ವಿಟ್ಲ: ಸೋಮವಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಎಂಬಲ್ಲಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದು ನಿಲ್ಲಿಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಮೂಲದ ಮೂವರು ಹಾಗೂ ಓರ್ವ ಕುದುಮಾರು ನಿವಾಸಿ ಸಹಿತ ಏಳು ಮಂದಿ ಆರೋಪಿಗಳನ್ನು ಸೋಮವಾರಪೇಟೆ ಉಪವಿಭಾಗದ ಡಿಸಿಪಿ ಆರ್.ವಿ. ಗಂಗಾಧರಪ್ಪ ರವರ ನೇತೃತ್ವದ ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ಕುದುಮಾರು ನಿವಾಸಿ ರೋಶನ್ ಕೆ.(32 ವ.), ಬಂಟ್ವಾಳ ತಾಲೂಕು ಕನ್ಯಾನ ನಿವಾಸಿ ಸತೀಶ್ ರೈ(54 ವ.), ಬಂಟ್ವಾಳ ತಾಲೂಕು ವಿಟ್ಲಪಡ್ನೂರು ನಿವಾಸಿ ಗಣೇಶ್ ಕೆ. (28 ವ.) ಬಂಟ್ವಾಳ ತಾಲೂಕು ವೀರಕಂಬ ನಿವಾಸಿ ಕುಸುಮಾಕರ (39 ವ.), ವಿರಾಜಪೇಟೆ ಟೌನ್ ನ ಶಿವಕೇರಿ ನಿವಾಸಿ ಸೂರ್ಯಪ್ರಸಾದ್ ಬಿ.ಎ. (43 ವ.), ಸೋಮವಾರಪೇಟೆ ಟೌನ್ ನ ವೆಂಕಟೇಶ್ವರ ಬ್ಲಾಕ್ ನಿವಾಸಿ ವಿನೋದ್ ಕುಮಾರ್ ಹೆಚ್.ಪಿ. ( 36 ವ.), ಕುಶಾಲನಗರ ಹೆಬ್ಬಾಲೆ ನಿವಾಸಿ ಮೋಹನ್ ಕುಮಾರ್ ಬಿ. (45 ವ.) ಬಂಧಿತ ಆರೋಪಿಗಳಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬೆಟ್ಟ ಎಂಬಲ್ಲಿ ಜು.29ರಂದು ರಾತ್ರಿ ದರೋಡೆ ಪ್ರಕರಣ ನಡೆದಿತ್ತು.
ಘಟನೆ ಹೀಗೆ ನಡೆದಿತ್ತು…:
ಸೋಮವಾರಪೇಟೆಯ ಕಬ್ಬೆಟ್ಟ ಗ್ರಾಮದ ನೇಮರಾಜ್.ಕೆ.ಎಂ ಎಂಬವರು ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿ ಅನುಷಾ ಮಾರ್ಕೆಟಿಂಗ್ ಏಜೆನ್ಸಿ ಹೆಸರಿನ ಅಂಗಡಿಯನ್ನು ನಡೆಸುತ್ತಿದ್ದು. ಜು.29ರಂದು ವ್ಯಾಪಾರ ಮುಗಿಸಿಕೊಂಡು ರಾತ್ರಿ ಸುಮಾರು 8.45 ಗಂಟೆಗೆ ತನ್ನ ಪತ್ನಿಯೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಿಬ್ಬೆಟ್ಟ ರಸ್ತೆಯಲ್ಲಿರುವ ಸಾಕ್ಷಿ ಕನ್ವೆನ್ಸನ್ ಹಾಲ್‌ನಿಂದ ಮುಂಭಾಗದ ರಸ್ತೆಯ ತಿರುವಿನಲ್ಲಿ ಅಪರಿಚಿತ ವ್ಯಕ್ತಿಗಳು ಕಾರು ಮತ್ತು ಬೈಕಿನಲ್ಲಿ ಬಂದು ಅಡ್ಡಗಟ್ಟಿ ಮುಖಕ್ಕೆ ಖಾರದ ಪುಡಿ ಎರಚಿ ಸ್ಕೂಟರ್‌ನಿಂದ ತಳ್ಳಿ ಕೆಳಗೆ ಬೀಳಿಸಿ ನೇಮರಾಜ್ ರವರ ಪತ್ನಿಗೆ ಹಲ್ಲೆ ಮಾಡಿ ರೂ. 6,18,000 ನಗದು ಹಾಗೂ 3 ಮೊಬೈಲ್ ಪೋನ್‌ಗಳಿದ್ದ ಬ್ಯಾಗ್‌ನ್ನು ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಕಬ್ಬೆಟ್ಟ ಗ್ರಾಮದ ನೇಮರಾಜ್.ಕೆ.ಎಂ.ರವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಠಾಣೆಯಲ್ಲಿ ಕಲಂ 310(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಉನ್ನತ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ – ತಡರಾತ್ರಿವರೆಗೆ ತನಿಖೆ:
ಪ್ರಕರಣದ ಬಗ್ಗೆ ಮಾಹಿತಿ ಅರಿತ ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಽಕ್ಷಕರಾದ ಸುಂದರ್ ರಾಜ್, ಸೋಮವಾರಪೇಟೆ ಉಪವಿಭಾಗದ ಡಿಎಸ್‌ಪಿ ಆರ್.ವಿ. ಗಂಗಾಧರಪ್ಪ, ಸೋಮವಾರಪೇಟೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಮುದ್ದು ಮಾದೇವ, ಎಸ್.ಐ. ಗೋಪಾಲರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ತಡರಾತ್ರಿವರೆಗೆ ಮಾಹಿತಿ ಸಂಗ್ರಹಿಸಿದ್ದರು. ಸ್ಥಳಕ್ಕೆ ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿತ್ತು.
