ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ʼಶೀಂಟೂರು ಸ್ಮತಿ-2024′

0

ಸೈನಿಕ, ಶಿಕ್ಷಕನಾಗಿ ಶೀಂಟೂರು ನಾರಾಯಣ ರೈಯವರ ಸೇವೆ ಅನನ್ಯ- ಕ್ಯಾ. ಬ್ರಿಜೇಶ್ ಚೌಟ

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕ ಶೀಂಟೂರು ನಾರಾಯಣ ರೈಯವರ 13ನೇ ವರ್ಷದ ಸ್ಥಾಪಕರ ದಿನಾಚರಣೆ `ಶೀಂಟೂರು ಸ್ಮತಿ-2024′ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ಆ.14ರಂದು ಜರಗಿತು.

ಸೈನಿಕ, ಶಿಕ್ಷಕನಾಗಿ ಶೀಂಟೂರು ನಾರಾಯಣ ರೈಯವರ ಸೇವೆ ಅನನ್ಯ- ಕ್ಯಾ. ಬ್ರಿಜೇಶ್ ಚೌಟ
ದ.ಕ.ಸಂಸದ, ಮಾಜಿ ಸೈನಿಕ ಕ್ಯಾ|ಬ್ರಿಜೇಶ್ ಚೌಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಭಾರತ ವಿಶ್ವಕ್ಕೆ ಮಾರ್ಗದರ್ಶನ ನೀಡಿ, ವಿಶ್ವಗುರುವಾಗಿ ಜಗತ್ತು ಭಾರತದ ಬಗ್ಗೆ ಹೆಮ್ಮೆ ಪಡುವ ಈ ಪರ್ವಕಾಲದ ಸಂದರ್ಭದಲ್ಲಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಭಾರತ ಅಭಿವೃದ್ಧಿಯ ಪರ್ವದಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಿ ದೇಶದ ಆಭಿವೃದ್ಧಿಯ ಬಗ್ಗೆ ಚಿಂತನೆ ಮಾಡಬೇಕು. ಎಲ್ಲರನ್ನೂ ಒಟ್ಟಾಗಿ, ಒಂದಾಗಿ ಹೋಗುವ ಕರೆದುಕೊಂಡು ಹೋಗುವ ಮಾನಸಿಕತೆ ಸೈನಿಕರಲ್ಲಿ ಇದೆ. ಯೋಧ ಮತ್ತು ಶಿಕ್ಷಕನಾಗಿ ಸೇವೆಸಲ್ಲಿಸಿದ ಶೀಂಟೂರು ನಾರಾಯಣ ರೈಯವರು ದೇಶ ಸೇವೆ ಮಾಡಿ, ಬಳಿಕ ಸಾವಿರಾರು ವಿದ್ಯಾರ್ಥಿಗಳಿಗೆ ಪಾಲಿಗೆ ಗುರುಗಳಾಗಿ ಸಲ್ಲಿಸಿದ ಸೇವೆ ಅನನ್ಯವಾಗಿದ್ದು, ಇವರ ಪುತ್ರ ಸವಣೂರು ಸೀತಾರಾಮ ರೈಯವರು ತಂದೆಯವರ ಆಶಯದಂತೆ ಉತ್ತಮವಾದ ಶಿಕ್ಷಣ ಸಂಸ್ಥೆಯನ್ನು ಸವಣೂರಿನಂಥ ಗ್ರಾಮೀಣ ಭಾಗದಲ್ಲಿ ಕಟ್ಟಿ ಬೆಳೆಸಿದ್ದಾರೆ. ಇದು ನಿಜಕ್ಕೂ ಮೆಚ್ಚುವ ಕೆಲಸ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಕಲಿಕೆಯೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಸೇನೆಗೆ ನೀಡುವ ಗೌರವ ನೀಡಿ ಗೌರವಿಸಿ, ಸನ್ಮಾನಿಸಲಾಯಿತು.

