ಸ್ಥಳಕ್ಕೆ ಅಧಿಕಾರಿಗಳು, ಗ್ರಾ.ಪಂ ಜನಪ್ರತಿನಿಧಿಗಳು ಭೇಟಿ, ಪರಿಶೀಲನೆ
ನೀರಿನ ತೊಟ್ಟಿಯನ್ನು ಮಣ್ಣು ಹಾಕಿ ಮುಚ್ಚಲು ಪಿಡಿಓ ಸೂಚನೆ
ಪುತ್ತೂರು: ಸೊರಕೆ-ಸರ್ವೆ ರಸ್ತೆಯ ಪರನೀರು ಎಂಬಲ್ಲಿ ರಸ್ತೆ ಬದಿಯಲ್ಲಿ ಇರುವ ನೀರಿನ ತೊಟ್ಟಿ ಅಪಾಯವನ್ನು ಆಹ್ವಾನಿಸುತ್ತಿದ್ದು ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆಯ ಕೆಲ ಭಾಗದಲ್ಲಿರುವ ತಮ್ಮ ಜಾಗದಲ್ಲಿ ಆನಂದ್ ರೈ ಸೂರಂಬೈಲು ಎಂಬವರು ಮಳೆ ನೀರು ಶೇಖರಣೆ ಮಾಡಲು ಹೊಂಡ ಮಾದರಿಯ ತೊಟ್ಟ ನಿರ್ಮಿಸಿದ್ದರು. ಇದೀಗ ಭಾರೀ ಮಳೆಯ ಹಿನ್ನೆಲೆಯಲ್ಲಿ ನೀರಿನ ತೊಟ್ಟಿಯ ಬದಿಯಿಂದ ಮಣ್ಣು ಕುಸಿತಗೊಂಡಿತ್ತಲ್ಲದೇ ರಸ್ತೆ ಕುಸಿತಗೊಳ್ಳುವ ಸಾಧ್ಯತೆಯೂ ಇತ್ತು. ಈ ಬಗ್ಗೆ ಮಾಹಿತಿ ತಿಳಿದ ಮುಂಡೂರು ಗ್ರಾಮ ಪಂಚಾಯತ್ ಪಿಡಿಒ ಅಜಿತ್ ಜಿ.ಕೆ, ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ, ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ, ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಪಾಯವನ್ನು ಆಹ್ವಾನಿಸುತ್ತಿರುವ ನೀರಿನ ತೊಟ್ಟಿಯನ್ನು ಮುಚ್ಚುವಂತೆ ಪಿಡಿಓ ಅಜಿತ್ ಜಿಕೆ ಅವರು ಸೂಚನೆ ನೀಡಿದ್ದಾರೆ. ಅದರಂತೆ ಮಣ್ಣು ಹಾಕಿ ನೀರಿನ ತೊಟ್ಟಿಯನ್ನು ಮುಚ್ಚುವುದಾಗಿ ಆನಂದ್ ರೈ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸವಣೂರು ಮೆಸ್ಕಾ ಸಿಬ್ಬಂದಿಗಳು, ಮುಂಡೂರು ಗ್ರಾ.ಪಂ ಸಿಬ್ಬಂದಿ ಕೊರಗಪ್ಪ, ಗ್ರಾಮ ಸಹಾಯಕ ಹರ್ಷಿತ್ ಉಪಸ್ಥಿತರಿದ್ದರು.