ಮಾಧವನ ಭಕ್ತಿಯೊಂದಿಗೆ ಮಾನವನ ಸೇವೆ ಮಾಡೋಣ: ಒಡಿಯೂರು ಶ್ರೀ
ವಿಟ್ಲ: ಹುಟ್ಟುಹಬ್ಬದ ಹೆಸರಿನಲ್ಲಿ ನಡೆಯುವ ದುಂದುವೆಚ್ಚ ಕಡಿಮೆ ಮಾಡಿ ಅಶಕ್ತರಿಗೆ ನೆರವಾಗುವ ಮನಸ್ಸು ನಮ್ಮದಾಗಬೇಕು. ಧನ ಮತ್ತು ಜೀವನ ಶಾಶ್ವತವಲ್ಲ. ನಾವು ಸಂಪಾದಿಸಿದ ಸಂಪತ್ತನ್ನು ಜನಸೇವೆಗೆ ವ್ಯಯಿಸಿದಾಗ ಅದರ ಮೌಲ್ಯ ದ್ವಿಗುಣವಾಗಲು ಸಾಧ್ಯ. ಜೇನಿನ ಗುಣ ನಮ್ಮವರಲ್ಲಿ ಮೂಡಬೇಕು. ಗುರು ಸೇವೆ ಎಂದರೆ ತತ್ವದ ಆರಾಧನೆ. ಮಾಧವನ ಭಕ್ತಿಯೊಂದಿಗೆ ಮಾನವನ ಸೇವೆ ಮಾಡೋಣ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಆ.8ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ವತಿಯಿಂದ ನಡೆದ ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ-2024, ಗುರುವಂದನ-ಸೇವಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಕಷ್ಟದಲ್ಲಿರುವವರ ಸೇವೆ ಮಾಡುವುದು ಅದು ಭಗವಂತನಿಗೆ ಮಾಡಿದ ಸೇವೆಯಾಗಿದೆ. ಹುಟ್ಟು ಹಬ್ಬದ ಹೆಸರಿನಲ್ಲಿ ಜನಪರ ಸೇವೆ ಮಾಡುತ್ತಿರುವುದು ಸಂತಸ ತಂದಿದೆ. ಮತ್ತೊಬ್ಬರ ಬದುಕಿಗೆ ಬೆಳಕಾಗುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ. ತಾನು ಬೆಳೆಯುವ ಮೂಲಕ ಇತರರನ್ನು ಬೆಳೆಸುವ ಗುಣ ನಮ್ಮದಾಗಬೇಕು. ದೇಶದ ಕೋಶ ಗಟ್ಟಿಯಾಗಬೇಕಿದೆ. ಆರ್ಥಿಕವಾಗಿ ದೇಶವನ್ನು ಗಟ್ಟಿಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಲೋಕಹಿತದ ಕಾರ್ಯದಲ್ಲಿ ನೆಮ್ಮದಿ ಹೆಚ್ಚು. ಪ್ರಕೃತಿಯ ಮೇಲಿನ ಸವಾರಿ ನಿಲ್ಲಿಸಿ ಪ್ರಕೃತಿಯ ಜೊತೆಗೆ ಬದುಕಲು ಕಲಿಯಬೇಕು. ಮಾನವೀಯ ಮೌಲ್ಯ ನಮ್ಮೊಳಗೆ ಕಡಿಮೆಯಾಗಿದೆ. ಉಪಕಾರ ಸ್ಮರಣೆಯಲ್ಲಿ ಜೀವನ ಪಾವನವಾಗಲು ಸಾಧ್ಯ ಎಂದ ಶ್ರೀಗಳು, ಜೀವನ ಸತ್ವವನ್ನು ಅರಿಯುವ ಕೆಲಸವಾಗಬೇಕು. ಆನಂದದ ಬದುಕು ನಮ್ಮದಾಗಲಿ ಎಂದರು.
