಮತ್ತು ನೃತ್ಯದ ಸೀನಿಯರ್‌, ವಿದ್ವತ್‌ ಪೂರ್ವ ಮತ್ತು ವಿದ್ವತ್‌ ಅಂತಿಮ ವಿಭಾಗದ ಶಾಸ್ತ್ರ-1 ಹಾಗೂ ಮಧ್ಯಾಹ್ನ 1.30ರಿಂದ ಶಾಸ್ತ್ರ-2 ಪರೀಕ್ಷೆಗಳು ನಡೆದಿವೆ. ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲದೆ ಪರೀಕ್ಷೆಗಳು ನೆರವೇರಿದೆ.

ಪುತ್ತೂರಿನಲ್ಲಿ ಶಾರದಾ ಕಲಾ ಕೇಂದ್ರ ಟ್ರಸ್ಟ್‌ ನೃತ್ಯಗುರು ವಿದ್ವಾನ್‌ ಸುದರ್ಶನ್‌ ಎಂ.ಎಲ್‌. ಭಟ್‌ ಹಾಗೂ ನೃತ್ಯೋಪಾಸನಾ ಕಲಾ ಅಕಾಡೆಮಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಇವರು ಪರೀಕ್ಷಾ ಸಂಯೋಜಕರಾಗಿದ್ದರು. ಮಂಗಳೂರಿನಲ್ಲಿ ಕೊಲ್ಯ ನಾಟ್ಯನಿಕೇತನದ ನೃತ್ಯಗುರು ವಿದುಷಿ ರಾಜಶ್ರೀ ಉಳ್ಳಾಲ್‌ ಹಾಗೂ ಸುರತ್ಕಲ್‌ ನಾಟ್ಯಾಂಜಲಿಯ ನೃತ್ಯಗುರು ವಿದ್ವಾನ್‌ ಚಂದ್ರಶೇಖರ ನಾವಡ, ಉಡುಪಿಯಲ್ಲಿ ನೃತ್ಯನಿಕೇತನ ಕೊಡವೂರಿನ ನೃತ್ಯಗುರು ವಿದ್ವಾನ್‌ ಸುಧೀರ್‌ ಕೊಡವೂರು ಮತ್ತು ವಿದ್ವಾನ್‌ ರಾಮಕೃಷ್ಣ ಕೊಡಂಜೆ ಪರೀಕ್ಷಾ ಉಸ್ತುವಾರಿ ವಹಿಸಿದ್ದರು.

ಪರೀಕ್ಷಾ ಕೇಂದ್ರ ಗೊಂದಲ:

ವಿಶ್ವವಿದ್ಯಾನಿಲಯ ಮೊದಲ ಬಾರಿಗೆ ಪರೀಕ್ಷೆ ಆಯೋಜನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಮಾಹಿತಿ ಇಲ್ಲದೆ ತೊಂದರೆ ಅನುಭವಿಸಿದರು.

ಪರೀಕ್ಷೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಧಾರ್‌ ವಿಳಾಸದ ಆಧಾರದಲ್ಲಿ ವಿವಿ ಪರೀಕ್ಷಾ ಕೇಂದ್ರಗಳನ್ನು ನಿಗದಿ ಪಡಿಸಿತ್ತು. ಪರೀಕ್ಷೆಗೆ ಎರಡು ದಿನ ಬಾಕಿ ಇರುವಾಗ ಹಾಲ್‌ ಟಿಕೆಟ್‌ ಲಭ್ಯವಾಗಿದ್ದು, ಕೊನೇ ಕ್ಷಣದಲ್ಲಿ ಇದು ಅರಿವಿಗೆ ಬಂದಿದೆ. ಇದರಿಂದ ಕೆಲವು ವಿದ್ಯಾರ್ಥಿಗಳು ತಮ್ಮ ವಾಸಸ್ಥಳ ಬಿಟ್ಟು ಬೇರೆ ಜಿಲ್ಲೆಗಳಿಗೆ ಅಥವಾ ಜಿಲ್ಲೆಯಲ್ಲೇ ದೂರದ ಇನ್ನೊಂದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಉಂಟಾಗಿತ್ತು.

ಆ.16ರಿಂದ ಪ್ರಾಯೋಗಿಕ ಪರೀಕ್ಷೆ:

ಆಗಸ್ಟ್‌ 16ರಿಂದ ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ ಹಾಗೂ ವಿದ್ವತ್‌ ಅಂತಿಮದ ಪ್ರಾಯೋಗಿಕ ಪರೀಕ್ಷೆಗಳು ಆಯಾ ಜಿಲ್ಲೆಗಳ ಸಂಯೋಜಕರ ಉಸ್ತುವಾರಿಯಲ್ಲಿ ನಡೆಯಲಿರುವುದಾಗಿ ವಿವಿ ಕುಲಪತಿ ಡಾ.ನಾಗೇಶ್‌ ಬೆಟ್ಟಕೋಟೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here