ರೂಪಕಲಾ ಕೆರವರಿಗೆ ಶೀಂಟೂರು ಸನ್ಮಾನ'
ಪ್ರತಿ ವರ್ಷದಂತೆ ನೀಡುವಶೀಂಟೂರು ಸನ್ಮಾನ’ವನ್ನು ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯನಿ ರೂಪಕಲಾ ಕೆ.ಅವರಿಗೆ ನೀಡಿ ಗೌರವಿಸಲಾಯಿತು. ರೂಪಕಲಾರವರ ಪತಿ ಜಗನ್ನಾಥ ರೈಯವರು ಸನ್ಮಾನದ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ರೂಪಕಲಾ ಅವರು ಮಾತನಾಡಿ, ಶೀಂಟೂರು ನಾರಾಯಣ ರೈಯವರ ಹೆಸರಿನ ಸನ್ಮಾನದ ಪುರಸ್ಕಾರವನ್ನು ಪಡೆದಿರುವುದು ನನ್ನ ಪಾಲಿಗೆ ದೊರೆತ ದೊಡ್ಡ ಯೋಗ ಎಂದು ಹೇಳಿದರು.

ಸವಣೂರು ಶಿಕ್ಷಣ ಕಾಶಿ- ಚಂದ್ರಶೇಖರ್ ಪೇರಾಲು
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೇರಾಲು ಅವರು ಶೀಂಟೂರು ಸಂಸ್ಮರಣೆಯಲ್ಲಿ ಮಾತನಾಡಿ, ಸಹಕಾರಿಯಾಗಿ ದುಡಿದ ಶೀಂಟೂರು ನಾರಾಯಣ ರೈ ಬಳಿಕ ಸೇನೆಗೆ ಸೇರಿದರು. ಬಳಿಕ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿ, ಶಿಸ್ತಿನ ಸಿಪಾಯಿಯಾಗಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯ ರತ್ನವಾದರು, ಶಿಕ್ಷಕ ವೃತ್ತಿಯ ಜೊತೆ ಕೃಷಿ ಕಾಯಕದಲ್ಲೂ ಕೈಜೋಡಿಸಿದರು, ತನ್ನ ಏಳು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಶೀಂಟೂರು ನಾರಾಯಣ ರೈಯವರು ನೀಡಿ, ಬೆಳೆಸಿದ್ದಾರೆ. ಸೀತಾರಾಮ ರೈ ಅವರ ತನ್ನ ತಂದೆಯ ಮಾತಿನಂತೆ 2001ರಲ್ಲಿ ಸವಣೂರಿನಲ್ಲಿ ವಿದ್ಯಾರಶ್ಮಿ ಎಂಬ ಶಿಕ್ಷಣ ಸಂಸ್ಥೆಯನ್ನು ಕಟ್ಟಿದರು. ಇಂದು ಸವಣೂರು ಶಿಕ್ಷಣ ಕಾಶಿಯಾಗಿ ರಾಜ್ಯದಲ್ಲಿಯೇ ಗುರುತಿಸಿದೆ ಎಂದರು.

ಸೀತಾರಾಮ ರೈಯವರಿಗೆ ಸಮಾಜದ ಬಗ್ಗೆ ಕಾಳಜಿ-ರವೀಂದ್ರನಾಥ ಆಳ್ವ
ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್‌ನ ಮಾಲಕ ಮಲಾರ್‌ಬೀಡು ರವೀಂದ್ರನಾಥ ಆಳ್ವ ಮಾತನಾಡಿ, ಸೀತಾರಾಮ ರೈ ಗ್ರಾಮೀಣ ಭಾಗದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿರುವ ಅವರ ಸಾಹಸವನ್ನು ಮೆಚ್ಚಬೇಕು. ಸೀತಾರಾಮ ರೈ ಅವರಿಗೆ ಸಮಾಜದ ಬಗ್ಗೆ ಇವರ ಕಾಳಜಿಯ ಬಗ್ಗೆ ಎಲ್ಲರೂ ಮತ್ತಷ್ಟು ಪ್ರೋತ್ಸಾಹವನ್ನು ನೀಡಬೇಕು ಎಂದರು.