ಒಡಿಯೂರು ಕ್ಷೇತ್ರ ಆಧ್ಯಾತ್ಮದ ಶಕ್ತಿಗೆ ಪುಷ್ಠಿ ನೀಡಿದ ಮಣ್ಣಾಗಿದೆ:
ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಜನರ ಕಷ್ಟ ದುಃಖಗಳಿಗೆ ಸ್ಪಂದಿಸುವ ಕೆಲಸ ಸಮಾಜದಿಂದ ನಿರಂತರವಾಗಿ ನಡೆಯಬೇಕು. ಕ್ಷೇತ್ರದಿಂದ ಮಾನವೀಯ ಮೌಲ್ಯವನ್ನು ತುಂಬುವ ಜತೆಗೆ ಆರ್ಥಿಕ ಸದೃಢತೆಯನ್ನು ಜನರಿಗೆ ನೀಡುವ ಕೆಲಸ ನಡೆಯುತ್ತಿದೆ. ಪ್ರಕೃತಿಯನ್ನು ಪ್ರೀತಿಸುವ ಕೆಲಸ ಎಲ್ಲರಿಂದ ನಡೆಯಬೇಕು. ಒಡಿಯೂರು ಕ್ಷೇತ್ರ ಆಧ್ಯಾತ್ಮದ ಶಕ್ತಿಗೆ ಪುಷ್ಠಿಯನ್ನು ನೀಡಿದ ಮಣ್ಣಾಗಿದೆ. ಹೃದಯದಲ್ಲಿ ಪ್ರೀತಿ ತುಂಬಿ ಕೆಲಸ ನಡೆಸಬೇಕೆಂಬ ಪಾಠವನ್ನು ಗುರುಗಳಿಂದ ಪಡೆದಿದ್ದೇನೆ ಎಂದು ತಿಳಿಸಿದರು.
ಶ್ರೀಗಳ ಆದರ್ಶವೇ ಜೀವನದ ಸಂದೇಶ:
ಸಾದ್ವಿ ಶ್ರೀ ಮಾತಾನಂದಮಯಿರವರು ಆಶೀರ್ವಚನ ನೀಡಿ ಮನಪರಿವರ್ತನೆಯಿಂದ ಸಮಾಜದ ಉದ್ಧಾರ ಸಾಧ್ಯ. ವಿದ್ಯಾರ್ಥಿಗಳು ಸುವ್ಯವಸ್ಥಿತ ಸಮಾಜದ ಬುನಾದಿಗಳು. ಸಂಸ್ಕಾರ ಕಲಿಸುವ ಕೆಲಸ ಕ್ಷೇತ್ರದ ವಿದ್ಯಾಪೀಠದಲ್ಲಿ ನಿರಂತರವಾಗಿ ನಡೆಯುತ್ತಿದೆ. ಗುಣಮಟ್ಟದ ಶಿಕ್ಷಣದಿಂದ ಸಮಾಜ ಉನ್ನತಿ ಸಾಧ್ಯ.ಶ್ರೀಗಳ ಸೇವೆಯಲ್ಲಿ ನಾವೂ ಭಾಗಿಗಳಾಗಿ ನಮ್ಮ ಜೀವನವನ್ನು ಸಾರ್ಥಕ್ಯ ಮಾಡೋಣ.ಶ್ರೀಗಳ ಆದರ್ಶವೇ ಜೀವನದ ಸಂದೇಶ.
ಕ್ಷೇತ್ರ ಧಾರ್ಮಿಕತೆಯೊಂದಿಗೆ ಶೈಕ್ಷಣಿಕವಾಗಿಯೂ ಬೆಳೆದಿದೆ:
ದುಬೈ ಪೋರ್ಚೂನ್ ಗ್ರೂಪ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ವಕ್ವಾಡಿರವರು ಮಾತನಾಡಿ ಕ್ಷೇತ್ರ ಬಹಳಷ್ಟು ಬದಲಾವಣೆಯಾಗಿದೆ. ಕ್ಷೇತ್ರ ಧಾರ್ಮಿಕತೆಯೊಂದಿಗೆ ಶೈಕ್ಷಣಿಕವಾಗಿಯೂ ಬೆಳೆದಿದೆ. ಧರ್ಮ ಶಿಕ್ಷಣ ನೀಡುವ ಕೆಲಸ ಕ್ಷೇತ್ರದಿಂದ ಆಗುತ್ತಿದೆ. ಕ್ಷೇತ್ರದ ಸಾಮಾಜಿಕ ಚಟುವಟಿಕೆಗಳಿಗೆ ನಾವೂ ಕೈಜೋಡಿಸಲು ಸಿದ್ದರಿದ್ದೇವೆ. ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯೋಣ ಎಂದರು.
ಸನಾತನ ಧರ್ಮವನ್ನು ಉಳಿಸುವ ಕೆಲಸ ಶ್ರೀಗಳಿಂದ ಆಗುತ್ತಿದೆ:
ಯು.ಎ.ಇ. ಒಮನ್ ನ ಆಕ್ಕೆ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ಕಂಪನಿಯ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ರವರು ಮಾತನಾಡಿ ಸನಾತನ ಧರ್ಮವನ್ನು ಉಳಿಸುವ ಕೆಲಸ ಶ್ರೀಗಳಿಂದ ನಿರಂತರವಾಗಿ ನಡೆಯುತ್ತಿದೆ. ಹೊರದೇಶದಲ್ಲೂ ಭಾರತೀಯರಿಗೆ ಘನತೆಗೌರವ ಸಿಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ನಾವೂ ಕೈಜೋಡಿಸಲು ಸಿದ್ದರಿದ್ದೇವೆ ಎಂದರು.
