ವಕೀಲರ ಸಂಘದಲ್ಲಿ ಆಟಿದ ಸೇರಿಗೆ – ಬಹುಭಾಷ ಕವಿಗೋಷ್ಟಿ, ಐವರು ಸಾಧಕ ವಕೀಲರಿಗೆ ಆಟಿ ತಿಂಗಳ ಸಂಪ್ರದಾಯ ಬದ್ದ ಸನ್ಮಾನ

0

ಪುತ್ತೂರು: ಬಹು ಭಾಷೆಗಳ ಬಾಂಧವ್ಯ ಮೂಡಿಸುವ ನಿಟ್ಟಿನಲ್ಲಿ 10 ಭಾಷೆಯ ಕವಿಗೋಷ್ಟಿ, ಐವರು ಸಾಧಕರಿಗೆ ಆಟಿ ತಿಂಗಳ ಸಂಪ್ರದಾಯ ಬದ್ದ ಸನ್ಮಾನ ಹಾಗೂ ಆಟಿಯ ತಿಂಗಳ ಹಲವು ಬಗೆಯ ವಿಶೇಷ ಖಾದ್ಯಗಳನ್ನು ಸವಿಯುವ ಮೂಲಕ ಪುತ್ತೂರು ವಕೀಲರ ಸಂಘದಲ್ಲಿ ’ಆಟಿದ ಸೇರಿಗೆ’ ಎಂಬ ವಿಶೇಷ ಕಾರ್ಯಕ್ರಮ ಆ.8ರಂದು ನಡೆಯಿತು.

ವಕೀಲರ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಯೋಗದೊಂದಿಗೆ ಪುತ್ತೂರು ಪರಾಶರ ವಕಿಲರ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಡಿ ಅವರು ಕಲ್ಪವೃಕ್ಷ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.


ಹಿರಿಯ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್ ಅವರು ಆಷಾಡದ ಮೆಲುಕು – ಆಟಿದ ಗೇನ ಎಂಬ ವಿಷಯದಲ್ಲಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಜಿ ಅದ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಎಸಿಜೆಎಂ ಪ್ರಿಯಾ ರವಿ ಜೊಗ್ಲೇಕರ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಮ್‌ಎಫ್‌ಸಿ ಅರ್ಚನಾ ಉಣ್ಣಿತ್ತಾನ್, 2ನೇ ಹೆಚ್ಚುವರಿ ನ್ಯಾಯಾಧೀಶ ಹಾಗು ಜೆಎಮ್‌ಎಫ್‌ಸಿ ಯೋಗೇಂದ್ರ ಶೆಟ್ಟಿ, ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಎಂ, ಕೋಶಾಧಿಕಾರಿ ಮಹೇಶ್ ಕೆ.ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು


ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಅವರಿಗೆ ತುಳು ನಾಡಿನ ಸಂಪ್ರದಾಯದಂತೆ ಸೀಯಾಳ, ಬಾಳೆಹಣ್ಣು, ಶಲ್ಯ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸಹಕಾರಿ ಕ್ಷೇತ್ರದಲ್ಲಿ ಚಿದಾನಂದ ಬೈಲಾಡಿ, ಸಮಾಜ ಸೇವೆಯಲ್ಲಿ ಜಯರಾಮ ಭಟ್, ಕೃಷಿ, ಸಂಘಟನೆ ಕ್ಷೇತ್ರದಲ್ಲಿ ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರಶಸ್ತಿ ವಿಜೇತ ಸಾಧಕ ದೇವಿ ಪ್ರಸಾದ್ ಕಡಮ್ಮಾಜೆ, ನಿವೃತ್ತ ಸೇನಾಧಿಕಾರಿ ಸುಧಾಕರ್ ನಿಡ್ವಣ್ಣಾಯ, ಮಹಿಳಾ ಸಂಘಟಕಿ ಹರಿಣಾಕ್ಷಿ ಜೆ ಶೆಟ್ಟಿಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟನೆ ಸಂದರ್ಭ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಮಮತಾ ಸುವರ್ಣ ಆಶಾಯಗೀತೆ ಹಾಡಿದರು. ಆಟಿ ಕೂಟ ನಿರ್ವಹಣಾ ಸಮಿತಿಯ ಸಂಯೋಜಕರಲ್ಲೊಬ್ಬರಾದ ಗೌರಿಶ್ಚಂದ್ರ ಶಾನುಭೋಗ್ ಅವರು ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ್ ರೈ ವಂದಿಸಿದರು. ವಕೀಲರಾದ ಹೀರಾ ಉದಯ್ ಮತ್ತು ತೇಜಸ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಟಿಯ ವಿಶೇಷ ತಿನಸು ಸಹಬೋಜನ ನಡೆಯಿತು.

