ಸಮಸ್ಯೆ, ಪರಿಹಾರದ ಅರ್ಜಿ ಹಿಡಿದುಕೊಂಡು ಶಾಸಕರ ಮುಂದೆ ಕ್ಯೂ..

0

ಸಾರ್ವಜನಿಕ ಅಹವಾಲು ಸ್ವೀಕಾರದ ವೇಳೆ ಕಂಡುಬಂದ ದೃಶ್ಯ
ಲಂಚ ಸ್ವೀಕರಿಸುವ ಅಧಿಕಾರಿಗಳಿಗೆ, ಮಧ್ಯವರ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕರು

ಪುತ್ತೂರು: 94 ಸಿ ಅಡಿಯಲ್ಲಿ 4 ವರ್ಷಗಳಿಂದ ಮನೆ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ.. ದುಡಿಯಲು ಸಾಧ್ಯವಿಲ್ಲ ಹಣದ ಸಹಾಯ ಬೇಕಿದೆ.. ಮನೆ ರಿಪೇರಿಯ ಹಣ ಇನ್ನೂ ಬಂದಿಲ್ಲ. 94 ಸಿ ಗಾಗಿ ನಮ್ಮನ್ನು ಕುಣಿಸುತ್ತಿದ್ದಾರೆ… ಹೀಗೆ ಒಂದಲ್ಲ ಎರಡಲ್ಲ.. ನೂರಾರು ಸಮಸ್ಯೆಗಳೊಂದಿಗೆ ಶಾಸಕರಿಗೆ ತಮ್ಮ ಅಹವಾಲು ಸಲ್ಲಿಸಲು ಜನರು ಸಾಲುಗಟ್ಟಿ ನಿಂತ ದೃಶ್ಯ ಆ.5 ರಂದು ಪುತ್ತೂರಿನ ಶಾಸಕರ ಕಚೇರಿಯಲ್ಲಿ ಕಂಡುಬಂತು. ತಮ್ಮ ಮುಂದೆ ಜಮಾಯಿಸಿದ ಸಾರ್ವಜನಿಕರನ್ನು ಪ್ರತಿಯೊಬ್ಬರನ್ನೂ ಸಾವಧಾನದಿಂದ ಮಾತನಾಡಿಸಿ ಅವರ ಸಮಸ್ಯೆ ಕೇಳಿದ ಶಾಸಕರು, ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಡನೆ ಈ ಬಗ್ಗೆ ಮಾಹಿತಿ ಕೇಳಿ ಸಾರ್ವಜನಿಕರಿಗೆ ಪರಿಹಾರ ಸೂಚಿಸಿದರು.


ಇದೇ ವೇಳೆ ‘ಸುದ್ದಿ’ ಯೊಂದಿಗೆ ಮಾತನಾಡಿರುವ ಅವರು ‘ನಮ್ಮ ಕಾರ್ಯವೈಖರಿ ಹೇಗಿದೆ ಅಂದರೆ ಸ್ಪಾಟ್ ಲ್ಲಿ ಪರಿಹಾರ ಕಾರ್ಯ ನೀಡುವ ಪ್ರಯತ್ನ‌ ನಮ್ಮದು. ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಸೂಚನೆಯನ್ನೂ ಕೊಟ್ಟಿದ್ದೇವೆ. ಸಾರ್ವಜನಿಕರಿಗೆ ಸಮಸ್ಯೆ ನಡೆದಲ್ಲಿಯೇ ಪರಿಹಾರ ಕೊಡುವ ಪ್ರಯತ್ನ ಮಾಡಬೇಕು. ಸಿದ್ದರಾಮಯ್ಯನವರ ಸರಕಾರದಿಂದ ಪ್ರಾಕೃತಿಕ ವಿಕೋಪದಿಂದ ಮನೆ ಹಾನಿಗೊಳಗಾದರೆ ರೂ. 50 ಸಾವಿರ, ಮನೆಯೊಳಗೆ ನೀರು ಬಂದರೆ ರೂ. 10 ಸಾವಿರ, ಸಂಪೂರ್ಣ ಮನೆ ಬಿದ್ದರೆ ರೂ. 1.2 ಲಕ್ಷ ಸಿಗಲಿದೆ. ಅದನ್ನು ರೂ. 5 ಲಕ್ಷದವರೆಗೆ ಏರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದೇನೆ. ಸಾಕುದನ ಸತ್ತರೆ ರೂ. 37,500, ಕರು ಸತ್ತರೆ ರೂ. 20 ಸಾವಿರ ಕೊಡಲಾಗುತ್ತಿದೆ. ಪಂಚಾಯತ್ ಮಟ್ಟದಲ್ಲಿ ಹಣದ ಕೊರತೆಯಿಲ್ಲ. ತಕ್ಷಣದ ಪರಿಹಾರ ಕಾರ್ಯಗಳಿಗಾಗಿ ಎ ಗ್ರೇಡ್ ಪಂಚಾಯತ್ ಗಳಿಗೆ ರೂ. 25 ಸಾವಿರ, ಬಿ ಗ್ರೇಡ್ ಪಂಚಾಯತ್ ಗಳಿಗೆ ರೂ. 15 ಸಾವಿರ ಅನುದಾನ ಇಡಲಾಗಿದೆ’ ಎಂದರು.