ಗುರುವಿನ ಋಣ ಸಂದಾಯಕ್ಕೆ ಇದೊಂದು ಅವಕಾಶ:
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಐಕಳರವರು ಮಾತನಾಡಿ ಭಾರೀ ಸಂತಸದ ಕ್ಷಣವಿದು. ಹುಟ್ಟುಹಬ್ಬದ ಹೆಸರಿನಲ್ಲಿ ಸಾಮಾಜಿಕ ಕಾರ್ಯವನ್ನು ನಡೆಸುತ್ತಿರುವಲ್ಲಿ ಶ್ರೀಗಳ ಯೋಚನೆ ಅಪಾರ. ಗುರುವಿನ ಋಣ ಸಂದಾಯಕ್ಕೆ ಇದೊಂದು ಅವಕಾಶ. ಸರ್ವ ಧರ್ಮೀಯರನ್ನು ಪ್ರೀತಿಸುವ ಶ್ರೀಗಳ ಗುಣ ಅನನ್ಯವಾದುದು. ಸಂಸ್ಥಾನಕ್ಕೆ ಶಕ್ತಿ ತುಂಬುವ ಕೆಲಸ ಎಲ್ಲರಿಂದಲೂ ಆಗಲಿದೆ. ಸಂಘಟನಾ ಶಕ್ತಿಯಿಂದ ಎಲ್ಲವನ್ನು ಸಾಽಸಲು ಸಾಧ್ಯ ಎಂದರು.
ಸದುದ್ದೇಶದಿಂದ ಮಾಡಿದ ಕ್ಷೇತ್ರದ ಕಾರ್ಯಕ್ರಮ ಇತರರಿಗೆ ಮಾದರಿ:
ಶ್ರೀಕ್ಷೇತ್ರ ಧರ್ಮಸ್ಥಳದ ನಿವೃತ್ತ ಜಮಾ ಉಗ್ರಾಣ ಮುತ್ಸದ್ದಿ ಭುಜಬಲಿ ಧರ್ಮಸ್ಥಳರವರು ಮಾತನಾಡಿ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಶ್ರೀಗಳ ಆಧ್ಯಾತ್ಮದ ಶಕ್ತಿ ಅಪಾರ. ಸದುದ್ದೇಶದಿಂದ ಮಾಡಿದ ಕ್ಷೇತ್ರದ ಕಾರ್ಯಕ್ರಮ ಇತರರಿಗೆ ಮಾದರಿ. ಜಾತಿ ಭೇದ ಮರೆತು ಒಂದಾದರೆ ಅಲ್ಲಿ ಯಶಸ್ಸು ಹೆಚ್ಚು ಎಂದರು.
ಸಮಾಜವನ್ನು ಕಟ್ಟುವ ಕೆಲಸ ಒಡಿಯೂರು ಶ್ರೀಗಳಿಂದ ಆಗುತ್ತಿದೆ:
ಎನ್.ಐ.ಎ.ನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಕಡಂದಲೆಪರಾರಿ ಪ್ರಕಾಶ್ ಎಲ್. ಶೆಟ್ಟಿರವರು ಮಾತನಾಡಿ ಇದೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯವಾಗಿದೆ. ಸಮಾಜವನ್ನು ಕಟ್ಟುವ ಕೆಲಸ ಒಡಿಯೂರು ಶ್ರೀಗಳಿಂದ ನಿರಂತರವಾಗಿ ನಡೆಯುತ್ತಿದೆ. ಧರ್ಮ ಸಂಸ್ಕೃತಿ ಬೆಳೆಸುವ ಕೆಲಸ ಸಂಸ್ಥಾನದಿಂದ ಆಗುತ್ತಿದೆ. ಇಂತಹ ಕ್ಷೇತ್ರದಿಂದ ಧರ್ಮದ ರಕ್ಷಣೆ ಸಾಧ್ಯ. ನಮ್ಮ ಧರ್ಮದ ರಕ್ಷಣೆ ನಮ್ಮ ಕರ್ತವ್ಯ. ಇತರ ಧರ್ಮವನ್ನು ಪ್ರೀತಿಸುವ ಮನಸ್ಸು ನಮ್ಮದಾಗಬೇಕು. ಧರ್ಮ ರಕ್ಷಣೆಯ ಜಾಗೃತಿ ಎಲ್ಲರಲ್ಲೂ ಮೂಡಲಿ ಎಂದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಎ.ಸಿ.ಭಂಡಾರಿ, ಹೈಟೆಕ್ ಇಲೆಕ್ಟ್ರಿಫಿಕೇಶನ್ ಇಂಜಿನಿಯರಿಂಗ್ (ಪ್ರೈ)ಲಿ.. ಮುಂಬೈ ಇದರ ಆಡಳಿತ ನಿರ್ದೇಶಕ ರವಿನಾಥ್ ವಿ. ಶೆಟ್ಟಿ, ಅಂಕ್ಲೇಶ್ವರ, ಶ್ರೀಗಳ ಜನ್ಮದಿನೋತ್ಸವ ಸಮಿತಿ ಮುಂಬೈ ಸಮಿತಿ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಶ್ರೀಗಳ ಜನ್ಮದಿನೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ, ಪನೆಯಡ್ಕ ಲಿಂಗಪ್ಪ ಗೌಡ, ಸ್ವಾಗತ ಸಮಿತಿ ಅಧ್ಯಕ್ಷರಾದ ಎ ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಽಕಾರಿ ಮಾತೇಶ್ ಭಂಡಾರಿ ಗ್ರಾಮವಿಕಾಸ ಯೋಜನೆಯ ವರದಿ ಮಂಡಿಸಿದರು.
