ಪರಿವಾರ ಬಂಟರ ಸಂಘ ಪುತ್ತೂರು ವಲಯದ ವತಿಯಿಂದ ಆಟಿಕೂಟ

0

ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಪ್ರವೀಣ್ ಕುಮಾರ್ ನಾಯ್ಕ್ ಮತ್ತು ವಿನೋದ ಪ್ರವೀಣ್ ಕುಮಾರ್ ನಾಯ್ಕ್ ರಾಧಾ ರೆಸಿಡೆನ್ಸಿ ಕೆಮ್ಮಾಯಿ ಇವರ ಸಹಕಾರದೊಂದಿಗೆ ಅ.4ರಂದು ಪುತ್ತೂರು ಪಡೀಲ್‌ನಲ್ಲಿರುವ ಎಂ.ಡಿ.ಎಸ್ ಟ್ರಿನಿಟಿ ಹಾಲ್‌ನಲ್ಲಿ ನಡೆಯಿತು.

ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪುತ್ತೂರು ಇದರ ಉಪಾಧ್ಯಕ್ಷ ಸುದರ್ಶನ್ ನಾಯ್ಕ್ ಕಂಪ ಸವಣೂರು ದೀಪ ಬೆಳಗಿಸಿ, ಕಳಸೆಯಲ್ಲಿ ತೆಂಗಿನ ಕೊರಳನ್ನು ಅರಳಿಸಿ, ಸಾಂಪ್ರದಾಯಿಕಾ ಕಾಯಿ ಕುಟ್ಟುವ ಆಟವನ್ನು ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತುಳುನಾಡಿನ ಶ್ರೀಮಂತ ಪರಂಪರೆಯಲ್ಲಿ ಬೆಳೆದ ಪರಿವಾರ ಬಂಟ ಸಮಾಜದ ಸಂಸ್ಕೃತಿ, ಪದ್ದತಿ,ಆಚಾರ,ವಿಚಾರ,ಆರಾಧನೆ,ನಂಬಿಕೆಗಳಿಗೆ ತನ್ನದೆ ಆದ ಇತಿಹಾಸವಿದೆ. ಇದು ಕಾಲಕ್ಕೆ,ಊರಿಗೆ ತಕ್ಕಂತೆ ಬದಲಾಗುತ್ತಿದೆ ಹಾಗಾಗಬಾರದು. ಇದನ್ನು ಪುಸ್ತಕ ರೂಪದಲ್ಲಿ ಕಾಪಿಡಬೇಕಾದ ಅಗತ್ಯವಿದೆ ಇದು ಮುಂದಿನ ಜನಾಂಗಕ್ಕೆ ಅತ್ಯಗತ್ಯ ಎಂದರು. ವಿಪರೀತ ಮಳೆಯ ಕಾರಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಟಿ ತಿಂಗಳಲ್ಲಿ ಮಾಡುವ ವಿವಿಧ ಖಾದ್ಯಗಳು, ಊರಿನ ಮಾರಿ ಕಳೆಯಲು ಬರುವ ಆಟಿ ಕಳೆಂಜ, ಹಿಂದಿನ ಜನಾಂಗಕ್ಕೂ ಇಂದಿನ ಯುವ ಪೀಳಿಗೆಗೂ ಇರುವ ವೆತ್ಯಾಸ, ಯಾವುದೇ ಕಷ್ಟವಿಲ್ಲದೆ ಬೆಳೆಯುತ್ತಿರುವ ಇಂದಿನ ಯುವ ಜನಾಂಗಕ್ಕೆ ಕೃಷಿ ಚಟುವಟಿಕೆಯ ಅರಿವೇ ಇಲ್ಲ. ಅಧುನಿಕ ತಂತ್ರಜ್ಙಾನದ ಹಿಂದೆ ಬಿದ್ದು ನಮ್ಮ ಪರಂಪರೆಯನ್ನೆ ಮರೆಯುತಿದ್ದಾರೆ. ಇದನ್ನು ಹಿರಿಯರು ತಿಳಿ ಹೇಳಿ ಸರಿ ಪಡಿಸಬೇಕೆಂದರು.