ಪರಿಸರ ಶಾಸ್ತ್ರ ಅಧ್ಯಯನ ಸಂಶೋಧನಾ ಕೇಂದ್ರ- ಡಾ.ಆರ್.ಕೆ.ನಾಯರ್
ಗುಜರಾತ್‌ನ ಗ್ರೀನ್ ಹೀರೋ ಆಫ್ ಇಂಡಿಯಾದ ಫಾರೆಸ್ಟ್ ಕ್ರಿಯೇಟರ್‌ನ ಸಹ ಸ್ಥಾಪಕ ಡಾ.ಆರ್.ಕೆ.ನಾಯರ್‌ ಮಾತನಾಡಿ, ನಾವು ಸಮಾಜದ ಹಿತಕ್ಕಾಗಿ ಬದುಕು ಕಟ್ಟಬೇಕು, ಪುಸ್ತಕದ ಜ್ಞಾನದ ಜೊತೆ ಲೋಕಜ್ಞಾನ ನಮ್ಮಲ್ಲಿ ಬೆಳೆಯಬೇಕು. ಪರಿಸರವನ್ನು ಉಳಿಸುವ ಕಾಯಕ ಆದಾಗ ಮಾತ್ರ ನಮ್ಮ ಮುಂದಿನ ಪೀಳಿಗೆ ಬಾಳಲು ಸಾಧ್ಯ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪರಿಸರ ಶಾಸ್ತ್ರ ಅಧ್ಯಯನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವಂತೆ ಸಲಹೆಯನ್ನು ನೀಡಿ, ಈ ಕೇಂದ್ರ ಸವಣೂರಿನಲ್ಲಿ ಸ್ಥಾಪನೆಯಾದಲ್ಲಿ ದೇಶ-ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಪರಿಸರ ಅಧ್ಯಯನಕ್ಕೆ ಬರುತ್ತಾರೆ. ಇದಕ್ಕೆ ನನ್ನ ಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಉತ್ತಮವಾದ ಸಂದೇಶ- ರವೀಂದ್ರ ಶೆಟ್ಟಿ
ದ.ಕ. ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ನಡುಮನೆ ಮಾತನಾಡಿ, ಸೀತಾರಾಮ ರೈ ನಮ್ಮ ಒಕ್ಕೂಟದ ಗೌರವಾಧ್ಯಕ್ಷರಾಗಿ ಉತ್ತಮ ಸಲಹೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಶೀಂಟೂರು ನಾರಾಯಣ ರೈಯವರ ವಿಚಾರಗಳು ವಿದ್ಯಾರ್ಥಿಗಳ ಪಾಲಿಗೆ ಉತ್ತಮವಾದ ಸಂದೇಶವಾಗಿದೆ ಎಂದರು.

ಸಾಧಕರ ಜೀವನವನ್ನು ಮೈಗೂಡಿಸಿಕೊಳ್ಳಬೇಕು- ಅಶ್ವಿನ್ ಎಲ್ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಮಾತನಾಡಿ, ಜೀವನದಲ್ಲಿ ಉತ್ತಮವಾದ ಗುರಿಯನ್ನು ಹೊಂದಬೇಕು, ಅದಕ್ಕಾಗಿ ನಾವು ಸಾಧಕರ ಜೀವನ ಪಾಠವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

22 ಎಕ್ರೆ ಜಾಗದಲ್ಲಿ 20 ಕೋಟಿ ರೂಪಾಯಿವೆಚ್ಚದಲ್ಲಿ ವಿದ್ಯಾರಶ್ಮಿ ಸಂಸ್ಥೆ- ಸೀತಾರಾಮ ರೈ
ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ನನ್ನ ತಂದೆಯವರ ಆಶಯದಂತೆ 22 ಎಕ್ರೆ ಜಾಗದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಸವಣೂರಿನಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದೇವೆ. ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಈ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದು, ಎಲ್ಲರ ಸಹಕಾರ ಮತ್ತು ಪ್ರೋತ್ಸಾಹ ಸದಾ ನಮ್ಮ ಸಂಸ್ಥೆಯ ಮೇಲೆ ಇರಲಿ ಎಂದು ಹೇಳಿದ್ದಾರೆ.

ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ವಿಶ್ವಸ್ಥ ಎನ್.ಸುಂದರ ರೈ ನಡುಮನೆ ಅತಿಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ಟ್ರಸ್ಟಿಗಳಾದ ರಶ್ಮಿ ಆಶ್ವಿನ್ ಶೆಟ್ಟಿ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ಸ್ವತಂತ್ರ ಪ.ಪೂ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳರವರು ಕ್ಯಾ. ಬ್ರಿಜೇಶ್ ಚೌಟರವರ ಪರಿಚಯ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವರವರು ಚಂದ್ರಶೇಖರ್ ಪೇರಾಲರವರ ಪರಿಚಯಗೈದರು.

