ಪ್ರಥಮ ಬಿ.ಕಾಂ.ಪದವಿ ತರಗತಿ ನಡೆಸದೇ ಇರುವ ವಿವಿ ನಿರ್ಧಾರಕ್ಕೆ ವಿರೋಧ-20ಕ್ಕಿಂತ ಹೆಚ್ಚು ಮಕ್ಕಳ ಸೇರ್ಪಡೆಗೆ ನಿರ್ಣಯ
ನೆಲ್ಯಾಡಿ: 20ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಆಗಿರುವುದರಿಂದ ಪ್ರಸ್ತುತ ಶೈಕ್ಷಣಿಕ ವರ್ಷ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ಪದವಿ ತರಗತಿ ನಡೆಸದೇ ಇರಲು ಮುಂದಾಗಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ನಿರ್ಧಾರಕ್ಕೆ ಕಾಲೇಜು ಅನುಷ್ಠಾನ ಸಮಿತಿ ವಿರೋಧ ವ್ಯಕ್ತಪಡಿಸಿದ್ದು 20ಕ್ಕಿಂತ ಹೆಚ್ಚು ಮಕ್ಕಳನ್ನು ಸೇರ್ಪಡೆಗೊಳಿಸಲು ಹಾಗೂ ಬಿ.ಕಾಂ.ಕೋರ್ಸು ಮುಂದುವರಿಸುವಂತೆ ಕೇಳಿಕೊಳ್ಳಲು ಆ.6ರಂದು ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆ ಉಷಾ ಅಂಚನ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆ ಉಷಾ ಅಂಚನ್ ಅವರು, ಮಂಗಳೂರು ವಿವಿ ಘಟಕ ಕಾಲೇಜು ನೆಲ್ಯಾಡಿಯಲ್ಲಿ ಆರಂಭಗೊಂಡು ಆರು ವರ್ಷ ಆಗಿದೆ. ಈ ವರ್ಷ 20ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆಯಿರುವ ತರಗತಿ ನಡೆಸದೇ ಇರಲು ಸಿಂಡಿಕೇಟ್ ಸಭೆ ನಿರ್ಧರಿಸಿದೆ. ನೆಲ್ಯಾಡಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ.ಗೆ 22 ಹಾಗೂ ಬಿ.ಕಾಂ.ಗೆ 16 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ನೆಲ್ಯಾಡಿ ಕಾಲೇಜಿನಲ್ಲಿ ಈ ವರ್ಷ ಪ್ರಥಮ ಬಿ.ಕಾಂ.ತರಗತಿ ನಡೆಸದೇ ಇರಲು ವಿವಿ ಆಡಳಿತ ಮಂಡಳಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿಗಳು ದಾಖಲೆ ಹಿಂತೆಗೆದುಕೊಂಡಿರುವುದು ಅನುಷ್ಠಾನ ಸಮಿತಿ ಗಮನಕ್ಕೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿರುವ ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸದಸ್ಯರು ಸಲಹೆ, ಸೂಚನೆ ನೀಡಬೇಕು. ಯಾವುದೇ ಕಾರಣಕ್ಕೂ ತರಗತಿ ಸ್ಥಗಿತಗೊಳ್ಳಬಾರದು ಎಂದು ಹೇಳಿದರು.