ಅಕ್ರಮ ಸಕ್ರಮ ವಿಲೇವಾರಿ
ಅಕ್ರಮ ಸಕ್ರಮ, 94 ಸಿ ಯೋಜನೆಯ ಫಲಾನುಭವಿಗಳು ಕಳೆದ 10 ವರ್ಷಗಳಿಂದ ಪರದಾಡುತ್ತಿದ್ದಾರೆ. ಹಾಗಾಗಿ ಗ್ರಾಮ ಗ್ರಾಮಕ್ಕೆ ಹೋಗಿ ಅಕ್ರಮ ಸಕ್ರಮ ಕಡತಗಳ ವಿಲೇವಾರಿ ಮಾಡಲಿದ್ದೇವೆ’ ಎಂದು ಶಾಸಕರು ಹೇಳಿದರು.


ಹಣ ತಗೊಂಡಲ್ಲಿ ಎತ್ತಂಗಡಿ
ಅಕ್ರಮ ಸಕ್ರಮ, 94 ಸಿ ಯಲ್ಲಿ ಯಾವುದೇ ಅಧಿಕಾರಿಗಳು ಹಣ ಮಾಡುವುದು ಕಂಡರೆ ಸರಕಾರ ಅವರನ್ನು ಎತ್ತಂಗಡಿ ಅಥವಾ ಡಿಸ್ಮಿಸ್ ಮಾಡಲಿದೆ. ಯಾರಾದರೂ ಮಧ್ಯವರ್ತಿಗಳಿದ್ದಲ್ಲಿ ಕಂಪ್ಲೇಂಟ್ ಕೊಟ್ಟು ಅವರನ್ನು ಒಳಗೆ ಹಾಕುವ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಬಡವರಿಗೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿಸಿಕೊಡುವುದು ನಮ್ಮ ಕೆಲಸ ಎಂದ ಶಾಸಕರು, ‘ಜನರು ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅವರಿಗೆ ಸಹಕಾರವಾಗಲು ನಮ್ಮಲ್ಲಿಗೆ ಬರ್ತಾರೆ.ಇಲ್ಲಿಗೆ ಬಂದರೆ ಕೆಲಸ ಆಗ್ತದೆ ಅಂತ ಜನರು ಬರ್ತಾರೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡ್ತೇವೆ’ ಎಂದರು.


ಸಿಹಿ ಇದ್ದಲ್ಲಿಗೆ ಇರುವೆ ಯಾಕೆ ಬರ್ತದೆ ? ಭ್ರಷ್ಟಾಚಾರ ರಹಿತವಾಗಿ ಕೆಲಸವಾಗವೇಕು
ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು ‘ಸಿಹಿ ಇದ್ದಲ್ಲಿಗೆ ಇರುವೆ ಯಾಕೆ ಬರ್ತದೆ ? ಅದೇ ರೀತಿ ಜನರೂ ತಮ್ಮ ಕೆಲಸ ಆಗ್ತದೆ ಅಂದುಕೊಂಡು ನಮ್ಮಲ್ಲಿಗೆ ಬರ್ತಾರೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡ್ತೇವೆ’ ಎಂದರು.

ಸಿಹಿ ಹಂಚಿದ ಶಾಸಕರು
ತಮ್ಮಲ್ಲಿಗೆ ಅಹವಾಲು ಸಲ್ಲಿಸಲು ಬಂದ ಜನರಿಗೆ ಚಾಕೊಲೇಟ್ ನೀಡಿ ಶಾಸಕರು ಗಮನ ಸೆಳೆದರು.

LEAVE A REPLY

Please enter your comment!
Please enter your name here