ಶೀಂಟೂರು ನಾರಾಯಣ ರೈ ಬಗ್ಗೆ ಸೀತಾರಾಮ ಕೇವಳರವ ರಚಿಸಿದ ಶೀಂಟೂರು ಹಾಡನ್ನು ವಿದ್ಯಾರ್ಥಿನಿ ಸನಾ ಫಾತಿಮಾ ಮತ್ತು ಬಳಗದವರು ಹಾಡಿದರು.
ಉಪನ್ಯಾಸಕಿಯರಾದ ಸುಮಾ, ನಿರೀಶ್ಮಾ, ಚೇತನಾ, ಉಮಾವತಿರವರುಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು. ವಿದ್ಯಾರ್ಥಿಗಳಾದ ಶ್ರುತಾ, ರಶ್ಮಿತಾ, ವೈಷ್ಣವಿ, ಪ್ರಾಪ್ತಿ, ಲಾಸ್ಯ, ವಿದಿಶಾ ಪ್ರಾರ್ಥನೆಗೈದರು. ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಸರಕಾರದ ಅಧ್ಯಕ್ಷೆ ಯಶಸ್ವಿ ರೈ ಸಂವಿಧಾನದ ಪೀಠಿಕೆ ವಾಚನಗೈದರು. ಎನ್.ಜಯಪ್ರಕಾಶ್ ರೈ ವಂದಿಸಿದರು, ಉಪನ್ಯಾಸಕಿ ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು.

10 ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಶೀಂಟೂರು ಶಿಷ್ಯ ವೇತನ:
ವಿದ್ಯಾರಶ್ಮಿ ವಿದ್ಯಾಲಯದ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ ಹೆಗ್ಡೆಯವರು ಪ್ರಸ್ತಾಪಿಸಿ ಮುಂದಿಟ್ಟ ಯೋಜನೆಯೇ ಶೀಂಟೂರು ನಾರಾಯಣ ರೈ ಶಿಕ್ಷಣ ಪ್ರತಿಷ್ಠಾನ ಸವಣೂರು ಆಗಿದ್ದು, ಆ ಸಂದರ್ಭ ಎ.ಜೆ ಆಸ್ಪತ್ರೆಯ ಡಾ|ಎ.ಜೆ.ಶೆಟ್ಟಿಯವರು ಮೊತ್ತ ಮೊದಲಾಗಿ ತಮ್ಮ ಕೈಯಾರೆ 10 ಲಕ್ಷ ರೂಪಾಯಿಯನ್ನು ನೀಡಿದ್ದರು. ಅದಾದ ಬಳಿಕ ವಿನಯ ಹೆಗ್ಡೆ ರೂ.2 ಲಕ್ಷ ನೀಡಿದ್ದಾರೆ.ಇದರಿಂದ ಬರುವ ಬಡ್ಡಿ ಹಣವನ್ನು ಪ್ರತಿಭಾವಂತ ಮತ್ತು ಆರ್ಥಿಕ ಸಂಕಷ್ಟದಲ್ಲಿ ಇರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶಿಷ್ಯ ವೇತನವಾಗಿ ನೀಡಬೇಕೆಂದು ನಿರ್ದೇಶಿಸಿದ್ದರು. ಇದರಿಂದ ಪ್ರೇರಿತರಾಗಿ ಮುಂದೆ ಹಲವು ಮಂದಿ ಸಹೃದಯಿ ದಾನಿಗಳು ಸ್ವಯಂ ಇಚ್ಚೆಯಿಂದ ಉತ್ತಮ ಮೊತ್ತವನ್ನು ನೀಡುತ್ತಾ ಬಂದಿದ್ದಾರೆ. ಆದರಂತೆ ಪ್ರತಿ ವರ್ಷ ಶೀಂಟೂರು ಸ್ಮತಿ ಕಾರ್‍ಯಕ್ರಮದಲ್ಲಿ ನಮ್ಮ ವಿದ್ಯಾಸಂಸ್ಥೆಯ ವಿವಿಧ ತರಗತಿಗಳ ಹತ್ತು ಮಂದಿ ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಗಳನ್ನು ಗುರುತಿಸಿ, ತಲಾ 5 ಸಾವಿರದಂತೆ ಶಿಷ್ಯ ವೇತನವನ್ನು ನೀಡುತ್ತಿದ್ದು, ಈ ಬಾರಿ ಯು.ಕೆ.ಜಿಯ ಮಹಮ್ಮದ್ ಝಯಾನ್, 5ನೇ ತರಗತಿಯ ಮನ್ವಿತ್ ಹೆಚ್ ಆಚಾರ್ಯ, 7ನೇ ತರಗತಿಯ ಕೃಪಾಲಿ ಎಸ್.ಡಿ., 8ನೇ ತರಗತಿಯ ಜಶ್ವಿತ್ ಕೆ, 10ನೇ ತರಗತಿಯ ಧನುಷ್ ಎಂ.ಎಸ್., ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಝ್ಮಿಯತ್ ಸಫಾ, ವಾಣಿಜ್ಯ ವಿಭಾಗದ ಕೆ.ಯಶಸ್ವಿ ರೈ, ಪ್ರಥಮ ಬಿ.ಸಿ.ಎಯ ಯಶ್ವಿನಿ ಪಿ.ಆರ್, ಅಂತಿಮ ಬಿಕಾಂನ ಶಿಲ್ಪ ಎನ್, ಶೀಲ ಕೆ. ಡಿ ಅವರಿಗೆ ಶಿಷ್ಯ ವೇತನವನ್ನು ವಿದ್ಯಾರಶ್ಮಿ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈಯವರು ವಿತರಿಸಿದರು.

