ಭತ್ತದ ಕೃಷಿಯ ಅರಿವು ಜೊತೆ ಬೆಳೆಸುವ ಕಾರ್ಯ ಮಕ್ಕಳಿಂದ ಸಾಧ್ಯ- ವಿಶ್ವನಾಥ ಎಸ್.ಪಿ.
ನಿಡ್ಪಳ್ಳಿ :ಗ್ರಾಮೀಣ ಪ್ರದೇಶದಲ್ಲಿ ಇಂದು ಕೂಡ ಅಲ್ಪ ಸ್ವಲ್ಪ ಭತ್ತದ ಕೃಷಿ ಉಳಿಯಲು ಹಿಂದಿನ ಆಚಾರ ವಿಚಾರಗಳು ಕಾರಣವಾಗಿದೆ.ಇಂದಿನ ಮಕ್ಕಳಿಗೆ ಭತ್ತದ ಕೃಷಿಯ ಅರಿವು ಜೊತೆ ಬೆಳೆಸುವ ಕಾರ್ಯ ತಿಳಿಸಿದಾಗ ಭತ್ತ ಕೃಷಿ ಕಡೆ ಒಲವು ಮೂಡಲು ಸಾಧ್ಯವಾಗಬಹುದು ಎಂದು ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಿ.ಇ.ಒ ವಿಶ್ವನಾಥ ಎಸ್. ಪಿ ಹೇಳಿದರು.
ಅವರು ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಸುಳ್ಯಪದವು ವಿಜಯ ಗ್ರಾಮೀಣ ಸಮಿತಿ ಮತ್ತು ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಜು.30 ರಂದು ಪ್ರಿಯದರ್ಶಿನಿ ಶಾಲೆಯಲ್ಲಿ ನಡೆದ ಭತ್ತ ಕೃಷಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಂಗನಾಥ ರೈ ಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿ ಪ್ರದಾನ ದೇಶದಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳಿಗೆ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡಿ ಅದನ್ನು ಉಳಿಸಿ ಬೆಳೆಸುವ ಕಾರ್ಯ ನಡೆಸುವ ನಿಟ್ಟಿನಲ್ಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಶುಭ ಹಾರೈಸಿದರು
ಪ್ರಗತಿಪರ ಭತ್ತ ಕೃಷಿಕ ಸಂಜೀವ ಪೂಜಾರಿ ಕಾನ ಭತ್ತದ ವಿವಿಧ ತಳಿಗಳು, ನಾಟಿಯ ವಿಧಾನ, ಅದರ ಬೆಳವಣಿಗೆ, ಪೋಷಕಾಂಶ ಮತ್ತು ಕಳೆ, ರೋಗಗಳ ನಿರ್ವಹಣೆ, ಉತ್ಪಾದನೆ ಪ್ರಮಾಣ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಸುಳ್ಯಪದವು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಗೋವಿಂದ ಭಟ್ ಪಿ ಮಾತನಾಡಿ ಅಭಿಯಾನ ಒಂದು ವಾರ ಕೇರಳ ಕರ್ನಾಟಕದ ಗಡಿ ಭಾಗದ 10 ಪ್ರೌಢ ಶಾಲೆಗಳ 500ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗೆ ನೇಜಿಗಳನ್ನು ವಿತರಿಸಿ ಮಕ್ಕಳು ಪೋಷಕರ ಸಹಾಯದೊಂದಿಗೆ ನಾಟಿ ಮಾಡಿ ಮನೆ ವಠಾರದಲ್ಲಿ ಭತ್ತ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡದ ಪ್ರಬಂಧಕ ಅನೂಪ್, ಶಾಲಾ ಮುಖ್ಯ ಶಿಕ್ಷಕ ರಾಜೇಶ್ ನೆಲ್ಲಿತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿ ರಕ್ಷಿತಾ ವಂದಿಸಿದರು. ಶಿಕ್ಷಕ ಪ್ರಶಾಂತ್.ಎ ಕಾರ್ಯಕ್ರಮ ನಿರೂಪಿಸಿದರು.ಶಾಲಾ ವಿದ್ಯಾರ್ಥಿಗಳು, ಸಹಶಿಕ್ಷಕಿಯರು ಪಾಲ್ಗೊಂಡರು.