ತನಿಖೆಗೆ ವಿಶೇಷ ತಂಡ ರಚನೆ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕ ಕೆ.ರಾಮರಾಜನ್ ರವರು ಆರೋಪಿಗಳ ಪತ್ತೆಗಾಗಿ ಸೋಮವಾರಪೇಟೆ ಉಪವಿಭಾಗದ ಡಿಸಿಪಿ ಆರ್.ವಿ. ಗಂಗಾಧರಪ್ಪರವರ ನೇತೃತ್ವದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಮುದ್ದು ಮಾದೇವ, ಎಸ್.ಐ. ಗೋಪಾಲ ಸೇರಿದಂತೆ ಸೋಮವಾರಪೇಟೆ ಉಪವಿಭಾಗದ ಅಪರಾಧ ತನಿಖೆ/ಪತ್ತೆ ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ಆ ಮೂಲಕ ತನಿಖೆ ಆರಂಭಿಸಲಾಗಿತ್ತು.
ಆರೋಪಿಗಳ ಜಾಡುಹಿಡಿದ ಪೊಲೀಸರು:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿತ್ತು. ಆರಂಭದಲ್ಲಿ ಸ್ಥಳೀಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ವೀಡಿಯೋಗಳ ಆಧಾರದಲ್ಲಿ ಕೆಲವೊಂದು ಪ್ರಮುಖ ಮಾಹಿತಿಯನ್ನು ಕಲೆಹಾಕಿಕೊಂಡ ಪೊಲೀಸರಿಗೆ ಆರೋಪಿಗಳ ಸುಳಿವು ದೊರೆತಿತ್ತು. ಈ ಪೈಕಿ ನಾಲ್ವರು ಆರೋಗಳು ದಕ್ಷಿಣ ಕನ್ಮಡ ಜಿಲ್ಲೆಯವರೆಂಬುದನ್ನು ಅರಿತ ತಂಡ ಇಲ್ಲಿನ ಪೊಲೀಸರ ಸಹಕಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲವಾಗಿತ್ತು. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳಿಂದ ಅಪರಾಧ ಕೃತ್ಯಕ್ಕೆ ಬಳಸಿದ ಒಂದು ಸ್ಯಾಂಟ್ರೋ ಹಾಗೂ ಒಂದು ಮಾರುತಿ ಸ್ವಿಫ್ಟ್ ಕಾರು, 9 ಮೋಬೈಲ್ ಫೋನ್ ಗಳು ಹಾಗೂ ರೂ. 3,02,000 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರ ಪೈಕಿ ಕೆಲವರು ಹಲವು ಪ್ರಕರಣಗಳ ಆರೋಪಿಗಳು: ಪ್ರಕರಣದಲ್ಲಿ ರೋಷನ್, ಸತೀಶ್ ರೈ, ಗಣೇಶ, ಕುಸುಮಾಕರ ಎಂಬ ಆರೋಪಿಗಳದ್ದು ಅಂತರ್ ಜಿಲ್ಲಾ ದರೋಡೆ ತಂಡವಾಗಿರುತ್ತದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಕೊಲೆ ಪ್ರಯತ್ನ, ಕಿಡ್ನಾಪ್ ಮುಂತಾದ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಹಾಗೂ 2022 ನೇ ಸಾಲಿನಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿರುತ್ತದೆ. ವೃತ್ತಿಯಲ್ಲಿ ಚಾಲಕನಾಗಿರುವ ರೋಷನ್, ವ್ಯವಸಾಯ ವೃತ್ತಿಯ ಸತೀಶ್ ರೈರವರು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಎಂಬಲ್ಲಿ ಜಲೀಲ್ ಎಂಬವರ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಆರೋಪಿ ಗಣೇಶ್ ಪೈಂಟಿಂಗ್ ವೃತ್ತಿ ಮಾಡುತ್ತಿದ್ದು, ಕುಸುಮಕರ ಕೂಲಿ ಕೆಲಸ ಮಾಡಿಕೊಂಡಿದ್ದ. ಸದರಿ ಪ್ರಕರಣದಲ್ಲಿ ಬಾಕಿ ಉಳಿದ ಆರೋಪಿಗಳಿಗಾಗಿ ವಿಶೇಷ ತನಿಖಾ ತಂಡದಿಂದ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಕೆ.ರಾಮರಾಜನ್‌ರವರು ತಿಳಿಸಿದ್ದಾರೆ.