ಕೆಯ್ಯೂರು ಗ್ರಾಮಸಭೆ

0

ಅರಣ್ಯ ಇದ್ದರೂ ರಸ್ತೆ ಬದಿ ವಿದ್ಯುತ್ ತಂತಿಯಡಿಯಲ್ಲೇ ಯಾಕೆ ಗಿಡ ನೆಡುತ್ತಾರೆ…?
ಕಾಡು ಮರದ ಬದಲು ಹಣ್ಣು ಹಂಪಲಿನ ಗಿಡ ನೆಡಿ-ಗ್ರಾಮಸ್ಥರ ಆಗ್ರಹ


ಪುತ್ತೂರು: ಅರಣ್ಯ ಪ್ರದೇಶವಿದ್ದರೂ ಸಾಮಾಜಿಕ ಅರಣ್ಯ ಇಲಾಖೆಯವರು ಗಿಡ ನೆಡುವುದು ರಸ್ತೆ ಬದಿಯಲ್ಲಿ ಅದರಲ್ಲೂ ವಿದ್ಯುತ್ ತಂತಿ ಹಾದು ಹೋಗುವ ಜಾಗದಲ್ಲೇ ಅದರ ಅಡಿ ಭಾಗದಲ್ಲೇ ಗಿಡಗಳನ್ನು ನೆಡುತ್ತಾರೆ. ಶೇಖಮಲೆ-ಅರಿಯಡ್ಕ-ದೇರ್ಲ ಜಿಪಂ ರಸ್ತೆ ಬದಿಯಲ್ಲಿ ರಸ್ತೆಯಿಂದ ಅಳತೆ ದೂರದಲ್ಲಿ ವಿದ್ಯುತ್ ತಂತಿಯ ಅಡಿ ಭಾಗದಲ್ಲೇ ಗಿಡಗಳನ್ನು ನೆಡಲಾಗಿದೆ. ಇದು ಸರಿಯಲ್ಲ, ಈ ರೀತಿಯಾಗಿ ಗಿಡ ನೆಡುವುದರಿಂದ ಮುಂದೆ ಗಿಡ ಬೆಳೆದು ಮರವಾದಾಗ ಅದರಿಂದ ಅಪಾಯವೇ ಜಾಸ್ತಿ, ಈ ರೀತಿ ಗಿಡ ಯಾಕೆ ನೆಡುತ್ತೀರಿ ಎಂದು ಕೆಯ್ಯೂರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರಾದ ಶಿವಶ್ರೀರಂಜನ್ ರೈ ದೇರ್ಲರವರು ಪ್ರಶ್ನಿಸಿದರು.


ಸಭೆಯು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ತಾಪಂ ನರೇಗಾ ಸಹಾಯಕ ನಿರ್ದೇಶಕಿ ಶೈಲಜಾ ಭಟ್‌ರವರ ಮಾರ್ಗದರ್ಶನದಲ್ಲಿ ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ಆ.೩ ರಂದು ನಡೆಯಿತು. ಇಲಾಖಾ ಮಾಹಿತಿ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಶಿವಶ್ರೀರಂಜನ್ ರೈ ದೇರ್ಲರವರು, ಬೇಕಾದಷ್ಟು ಅರಣ್ಯ ಪ್ರದೇಶವಿದ್ದರೂ ಸಾಮಾಜಿಕ ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲೇ ಗಿಡ ನೆಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಶೇಖಮಲೆ, ಅರಿಯಡ್ಕ ದೇರ್ಲ ಜಿಪಂ ರಸ್ತೆಯಲ್ಲಿ ರಸ್ತೆಯಿಂದ ಅಳತೆ ದೂರದಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಅದು ಕೂಡ ವಿದ್ಯುತ್ ತಂತಿ ಹಾದು ಹೋದ ಜಾಗದಲ್ಲೇ ನೆಟ್ಟಿದ್ದಾರೆ. ಮುಂದೆ ಗಿಡ ಬೆಳೆದು ಮರವಾದಾಗ ಅಪಾಯವೇ ಜಾಸ್ತಿ ಆದ್ದರಿಂದ ಗಿಡಗಳನ್ನು ನೆಡುವಾಗ ಎಚ್ಚರ ವಹಿಸುವುದು ಮುಖ್ಯ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆಯ ಅಧಿಕಾರಿಯವರು ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.