ಮುಖ್ಯ ಅಭ್ಯಾಗತರಾಗಿದ್ದ ಪರಿವಾರ ಬಂಟರ ಸಂಘ ಕೇಂದ್ರ ಸಮಿತಿ ಮತ್ತು ಪರಿವಾರ ಕ್ರ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಮಾತನಾಡಿ ಇಂತಹ ಆಚರಣೆಯಿಂದ ಸಮಾಜ ಬಾಂಧವರೆಲ್ಲ ಒಟ್ಟಾಗಲು ಸಾಧ್ಯ ಇಂತಹ ಇನ್ನಷ್ಟು ಉತ್ತಮ ಕಾರ್ಯಚಟುವಟಿಕೆಗಳನ್ನು ಮಾಡುತ್ತ ಮುನ್ನಡೆಯೊಣ ಎಂದರು.

ಪರಿವಾರ ಬಂಟರ ಸಂಘ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ನಾಯ್ಕ್ ಕೊಳಕ್ಕಿಮಾರ್ ಮಾತನಾಡಿ 1972 ರಲ್ಲಿ 600 ಜನರ ಸದಸ್ಯತನದೊಂದಿಗೆ ಪ್ರಾರಂಭವಾದ ಸಂಘ ಇಂದು ಸಾವಿರಾರು ಜನರ ಸೇರ್ಪಡೆಯೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಇಂದಿನ ಸಮಾರಂಭ ಯಶಸ್ವಿಯಾಗಲು ಕಳೆದ ಎರಡು ತಿಂಗಳಿನಿಂದ ಸಂಘದ ಸದಸ್ಯರು ಶ್ರಮಿಸುತಿದ್ದಾರೆ ಇಂತಹ ಒಗ್ಗಟ್ಟಿನಿಂದ ಎಂತಹ ಕಠಿಣ ಕೆಲಸವನ್ನಾದರೂ ಯಶಸ್ವಿಯಾಗಿ ನಿರ್ವಹಿಸಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ನಾವು ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗೇರಲು ಪ್ರಯತ್ನಿಸಬೇಕೆಂದರು. ಸಂಘದ ಕಾರ್ಯಚಟುವಟಿಕೆಗಳು ಮತ್ತು ಯೋಜನೆಗಳ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಕೋರಿದರು.

ಮುಖ್ಯ ಅತಿಥಿ ಸುಳ್ಯ ಸುದ್ದಿ ಬಿಡುಗಡೆಯ ವರದಿಗಾರರಾದ ಶಿವಪ್ರಸಾದ್ ನಾಯ್ಕ್ ಆಲೆಟ್ಟಿ ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಕಷ್ಟದ ತಿಂಗಳು ಬೇಸಾಯವೆ ಕಸುಬಾಗಿದ್ದ ಕಾಲ. ಆದಾಯಕ್ಕೆ ಬೇರೆ ಏನಿಲ್ಲ. ಕೃಷಿ ಕೆಲಸಗಳೆಲ್ಲ ಮುಗಿದು ವಿಪರೀತ ಮಳೆಗೆ ಹೊರಗೆ ಹೋಗಲಾಗದೆ ಮನೆಯಲ್ಲಿ ಶೇಕರಿಸಿಟ್ಟಿದ್ದ ದವಸ ಧಾನ್ಯಗಳನ್ನು ಜೋಪಾನವಾಗಿಟ್ಟು ಇತಿಮಿತಿಯಲ್ಲಿ ಉಪಯೋಗಿಸಿ ಹಿತ್ತಿಲಲ್ಲೇ ಸಿಗುತಿದ್ದ ಸೊಪ್ಪು ಗೆಡ್ಡೆ ಗೆಣಸುಗಳನ್ನು ತಿಂದು ನಮ್ಮ ಹಿರಿಯರು ಜೀವನ ನಡೆಸುತಿದ್ದರು. ಇಂದು ಅಂದಿನ ಕಷ್ಟ ಯಾರಿಗೂ ಇಲ್ಲ, ಆಟಿ ತಿಂಗಳಲ್ಲಿ ಮಾರಿ ಕಳೆಯಲು ಬರುವ ಆಟಿ ಕಳೆಂಜ ದೈವವಲ್ಲ ಎಂದರು.

