ಪುತ್ತೂರಮೂಲೆಯಲ್ಲಿ ಬೆದ್ರಾಳ ತೋಡಿಗೆ ಗುಡ್ಡೆ ಕುಸಿತ ! – ತೋಟಗಳು ಜಲಾವೃತ, ಅಪಾಯದಂಚಿನಲ್ಲಿ ಮನೆ

0

ತೋಟಗಳು ಜಲಾವೃತ – ಅಪಾಯದ ಅಂಚಿನಲ್ಲಿ ಮನೆ

ಪುತ್ತೂರು: ಪುತ್ತೂರು‌ ಪೇಟೆಯ ರಾಜಕಾಲುವೆ ಸಹಿತ ಹಲವು ಉಪ ತೋಡುಗಳ ಮಳೆ ನೀರು ಹರಿಯುವ  ಬೆದ್ರಾಳ ತೋಡಿಗೆ ಆ.3 ರ ನಸುಕಿನ ಜಾವ ಗುಡ್ಡೆ ಕುಸಿದು ಪಕ್ಕದ ಅಡಿಕೆ ತೋಟಗಳು ಜಲಾವೃತಗೊಂಡು ಮನೆಯೊಂದು ಅಪಾಯದ ಅಂಚಿನಲ್ಲಿದೆ.

ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು ಕೆಮ್ಮಿಂಜೆ ಬೈಲು ಎಂಬಲ್ಲಿ ಬೆದ್ರಾಳ ತೋಡಿಗೆ ಭಾರಿ ಪ್ರಮಾಣದ ಗುಡ್ಡೆಯ ಮಣ್ಣು ಕುಸಿದು ಬಿದ್ದು ತೋಡಿನ‌ಲ್ಲಿ ಮಳೆ ನೀರು ಹರಿಯುವಿಕೆಗೆ ಅಡ್ಡಿಯಾಗಿ ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ನೀರು ನುಗ್ಗಿ ತೋಟಗಳು ಜಲಾವೃತವಾಗಿದೆ. ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಇಂಜಿನಿಯರ್ ಸಚಿನ್, ಮುತ್ತು ಶೆಟ್ಟಿ ಸಹಿತ ಮೂರು  ಮಂದಿಯ ತೋಟಗಳು ಜಲಾವೃತಗೊಂಡಿದೆ. ತೋಡಿನ ಬದಿಯಲ್ಲಿರುವ ಯಶೋಧಾರ ಎಂಬವರ ಮನೆಯೂ ಅಪಾಯದಂಚಿನಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕೆ ನಗರಸಭಾ ಸದಸ್ಯ ಬಾಲಚಂದ್ರ , ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತು ನಗರಸಭೆ ಅಧಿಕಾರಿಗಳು‌ ತೆರಳಿದ್ದಾರೆ.

ಮಣ್ಣು ತೆರವು ಕಾರ್ಯ ಅಸಾಧ್ಯ !

ಭಾರಿ ಪ್ರಮಾಣದ ಗುಡ್ಡೆ ಕುಸಿದ ಪರಿಣಾಮ ಬೆದ್ರಾಳ ತೋಡು ಮುಚ್ಚಿ ಹೋಗಿದೆ. ತುಂಬಿ ಹರಿಯುವ ತೋಡಿನಲ್ಲಿ ಹರಿಯುವ ಮಳೆ ನೀರು ತನ್ನ ದಿಕ್ಕು ಬದಾಯಿಸಿ ಪಕ್ಕದ ತೋಟಗಳಿಗೆ ನುಗ್ಗಿ ನೀರು ಮೇಲೇರುತ್ತಿದೆ. ಇದರಿಂದಾಗಿ ಮನೆಗಳು ಕೂಡಾ ಅಪಾಯದಲ್ಲಿದೆ. ತೋಡಿಗೆ ಬಿದ್ದ ಮಣ್ಣು ತೆರವು ಮಾಡಲು ಜೆಸಿಬಿ ಹೋಗಲು ದಾರಿಯೂ ಇಲ್ಲ. ಮಾನವ ಶ್ರಮವೂ ಇಲ್ಲಿ ಅಸಾಧ್ಯದ ಪರಿಸ್ಥಿತಿಯಾಗಿದೆ. 

LEAVE A REPLY

Please enter your comment!
Please enter your name here