ಹಣ್ಣಿನ ಗಿಡಗಳನ್ನೇ ನೆಡಿ
ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶದಲ್ಲಿ ಇತರ ಕಾಡು ಜಾತಿಯ ಮರಗಳ ಗಿಡಗಳನ್ನು ನೆಡುವ ಬದಲು ಹಣ್ಣು ಹಂಪಲಿನ ಗಿಡಗಳನ್ನು ನೆಡುವುದು ಸೂಕ್ತ. ಇದರಿಂದ ಪ್ರಾಣಿ ಪಕ್ಷಿಗಳಿಗೆ ಸಹಾಯವಾಗುತ್ತದೆ ಎಂದು ಶಿವಶ್ರೀರಂಜನ್ ರೈ ದೇರ್ಲ ತಿಳಿಸಿದರು. ಈಗಾಗಲೇ ಹಲವು ಕಡೆಗಳಲ್ಲಿ ಅರಣ್ಯ ಇಲಾಖೆಯವರು ಗಿಡಗಳನ್ನು ನೆಡುತ್ತಿದ್ದಾರೆ. ಕಾಡು ಜಾತಿಯ ಗಿಡಗಳನ್ನು ನೆಡುವುದರಿಂದ ಪ್ರಯೋಜನವಿಲ್ಲ ಅದರ ಬದಲಿಗೆ ಹಣ್ಣು ಕೊಡುವ ಗಿಡಗಳನ್ನು ನೆಟ್ಟರೆ ಮಂಗಗಳಿಗೆ ಆಹಾರವಾದರೂ ಸಿಗುತ್ತದೆ ಇದರಿಂದ ಕೃಷಿಕರಿಗೆ ಮಂಗಗಳ ಉಪದ್ರ ಸ್ವಲ್ಪಮಟ್ಟಿಗೆ ತಪ್ಪುತ್ತದೆ ಎಂದು ತಿಳಿಸಿದರು. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದರು.


ನೂಜಿ ಮೇರ್ಲ ಭಾಗದಲ್ಲಿ ಅಂಗನವಾಡಿ ಕೇಂದ್ರ ಬೇಕು
ಗ್ರಾಮದ ನೂಜಿ, ಮೇರ್ಲ, ಸಣಂಗಳ ಈ ಭಾಗದಲ್ಲಿ ಎಲ್ಲಿಯೂ ಅಂಗನವಾಡಿ ಕೇಂದ್ರವಿಲ್ಲದೆ ಮಕ್ಕಳಿಗೆ ತೊಂದರೆಯಾಗಿದೆ. ಅದ್ದರಿಂದ ಈ ಭಾಗಕ್ಕೆ ಅಂಗನವಾಡಿ ಕೇಂದ್ರದ ಅವಶ್ಯಕತೆ ಇದೆ ಎಂದು ಸದಸ್ಯ ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು. ಕೆಯ್ಯೂರು ಜನತಾ ಕಾಲನಿ ಬಳಿ ಒಂದು ಅಂಗನವಾಡಿ ಕೇಂದ್ರವಿದ್ದರೆ ಮುಂದಕ್ಕೆ ಪಂಚಾಯತ್ ಕಟ್ಟಡದ ಬಳಿ, ಅದು ಬಿಟ್ಟರೆ ತೆಗ್ಗು ಶಾಲಾ ಬಳಿ ಇದೆ. ಮೇರ್ಲ, ಸಣಂಗಳ, ನೂಜಿ ಈ ಭಾಗದಲ್ಲಿ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಅಂಗನವಾಡಿ ಕೇಂದ್ರ ಇಲ್ಲ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಅಂಗನವಾಡಿ ಕಟ್ಟಡಕ್ಕೆ ಸೂಕ್ತ ಜಾಗವೂ ಇದೆ.ಈ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ ಎಂದು ಅಬ್ದುಲ್ ಖಾದರ್ ಮೇರ್ಲರವರು ತಿಳಿಸಿದರು.


ಅಪಾಯಕಾರಿ ಮರಗಳನ್ನು ತೆರವುಗೊಳಿಸಿ
ಈಗಾಗಲೇ ನಿರಂತರವಾಗಿ ಸುರಿಯುತ್ತಿರುವ ಮಳೆ, ಗಾಳಿಯಿಂದಾಗಿ ಅಲ್ಲಲ್ಲಿ ಮರ ಬಿದ್ದು ಹಾನಿಯುಂಟಾಗುತ್ತಿದೆ. ಕೆಯ್ಯೂರು, ಕಣಿಯಾರು, ಕೌಡಿಚ್ಚಾರು ರಸ್ತೆಯಲ್ಲಿ ಅಪಾಯಕಾರಿ ಮರಗಳಿದ್ದು ಇವುಗಳನ್ನು ಕೂಡಲೇ ತೆರವುಗೊಳಿಸುವಂತೆ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ತಿಳಿಸಿದರು.ಇದೇ ರೀತಿ ಎಟ್ಯಡ್ಕ, ಇಳಂತಾಜೆ ರಸ್ತೆಯಲ್ಲಿಯೂ ಅಕೇಶಿಯಾ ಮರಗಳಿವೆ ಇವುಗಳನ್ನು ತೆರವುಗೊಳಿಸಿ ಎಂದು ಸದಸ್ಯ ಬಟ್ಯಪ್ಪ ರೈ ದೇರ್ಲ ತಿಳಿಸಿದರು.