ಇದೇ ಸಂದರ್ಭದಲ್ಲಿ ನಿಡುವಜೆ ಶ್ರೀ ಮಹಾಬಲೇಶ್ವರ ಭಟ್ (ಪಾಮರ) ಸಂಕಲನದ ‘ಶ್ರೀಮದ್ಭಗವದ್ಗೀತಾ ತ್ರಿಭಾಷಾ’ ಶಬ್ದಾರ್ಥ ಕೋಶ ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಮುಂಬೈ ಸಮಿತಿಯ ಒಡಿಯೂರು ಶ್ರೀಗುರುದೇವ ಸೇವಾಬಳಗದ ಪ್ರಕಾಶ್ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು.ಜನ್ಮದಿನೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು.
ವೈದಿಕ – ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಗ್ಗೆ 8ಗಂಟೆಯಿಂದ ಶ್ರೀ ಗಣಪತಿ ಹವನ ನಡೆಯಿತು. ಬೆಳಗ್ಗೆ ಗಂಟೆ 9ರಿಂದ ರವಿರಾಜ್ ಶೆಟ್ಟಿ ಮತ್ತು ಬಳಗದವರಿಂದ ನಾಮಸಂಕೀರ್ತನೆ ನಡೆಯಿತು. ಬಳಿಕ ಲೋಕನಾಥ ಶೆಟ್ಟಿ ತಾಳಿಪ್ಪಾಡಿಗುತ್ತು ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಬಳಿಕ ಗುರುಬಂಧುಗಳಿಂದ ಜೇನುತುಪ್ಪದಲ್ಲಿ ಶ್ರೀಗಳ ತುಲಾಭಾರ ಸೇವೆ ನಡೆಯಿತು. ಉಯ್ಯಾಲೆ ಸೇವೆ, ಗುರುವಂದನೆ ನಡೆಯಿತು ಮಧ್ಯಾಹ್ನ ಗಂ.1.ರಿಂದ ಮಹಾಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ ಗಂಟೆ 3 ರಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ’ಒಡಿಯೂರ ಶ್ರೀ ದತ್ತಾಂಜನೇಯ’ ಯಕ್ಷಗಾನ ತಾಳಮದ್ದಳೆ ನಡೆಯಿತು.
ರಾತ್ರಿ ಘಂಟೆ 7 ರಿಂದ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ, ಮಹಾಪೂಜೆ ನಡೆಯಿತು.
ಸಮಾಜಮುಖಿ ಕಾರ್ಯಕ್ರಮಗಳು
ಸ್ವಚ್ಚತಾ ಕಾರ್ಯಕ್ರಮ
ವೈದ್ಯಕೀಯ ಶಿಬಿರ
ಸಸಿ ವಿತರಣೆ
ರಕ್ತದಾನ ಶಿಬಿರ
ಆರೋಗ್ಯ ಮಾಹಿತಿ
ಕೃಷಿ ನಾಟಿ
ಆಟಿಡೊಂಜಿ ದಿನ
ಕಾನೂನು ಮಾಹಿತಿ/ ಮಹಿಳಾ ಸಬಲೀಕರಣ
ಭಜನಾ ಕಾರ್ಯಕ್ರಮ
ನಾಟಿ ವೈದ್ಯೆಗೆ ಗೌರವಾರ್ಪಣೆ
ಸೇವಾ ಚಟುವಟಿಕೆ
*ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆಗೆ ಸಹಕಾರ
*ಮನೆ ನಿರ್ಮಾಣಕ್ಕೆ ಸಹಾಯ
*ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ಸಹಕಾರ
*ಮರಣ ಸಾಂತ್ವನ (ಮನೆಯವರಿಗೆ)
*ಉಚಿತ ಕನ್ನಡಕ ವಿತರಣೆ