ವಿದ್ಯಾರ್ಥಿಗಳ ಸಂಪರ್ಕಕಕ್ಕೆ ನಿರ್ಣಯ:
ಈ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಬಿ.ಕಾಂ. ತರಗತಿಗೆ ಸೇರಲು 21 ವಿದ್ಯಾರ್ಥಿಗಳು ಅರ್ಜಿ ಫಾರಂ ತೆಗೆದುಕೊಂಡು ಹೋಗಿದ್ದು ಈ ಪೈಕಿ 16 ವಿದ್ಯಾರ್ಥಿಗಳು ದಾಖಲಾತಿಗಾಗಿ ಕಾಲೇಜಿಗೆ ದಾಖಲೆ ಸಲ್ಲಿಸಿದ್ದರು. ದಾಖಲೆ ನೀಡಿದ್ದ 16 ವಿದ್ಯಾರ್ಥಿಗಳ ಪೈಕಿ 10 ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಸೇರ್ಪಡೆಗೆ ದಾಖಲೆ ಹಿಂತೆಗೆದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಸೇರ್ಪಡೆಗೆ ಕ್ರಮ ಕೈಗೊಳ್ಳುವುದು. ಅಲ್ಲದೇ ಪದವಿ ಕಲಿಯಲು ಆಸಕ್ತಿ ಇರುವ ಇತರೇ ವಿದ್ಯಾರ್ಥಿಗಳನ್ನೂ ಸಂಪರ್ಕಿಸಿ ಅವರಿಗೆ ಶುಲ್ಕ ಪಾವತಿಗೆ ಆರ್ಥಿಕ ನೆರವು ನೀಡಿ ಕಾಲೇಜಿಗೆ ಸೇರ್ಪಡೆಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಿಂದಲೇ ಸಮಿತಿ ಸದಸ್ಯರು ಕೆಲ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು ಅವರು ಕಾಲೇಜಿಗೆ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದರು. ಪ್ರವೇಶಾತಿಗೆ ಕೊನೆ ದಿನವಾದ ಆ.೧೨ರೊಳಗೆ ೨೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕಾಲೇಜು ಅನುಷ್ಠಾನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಬೀದಿಮಜಲು, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಅನುಷ್ಠಾನ ಸಮಿತಿ ಗೌರವಾಧ್ಯಕ್ಷ ಕೆ.ಪಿ.ತೋಮಸ್, ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಮೊಹಮ್ಮದ್ ಇಕ್ಬಾಲ್, ಮಾಜಿ ಸದಸ್ಯ ಅಬ್ರಹಾಂ ಕೆ.ಪಿ., ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಮಾಜಿ ಅಧ್ಯಕ್ಷ ರಫೀಕ್ ಸೀಗಲ್, ರವಿಚಂದ್ರ ಹೊಸವಕ್ಲು, ಗಣೇಶ್ ರಶ್ಮಿ, ನಾಝೀಂ ಸಾಹೇಬ್ ನೆಲ್ಯಾಡಿ, ಗಣೇಶ್ ಪೊಸೊಳಿಗೆ, ರವಿ ಸುರಕ್ಷಾ ನೆಲ್ಯಾಡಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಶಿವಪ್ರಸಾದ್ ಸ್ವಾಗತಿಸಿದರು.
ಪ್ರಥಮ ಬಿ.ಕಾಂ.ಪದವಿಗೆ 16 ವಿದ್ಯಾರ್ಥಿಗಳ ದಾಖಲಾತಿ:
2024-25ನೇ ಶೈಕ್ಷಣಿಕ ಸಾಲಿನಲ್ಲಿ 20ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆಯಿದ್ದಲ್ಲಿ ಆ ಪದವಿ ತರಗತಿ ನಡೆಸದೇ ಇರಲು ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ಪದವಿ ತರಗತಿಗೆ ಸೇರ್ಪಡೆಗೆ 21 ವಿದ್ಯಾರ್ಥಿಗಳು ಅರ್ಜಿ ಫಾರಂ ತೆಗೆದುಕೊಂಡು ಹೋಗಿದ್ದರೂ 16 ವಿದ್ಯಾರ್ಥಿಗಳು ಮಾತ್ರ ಸೇರ್ಪಡೆಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಳಿಕ ವಿವಿಯಿಂದ ಬಂದ ಸೂಚನೆಯಂತೆ 10 ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಸೇರ್ಪಡೆಯಾಗಲು ದಾಖಲೆ ವಾಪಸ್ ಪಡೆದುಕೊಂಡು ತೆರಳಿದ್ದರು. ಈ ವಿಚಾರ ಅನುಷ್ಠಾನ ಸಮಿತಿಯ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆ.6ರಂದು ತುರ್ತು ಸಭೆ ಕರೆಯಲಾಗಿತ್ತು.