ಕಾರ್‍ಯಕ್ರಮದ ಹೈಲೈಟ್ಸ್
ಶೀಂಟೂರು ಸ್ಮೃತಿ ಕಾರ್‍ಯಕ್ರಮ ಅರ್ಥಪೂರ್ಣ ರೀತಿಯಲ್ಲಿ ನಡೆಯಿತು. ಉದ್ಘಾಟಕರು, ಅಧ್ಯಕ್ಷರು, ಅತಿಥಿಗಳ ಭಾಷಣ ಅರ್ಥಪೂರ್ಣವಾಗಿತ್ತು.
ಅಡಿಕೆಯ ಹಾಳೆಯ ಮುಟ್ಟಾಳೆ ಧರಿಸಿಕೊಂಡು ವೇದಿಕೆಯಲ್ಲಿ ಆಸಿನರಾದ ಪರಿಸರ ಪ್ರೇಮಿ ಆರ್.ಕೆ.ನಾಯರ್‌ರವರು ವಿಶೇಷ ಆಕರ್ಷಣೆಯಾಗಿದ್ದರು. ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ ಪುಸ್ತಕ ಊಡುಗರೆ ವಿಶೇಷವಾಗಿತ್ತು. ಸಮಯಕ್ಕೆ ಸರಿಯಾಗಿ ಕಾರ್‍ಯಕ್ರಮ ನಡೆದು ಎಲ್ಲರ ಮೆಚ್ಚುಗೆಗಳಿಸಿತು.

ಶೀಂಟೂರುರವರ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ
ಶೀಂಟೂರು ನಾರಾಯಣ ರೈ ಅವರ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಅವರ ನೆನಪಿನಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ`ಶೀಂಟೂರು ಸ್ಮತಿ’ ಕಾರ್ಯಕ್ರಮದಲ್ಲಿ ಒಂದು ವರ್ಷ ಒಬ್ಬ ಶಿಕ್ಷಕ ಮತ್ತು ಇನ್ನೊಂದು ವರ್ಷದಲ್ಲಿ ಒಬ್ಬ ಸೇನಾನಿಯನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತಾ ಬಂದಿದ್ದೇವೆ. ಈ ಬಾರಿ ಶಿಕ್ಷಕರನ್ನು ಸನ್ಮಾನಿಸುತ್ತಿದ್ದೇವೆ. ಕಾಕತಾಳೀಯವಾಗಿ ನೂತನ ಸಂಸದರು ಮಾಜಿ ಸೈನಿಕರೂ ಆಗಿರುವುದರಿಂದ ಅವರನ್ನೂ ಸನ್ಮಾನಿಸಿದ್ದೇವೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here