ಬಹು ಭಾಷಾ ಕವಿ ಗೋಷ್ಠಿ:
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ ಅವರ ಅಧ್ಯಕ್ಷತೆಯಲ್ಲಿ ಬಹು ಭಾಷಾ ಕವಿ ಗೋಷ್ಠಿ ನಡೆಯಿತು. ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ್ ಕೆ.ವಿ ಕನ್ನಡದಲ್ಲಿ, ಮಾಜಿ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳ ಅರೆಭಾಷೆ, ಶಶಿಧರ್ ಅವರ ಪರವಾಗಿ ಸುಧಾಕರ್ ನಿಡ್ವಣ್ಣಾಯ ಅವರು ಶಿವಳ್ಳಿಯಲ್ಲಿ, ನೂರುದ್ದೀನ್ ಸಾಲ್ಮರ ಮಳೆಯಾಳಿ ಭಾಷೆಯಲ್ಲಿ, ಗೌರಿಶ್ಚಂದ್ರ ಶಾನುಭೋಗ್‌ರವರು ಕೊಂಕಣಿಯಲ್ಲಿ, ಉದಯರವಿ ಅವರು ಹವ್ಯಕದಲ್ಲಿ, ಸ್ವಾತಿ ಜೆ ರೈ ಅವರು ಹಿಂದಿಯಲ್ಲಿ, ಸಂಘದ ಕೋಶಾಧಿಕಾರಿ ಮಹೇಶ್ ಕೆ ಸವಣೂರು ಅವರು ತುಳುವಿನಲ್ಲಿ ಕವನ ವಾಚಿಸಿದರು. ಹಿರಿಯ ವಕೀಲ ಗೋವರ್ಧನ್ ನಾಯಕ್ ಕವಿಗೋಷ್ಠಿಯನ್ನು ಉದ್ಘಾಟಿಸಿ ತುಳು ನಾಡಿನ ಇತಿಹಾಸ ಮೆಲುಕು ಹಾಕಿದರು. ವಕೀಲ ಮಹಮ್ಮದ್ ಸಿದ್ದಿಕ್ ಶುಭ ಹಾರೈಸಿದರು. ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಸಂತೋಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುರಳಿಕೃಷ್ಣ ಚಲ್ಲಂಗರ್, ಕೃಪಾಶಂಕರ್, ಸುಧೀರ್ ತೋಳ್ಪಾಡಿ, ಶಾಕೀರ್, ಜಯಾನಂದ ಕೆ, ಎನ್ ಕೆ ಜಗನ್ನಿವಾಸ ರಾವ್, ಕಿಶೋರ್ ಕೊಳತ್ತಾಯ, ಜಯರಾಮ ರೈ, ಪ್ರಸಾದ್ ರೈ, ವನಿತಾ ಅತಿಥಿಗಳನ್ನು ಗೌರವಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಸ್ವಾಗತಿಸಿ, ಆಟಿ ಕೂಟ ನಿರ್ವಹಣಾ ಸಮಿತಿಯ ಸಂಯೋಜಕರಲ್ಲೊಬ್ಬರಾದ ಸೀಮಾ ನಾಗರಾಜ್ ವಂದಿಸಿದರು.

LEAVE A REPLY

Please enter your comment!
Please enter your name here