ಹಳೆಯ ವಿದ್ಯುತ್ ತಂತಿ ಬದಲಾಯಿಸಿ
ಮಾಡಾವು ಸಂಪಾಜೆ ಪ್ರದೇಶದಲ್ಲಿ ಎಚ್.ಟಿ ವಿದ್ಯುತ್ ತಂತಿ ಹಾದು ಹೋಗಿದ್ದು ಇದರ ತಂತಿಗಳು ತುಂಬಾ ಹಳೆಯದ್ದಾಗಿವೆ. ಇದನ್ನು ಬದಲಾಯಿಸಬೇಕು ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ ವಿಷ್ಣು ಗೌಡ ತಿಳಿಸಿದರು. ಕಟ್ಟತ್ತಾರು ಕೈತಡ್ಕ ರಸ್ತೆಯಲ್ಲಿ ಅಪಾಯಕಾರಿ ವಿದ್ಯುತ್ ಕಂಬಗಳು ಹಾಗು ಹಳೆಯ ತಂತಿಗಳಿವೆ. ಇದನ್ನು ಬದಲಾಯಿಸಬೇಕು ಎಂದು ಪ್ರಮೀತ್‌ರಾಜ್ ಕಟ್ಟತ್ತಾರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜೆಇ ರವೀಂದ್ರರವರು ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ನಿರಂತರವಾಗಿ ಸುರಿಯುವ ಮಳೆ, ಗಾಳಿಗೂ ಪವರ್‌ಮ್ಯಾನ್‌ಗಳು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪವರ್‌ಮ್ಯಾನ್‌ಗಳನ್ನು ಗ್ರಾಮಮಟ್ಟದಲ್ಲಿ ಗುರುತಿಸಿ ಗೌರವಿಸುವ ಕೆಲಸ ಮಾಡಬೇಕು ಎಂದು ಕಿಟ್ಟ ಅಜಿಲ ಕಣಿಯಾರು ತಿಳಿಸಿದರು. ಜೆ.ಇ ರವೀಂದ್ರ ಹಾಗೂ ಅವರ ತಂಡ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದ ಶಿವಶ್ರೀರಂಜನ್ ರೈ ದೇರ್ಲರವರು ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.


ಗ್ರಾಮಕ್ಕೊಂದು ಜನೌಷಧಿ ಕೇಂದ್ರ ಬೇಕು
ಜನೌಷಧಿ ಕೇಂದ್ರದಿಂದ ಜನರಿಗೆ ಬಹಳಷ್ಟು ಪ್ರಯೋಜನವಾಗುತ್ತಿದೆ. ಆದರೆ ಇದು ಎಲ್ಲಾ ಕಡೆ ಇಲ್ಲದೆ ಇರುವುದರಿಂದ ತೊಂದರೆಯಾಗಿದೆ. ಜನೌಷಧಿ ಕೇಂದ್ರ ಪ್ರತಿ ಗ್ರಾಮಕ್ಕೆ ಒಂದರಂತೆ ಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಶಿವಶ್ರೀರಂಜನ್ ರೈ ದೇರ್ಲ ತಿಳಿಸಿದರು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು.ಈ ಬಗ್ಗೆ ಆರೋಗ್ಯ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.


