ಕೆಸರಲ್ಲಿ ಆಟವಾಡಿ ಸಂಭ್ರಮಿಸಿದ ಪುಟಾಣಿಗಳು, ಯುವಕ ಯುವತಿಯರು
ಪುತ್ತೂರು: ಬೆಟ್ಟಂಪಾಡಿ ಗೆಳೆಯರ ಬಳಗದ ಆಯೋಜನೆಯಲ್ಲಿ ಬೆಟ್ಟಂಪಾಡಿ ಗುತ್ತು ಮನೆಯ ಗದ್ದೆಯಲ್ಲಿ ಕೆಸರ್ದ ಗೊಬ್ಬುಲು ಕಾರ್ಯಕ್ರಮ ನಡೆಯಿತು. ಗುತ್ತಿನ ಮನೆಯ ಹಿರಿಯರಾದ ಚಂದ್ರಾವತಿ ಎಮ್. ರೈ ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯರಾದ ಪಾರ ಸುಬ್ಬಣ್ಣ ಗೌಡ ತೆಂಗಿನ ಕಾಯಿ ಒಡೆದು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಗುತ್ತು ಮನೆಯ ಹಿರಿಯರಾದ ಚಂದ್ರವಾತಿ ರೈ, ಗುತ್ತು ಮನೆಯವರು ಹಾಗೂ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ, ಮುಖ್ಯ ಅತಿಥಿಗಳಾದ ಭಾಸ್ಕರ ರೈ ಗುತ್ತು, ಸುಬ್ಬಣ್ಣ ಗೌಡ ಪಾರ, ಸಂಜೀವ ರೈ ಉಜಿರೋಡಿ, ದೇರಣ್ಣ ರೈ ತಲೆಪ್ಪಾಡಿ, ಶೇಷಪ್ಪ ರೈ ಮೂರ್ಕಾಜೆ, ಪ್ರಮೋದ್ ರೈ ಗುತ್ತು, ಜಗನ್ನಾಥ ರೈ ಕೊಮ್ಮಂಡ, ಅರುಣ್ ಪ್ರಕಾಶ್ ರೈ ಮದಕ, ಸದಾನಂದ ರೈ ಬಾಲ್ಯೊಟ್ಟು, ಕಿಶೋರ್ ಶೆಟ್ಟಿ ಕೋರ್ಮಂಡ, ಜಗನ್ನಾಥ್ ರೈ ಬೈಂಕ್ರೋಡು, ರಶ್ಮಿನಾಗೇಶ್ ರೈ ಮೂರ್ಕಾಜೆ, ಜಗದೀಶ ಗೌಡ ಪಾರ, ದಯಾನಂದ ಗೌಡ ಪಾರ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪವಿತ್ರಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿವಪ್ರಸಾದ್ ತಲೆಪ್ಪಾಡಿ ಸ್ವಾಗತಿಸಿ ಸಭಾ ಕಾರ್ಯಕ್ರಮ ನಿರ್ವಹಿಸಿದರು.
ಮನರಂಜಿಸಿದ ವಿವಿಧ ಸ್ಪರ್ಧೆಗಳು:
ಪುಟಾಣಿಗಳಿಗೆ, ಯುವಕ ಯುವತಿಯರಿಗೆ, ಮಹಿಳೆಯರಿಗೆ ಕೆಸರಿನ ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆದು ಎಲ್ಲರನ್ನೂ ಮನರಂಜಿಸಿತು. ಒಂದು ಕಾಲಿನ ಓಟ, ಗೂಟ ಸುತ್ತು ಓಟ, ಹಿಮ್ಮುಖ ಓಟ, ರೈಲು ಬಂಡಿ, ಹಾಳೆ ಎಳೆಯುವುದು, ಹಗ್ಗಜಗ್ಗಾಟ, ನಿಧಿ ಶೋಧ ಸ್ಪರ್ಧೆ ನಡೆಯಿತು. ಪುಟಾಣಿಗಳಿಂದ ಹಿರಿಯರವೆಗೂ ಎಲ್ಲರೂ ಕೆಸರಿನ ಸ್ಪರ್ಧೆಯಲ್ಲಿ ಭಾಗವಹಿಸಿ ಖುಷಿ ಪಟ್ಟರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಗುತ್ತು ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಯಿತು. ಗುತ್ತಿನ ಮನೆಯವರ ಪ್ರಾಯೋಜಕತ್ವದಲ್ಲಿ ಬೆಳಿಗ್ಗೆ ಲಘು ಉಪಾಹಾರ, ಮಧ್ಯಾಹ್ನ ಸಹಭೋಜನ ನಡೆಯಿತು. ದಯಾನಂದ ಗೌಡ ಪಾರರವರು ಬಹುಮಾನದ ಪ್ರಾಯೋಜಕತ್ವ ವಹಿಸಿದ್ದರು. ಇರ್ದೆ ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿಯರಾದ ಮಮತಾ, ಗೌತಮಿ, ಸೀತಾರಾಮ ಗೌಡ ಕಕ್ಕೂರು ತೀರ್ಪುಗಾರರಾಗಿ ಸಹಕರಿಸಿದರು. ಕುಂಬ್ರ ಕರ್ನಾಟಕ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಗೆಳೆಯರ ಬಳಗದ ಸದಸ್ಯರು ಸಹಕರಿಸಿದರು.
ಮೆರುಗು ತಂದ ಆಟಿ ಕಳೆಂಜ ಮತ್ತು ಪಾಡ್ದಾನ
ವೇದಿಕೆಯಲ್ಲಿ ಆಟಿ ಕಳೆಂಜ ಪ್ರದರ್ಶನ ಹಾಗೂ ಪಾಡ್ದಾನ ನಡೆದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಸ್ಥಳಿಯರಾದ ಬಾಬು ನಲಿಕೆ ತಂಡದವರಿಂದ ಆಟಿ ಕಳೆಂಜ ಪ್ರದರ್ಶನ ನಡೆಯಿತು. ಕೋರ್ಮಂಡ ಕಮಲರವರು ಗದ್ದೆ ನಾಟಿ ಸಂದರ್ಭದಲ್ಲಿ ಹಾಡುವ ಪಾಡ್ಡಾನ ಹಾಡಿದರು.