ಇಂದಿನ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾದ ರಾಧಾ ರೆಸಿಡೆನ್ಸಿಯ ಪ್ರವೀಣ್ ಕುಮಾರ್ ನಾಯ್ಕ್ ಮಾತನಾಡಿ ಇಂತಹ ಕಾರ್ಯಕ್ರಮ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ. ನಮ್ಮ ಬಾಲ್ಯದ ದಿನಗಳಲ್ಲಿ ಕಷ್ಟವಿದ್ದರೂ ಅಂದಿನ ಖುಷಿ ಸಂಭ್ರಮ ಇಂದಿನ ಮಕ್ಕಳಿಗಿಲ್ಲ ಅದನ್ನು ಅನುಭವಿಸಿದ ನಾವೆ ಪುಣ್ಯವಂತರು ಎಂದರು. ಇಂದು ಯಾವುದೇ ಸಭೆ ಸಮಾರಂಭಗಳಿಗೂ ಕ್ಯಾಟರಿಂಗ್ ತಿಂಡಿ ತಿನಸುಗಳನ್ನೇ ನೆಚ್ಚಿಕೊಂಡಿರುವ ನಮಗೆ ಇಂದು ಗೃಹಿಣಿಯರು ಮನೆಯಲ್ಲೇ ಕಷ್ಟಪಟ್ಟು ಶುಚಿರುಚಿಯಾಗಿ ಮಾಡಿ ತಂದ ತಿನಿಸುಗಳನ್ನು ತಿನ್ನಲು ಖುಷಿಯಾಗುತ್ತದೆ ಎಂದರು.

ಆಟಿಯ ಮಹತ್ವ: ಆಟಿಯ ಅಮವಾಸ್ಯೆಯಂದು ಕುಡಿಯುವ ಹಾಲೆಮರದ ಕಷಾಯ, ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಆಟಿ ತಿಂಗಳಲ್ಲಿ ತವರಿಗೆ ಕಳುಹಿಸುವ ಉದ್ದೇಶ, ಸಂಪ್ರದಾಯ, ಅಂದಿನ ಆಹಾರ ಪದ್ದತಿ,ಕೂಡು ಕುಟುಂಬದಲ್ಲಿದ್ದ ಸಂತೃಪ್ತಿ ,ವಿವಿಧ ಕಷಾಯಗಳ ಮೂಲಕವೇ ಆರೋಗ್ಯವನ್ನು ಕಾಪಾಡುತ್ತಿದ್ದ ರೀತಿ, ನಮ್ಮನ್ನಗಲಿದ ಹಿರಿಯರನ್ನು ನೆನೆಸಲು ಮಾಡುವ ಆಟಿ ಅಗೇಲು ಕುಟುಂಬದ ಸದಸ್ಯರೆಲ್ಲ ಒಟ್ಟಾಗಿಸುವ ವೇದಿಕೆಯಾಗಿತ್ತು. ಇವೆಲ್ಲದರ ಬಗ್ಗೆ ಅರ್ಥ ಪೂರ್ಣವಾದ ವಿವರಣೆಯನ್ನು ಶಿಕ್ಷಕಿ ಅನಿತಾ ನಾಯ್ಕ್ ನೀಡಿದರು.