ತೆಗ್ಗು ಶಾಲೆಯ ಮಾಡು ಕುಸಿಯುತ್ತಿದೆ…!
ಹಲವು ವರ್ಷಗಳ ಇತಿಹಾಸವಿರುವ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಡು ಕುಸಿಯುವ ಹಂತದಲ್ಲಿದೆ. ಈಗಾಗಲೇ ರೀಪುಗಳು ತುಂಡಾಗಿದ್ದು ಹಂಚುಗಳು ಬೀಳುತ್ತಿವೆ. ಈ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಬೇಕಾಗಿದೆ ಎಂದು ಮೋಹನ್ ಗೌಡ ಎರಕ್ಕಳ ತಿಳಿಸಿದರು. ಈ ಬಗ್ಗೆ ಶಾಲಾ ಮುಖ್ಯಗುರು ಮಾಹಿತಿ ನೀಡಿದ್ದಾರೆ. ಮಕ್ಕಳನ್ನು ಆ ಕಟ್ಟಡದಿಂದ ತೆರವು ಮಾಡುವ ಕೆಲಸ ನಡೆದಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ ಎಂದು ಸಿಆರ್‌ಪಿ ಶಶಿಕಲಾ ತಿಳಿಸಿದರು. ಶಾಲಾ ಕಟ್ಟಡ ಬೀಳುತ್ತಿರುವ ಬಗ್ಗೆ ಇಲಾಖೆಗೆ ಹಲವು ಸಲ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸದಸ್ಯ ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು.


ಮಕ್ಕಳ ಸಮೀಕ್ಷೆಗೆ ಅವಕಾಶ ಮಾಡಿಕೊಡಿ
ಈಗಾಗಲೇ 18 ವರ್ಷದೊಳಗಿನ ಮಕ್ಕಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮಾಹಿತಿದಾರರು ಮನೆಗೆ ಬಂದಾಗ ಅವರಿಗೆ ಸರಿಯಾದ ಮಾಹಿತಿಯನ್ನು ಕೊಡಬೇಕಾಗಿದೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಕೊಡುವ ಮೂಲಕ ಸರಿಯಾದ ರೀತಿಯಲ್ಲಿ ಸಮೀಕ್ಷೆ ಕಾರ್ಯ ನಡೆಯುವಂತೆ ಮಾಡಬೇಕಾಗಿದೆ. ಗ್ರಾಮಸ್ಥರು ಭಯ ಬಿಟ್ಟು ಮಾಹಿತಿದಾರರಿಗೆ ಮಾಹಿತಿಯನ್ನು ಕೊಡುವಂತೆ ಸಿಆರ್‌ಪಿ ಶಶಿಕಲಾರವರು ಕೇಳಿಕೊಂಡರು.


ಇದಲ್ಲದೆ ಹಲವು ವಿಷಯಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು. ಬಂಗಾರ್‌ಗುಡ್ಡದಲ್ಲಿ ನೀರಿನ ಟ್ಯಾಂಕ್ ನಿರ್ಮಿಸುವ ಮೂಲಕ ಈ ಭಾಗದ ಜನರ ನೀರಿನ ಭವಣೆಯನ್ನು ನೀಗಿಸಿದ ಪಂಚಾಯತ್ ಆಡಳಿತ ವರ್ಗ, ಅಧಿಕಾರಿ ವರ್ಗ, ಇಲಾಖೆಯವರಿಗೆ ಮೋಹನ್ ಗೌಡ ಎರಕ್ಕಳರವರು ಅಭಿನಂದನೆಗಳನ್ನು ಸಲ್ಲಿಸಿದರು. ಪಂಚಾಯತ್ ಸ್ವಚ್ಛವಾಹಿನಿ ವಾಹನವು ಕಣಿಯಾರು ಭಾಗಕ್ಕೆ ಹಾಗೇ ದೇರ್ಲ ಭಾಗಕ್ಕೂ ಬರಬೇಕು ಎಂದು ಕಿಟ್ಟ ಅಜಿಲ ಮತ್ತು ಶಿವಶ್ರೀರಂಜನ್ ರೈ ವಿನಂತಿಸಿಕೊಂಡರು. 5 ಎಕರೆಯೊಳಗೆ ರೈತರಿಗೆ ಸಣ್ಣ ರೈತ ಸರ್ಟಿಫಿಕೇಟ್ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಶೈಲಜಾ ಭಟ್‌ರವರು, ಇಲಾಖಾ ಮಾಹಿತಿಯೊಂದಿಗೆ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಮಾತನಾಡಿ, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಗ್ರಾಮಸ್ಥರ ಕರೆಗೆ ಶೀಘ್ರ ಸ್ಪಂದನೆ ಕೊಡುವ ಕೆಲಸ ಪಂಚಾಯತ್‌ನಿಂದ ಆಗಿದೆ. ಗ್ರಾಮದ ಅಭಿವೃದ್ದಿಗೆ ಪ್ರತಿಯೊಬ್ಬರು ಕೈಜೋಡಿಸುವಂತೆ ಕೇಳಿಕೊಂಡರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆಯವರು ವರದಿ ಮಂಡಿಸಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ತಾರಾನಾಥ ಕಂಪ, ವಿಜಯ ಕುಮಾರ್ ಸಣಂಗಳ, ಜಯಂತಿ ಎಸ್.ಭಂಡಾರಿ, ಗಿರಿಜಾ ಕಣಿಯಾರು, ಮೀನಾಕ್ಷಿ ವಿ.ರೈ, ನೆಬಿಸಾ, ಮಮತಾ ರೈ ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ ರೈ, ಜ್ಯೋತಿ ಎಸ್.ಧರ್ಮಣ್ಣ, ರಫೀಕ್ ತಿಂಗಳಾಡಿ ಸಹಕರಿಸಿದ್ದರು.


