ಪುತ್ತೂರು: ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ವಿಶ್ವ ಸಮುದಾಯಕ್ಕೆ ವಿಶ್ವಹಿಂದು ಪರಿಷತ್ ಆಗ್ರಹಿಸಿದೆ.
ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಬಾಂಗ್ಲಾದ ಹೊಸ ಸರಕಾರ ಅಲ್ಲಿನ ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಕೊಡಬೇಕು ಮತ್ತು ದಾಳಿಯಿಂದ ನಾಶಗೊಂಡ ಹಿಂದೂ ಧರ್ಮೀಯರ ಮನೆ ಮತ್ತು ದೇವಾಲಯಗಳನ್ನು ಪುನರ್‌ನಿರ್ಮಾಣ ಮಾಡುವಂತೆ ನಾವು ಒತ್ತಾಯ ಮಾಡಲಿದ್ದೇವೆ ಎಂದು ವಿಶ್ವಹಿಂದು ಪರಿಷತ್ ನ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಪ್ರಪಂಚದಾದ್ಯಂತ ಇರುವ ಎಲ್ಲಾ ಹಿಂದೂಗಳು ಒಗ್ಗಟ್ಟಾಗಿ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಅಲ್ಲಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬಾಂಗ್ಲಾದಲ್ಲಿನ ಮೀಸಲಾತಿ ವಿಚಾರ, ವಿದ್ಯಾರ್ಥಿಗಳ ಪ್ರತಿಭಟನೆ ಇದ್ದರೂ ನಂತರದ ಬೆಳವಣಿಗೆಯಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿ ದಾಳಿ ನಡೆಯುತ್ತಿದೆ. ದೇವಸ್ಥಾನ ಧ್ವಂಸ ಮಾಡುವ ಮೂಲಕ ರಾಕ್ಷಸಿ ಕೃತ್ಯ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಲ್ಲಿರುವ ಶೇ.8ರಷ್ಟು ಅಲ್ಪಸಂಖ್ಯಾತ ಹಿಂದೂಗಳಿಗೆ ಜೀವನ ನಡೆಸಲು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಲ್ಲಿರುವ ಹಿಂದೂಗಳಿಗೆ ಸೂಕ್ತ ಭದ್ರತೆ ನೀಡಲು ಅಲ್ಲಿನ ಸರಕಾರಕ್ಕೆ ಒತ್ತಡ ಹೇರಬೇಕು ಎಂಬುವುದು ನಮ್ಮ ಆಗ್ರಹ.ಭಾರತ ಬಿಟ್ಟು ಬೇರೆ ಎಲ್ಲಾ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರೇ ಆಗಿದ್ದಾರೆ. ಅಲ್ಲಿ ಅವರಿಗೆ ತೊಂದರೆ ಆದಾಗ ಭಾರತದ ನೆರವು ಬೇಕು. ಈ ನಿಟ್ಟಿನಲ್ಲಿ ಬಾಂಗ್ಲಾ ಸಹಿತ ಯಾವುದೇ ದೇಶದ ಹಿಂದೂಗಳು ಭಾರತಕ್ಕೆ ಬಂದರೆ ಅವರಿಗೆ ಭಾರತ ಆಶ್ರಯ ಕೊಡಬೇಕು. ಸಿಎಎ ಮೂಲಕ ಅವರಿಗೆ ಬೇಕಾದ ಸೌಲಭ್ಯಕೊಡಬೇಕು ಎಂದು ಡಾ. ಕೃಷ್ಣಪ್ರಸನ್ನ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಕೋಶಾಧಿಕಾರಿ ಮಾದವ ಪೂಜಾರಿ, ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.