ಪರಿವಾರ ಬಂಟರ ಸಂಘ ಪುತ್ತೂರು ವಲಯದ ಅಧ್ಯಕ್ಷರಾದ ಸುಧಾಕರ ಕೆ.ಪಿ ಮಾತನಾಡಿ ಸಂಘದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕಗಳನ್ನು ಹಮ್ಮಿಕೊಂಡಿದ್ದು ಸಮಾಜ ಬಾಂಧವರು ತನು ಮನ ಧನದ ಸಹಕಾರವನ್ನು ನೀಡಿ ಸಕ್ರೀಯವಾಗಿ ಭಾಗವಹಿಸಬೇಕೆಂದರು.

ಪರಿವಾರ ಬಂಟರ ಸಂಘ ಪುತ್ತೂರು ವಲಯದ ಮಹಿಳಾ ವೇದಿಕೆಯ ಅಧ್ಯಕ್ಷೆ ಶಕೀಲಾ ಡಿ. ನಾಯ್ಕ್,ಯುವ ಪರಿವಾರ ಬಂಟರ ವೇದಿಕೆಯ ಅಧ್ಯಕ್ಷ ಅಭಿಜಿತ್ ನಾಯ್ಕ್ ಕೊಳಕ್ಕಿಮಾರ್, ವಿನೋದ ಪ್ರವೀಣ್ ಕುಮಾರ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಪ್ರಭಾ ಕೇಶವ ನಾಯ್ಕ್ , ಹೇಮಲತಾ ಎಸ್.ನಾಯ್ಕ್ , ಮಮತಾ ನಾಯ್ಕ್ ಪ್ರಾರ್ಥಿಸಿದರು. ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಕಾರ್ಯದರ್ಶಿ ಕವನ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಉಪಾಧ್ಯಕ್ಷರಾದ ಶಿವಾನಂದ ನಾಯ್ಕ ವಂದಿಸಿದರು. ವೀಕ್ಷಾ ಪಾದೆ,ಸ್ಮಿತಾ ಎಸ್, ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಸಹಭೋಜನದ ಬಳಿಕ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಸಂಘದ ಪದಾಧಿಕಾರಿಗಳು,ಸದಸ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಬಹುಮಾನ ವಿತರಣೆ: ಜು.14ರಂದು ತೆಂಕಿಲ ಶಶಿಧರ್ ನಾಯ್ಕ್ ರವರ ಗದ್ದೆಯಲ್ಲಿ ನಡೆದ ಕೆಸರ್ಡ್ ಒಂಜಿ ದಿನದಂದು ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಲಕ್ಕಿಡಿಪ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಅನಿತಾ-ಹರೀಶ್ ನಾಯ್ಕ್ ಕಬ್ಬಿನ ಹಿತ್ಲು ಇವರ ಪುತ್ರ ತನುಷ್, ಪ್ರಫುಲ್ಲ- ಮನೋಹರ್ ನಾೖಕ್‌ ಕೊಳಕ್ಕಿಮಾರ್ ಇವರ ಪುತ್ರಿ ಅಶ್ವಿಜ, ಪೂನಂ ಸುನಿಲ್ ನಾಯ್ಕ್ ಬೀದಿಮಜಲು ಇವರ ಪುತ್ರ ರಕ್ಷಣ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.

57 ವಿವಿಧ ಬಗೆಯ ತಿನಿಸುಗಳು: ಕಲಿತ ಗಡಂಗ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಸಮಾಜ ಬಾಂಧವರು ಮನೆಯಲ್ಲೇ ತಯಾರಿಸಿ ತಂದಿದ್ದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಭೋಜನದೊಂದಿಗೆ ಹಂಚಿ ಆಟಿಯ ಸಂಭ್ರಮವನ್ನು ಆಚರಿಸಲಾಯಿತು. ತಿಂಡಿ ತಿನಸುಗಳನ್ನು ಮನೆಯಲ್ಲಿ ತಯಾರಿಸಿ ತಂದವರಿಗೆ ಗಿಡಗಳನ್ನು ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here