ಕಾಲನಿಗಳಲ್ಲೇ ನಡೆಯಲಿ ಎಸ್‌ಸಿ,ಎಸ್‌ಟಿ ಕುಂದುಕೊರತೆಗಳ ಸಭೆ
ಈಗಾಗಲೇ ಎಸ್‌ಸಿ, ಎಸ್‌ಟಿ ಕುಂದುಕೊರತೆಗಳ ಸಭೆಯು ಪುತ್ತೂರು ಗ್ರಾಮಾಂತರ ಠಾಣೆ ಸಂಪ್ಯದಲ್ಲಿ ನಡೆಯುತ್ತಿದೆ. ಆದರೆ ಈ ಸಭೆಗೆ ಪ್ರತಿಯೊಬ್ಬರಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಆಯಾ ಗ್ರಾಮದ ಕಾಲನಿಗಳಲ್ಲಿ ಕುಂದುಕೊರತೆಗಳ ಸಭೆ ನಡೆದರೆ ಉತ್ತಮ, ಕಾಲನಿ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಸದಸ್ಯ ಕಿಟ್ಟ ಅಜಿಲ ಕಣಿಯಾರು ತಿಳಿಸಿದರು. ಇದಕ್ಕೆ ಉತ್ತರಿಸಿ ಬೀಟ್ ಪೊಲೀಸ್ ಅಧಿಕಾರಿ ಈ ಬಗ್ಗೆ ಕ್ರಮ ವಹಿಸಲಾಗುವುದು, ಕಾಲನಿಯವರು ಜನಸೇರಿಸಿ ದಿನಾಂಕ ತಿಳಿಸಿದರೆ ನಾವು ಮೀಟಿಂಗ್ ಮಾಡಲು ರೆಡಿ ಎಂದು ತಿಳಿಸಿದರು.


18 ವರ್ಷದೊಳಗಿನ ಅಪ್ರಾಪ್ತರು ವಾಹನ ಚಲಾಯಿಸಿದರೆ ರೂ.25 ಸಾವಿರ ದಂಡ…!
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸುತ್ತಿರುವ ಪ್ರಕರಗಳು ಜಾಸ್ತಿಯಾಗುತ್ತಿವೆ. 18 ವರ್ಷದೊಳಗಿನ ಮಕ್ಕಳಿಗೆ ಹೆತ್ತವರು ವಾಹನ ಚಾಲನೆಗೆ ಕೊಟ್ಟರೆ ಹೆತ್ತವರ ಮೇಲೆ ಪ್ರಕರಣ ದಾಖಲಾಗುತ್ತದೆ ಮತ್ತು ರೂ.25 ಸಾವಿರ ದಂಡ ವಿಧಿಸಲಾಗುತ್ತದೆ. ಮಕ್ಕಳ ಕೈಗೆ ವಾಹನ ಕೊಡುವ ಮುಂಚೆ ಹೆತ್ತವರು ಸಾವಿರ ಸಲ ಯೋಚಿಸುವುದು ಒಳಿತು ಎಂದು ಸಂಪ್ಯ ಠಾಣಾ ಎಎಸ್‌ಐ ತಿಳಿಸಿದರು.


ಕನ್ನಡ ಎಂ.ಎ ರ‍್ಯಾಂಕ್ ವಿದ್ಯಾರ್ಥಿನಿ ಸೌಜನ್ಯಳಿಗೆ ಸನ್ಮಾನ
ಕನ್ನಡ ಎಂ.ಎಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಕೆಯ್ಯೂರು ಗ್ರಾಮದ ಸೌಜನ್ಯ ಬಿ.ಎಂರವರಿಗೆ ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು.ಶಾಲು,ಹಣ್ಣುಹಂಪಲು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡುವ ಮೂಲಕ ಗೌರವಿಸಲಾಯಿತು.

LEAVE A REPLY

Please enter your comment!
Please enter your name here