ಅಸಮರ್ಪಕ ಕಾಮಗಾರಿ ನಡೆದ ಬಗ್ಗೆ ಗ್ರಾಮಸ್ಥರ ಆರೋಪ – ಜಲಜೀವನ್ ಮಿಷನ್ ಯೋಜನೆಯ ಇಂಜಿನಿಯರ್ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ – ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬರೆಯಲು ನಿರ್ಧಾರ
ನಿಡ್ಪಳ್ಳಿ; ಜಲಜೀವನ್ ಮಿಷನ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅಸಮರ್ಪಕ ಕಾಮಗಾರಿ ನಡೆಸಿ ಅರ್ಧದಲ್ಲಿ ಬಿಟ್ಟು ಹೋದ ಇಂಜಿನಿಯರ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶಿತರಾಗಿ ಆಗ್ರಹಿಸಿದ ಘಟನೆ ನಿಡ್ಪಳ್ಳಿ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ನಡೆಯಿತು.
ಗ್ರಾಮ ಸಭೆ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ಆ.14ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಪ್ರಕಾಶ್ ಬೋರ್ಕರ್ ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಇವತ್ತು ಜಿಲ್ಲಾ ಪಂಚಾಯತ್ ಇಂಜಿನಿಯರ್ ಸಭೆಗೆ ಬರಬೇಕಿತ್ತು, ಯಾಕೆ ಬರಲಿಲ್ಲ? ಅವರು ಬಾರದೆ ಸಭೆ ಮುಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಧ್ವನಿ ಗೂಡಿಸಿದ ಗ್ರಾಮಸ್ಥರಾದ ಸತ್ಯನಾರಾಯಣ ರೈ, ಹರೀಶ್ ಕುಮಾರ್, ನಾರಾಯಣ ನಾಯ್ಕ ಕೇವಲ ನಳ್ಳಿ ಹಾಕಿ ಹೋಗಿದ್ದಾರೆ, ಆದರೆ ನೀರು ಬರುತ್ತಿಲ್ಲ. ನಳ್ಳಿಯನ್ನು ಮನೆ ಹತ್ತಿರ ಹಾಕದೆ ಎಲ್ಲೆಲ್ಲೋ ಹಾಕಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಇಲ್ಲದಿದ್ದರೆ ಕಳೆದ ಗ್ರಾಮ ಸಭೆಗೂ ಇಂಜಿನಿಯರ್ ಬರಲಿಲ್ಲ. ಈ ಸಭೆಗೂ ಬರಲಿಲ್ಲ ಯಾಕೆ. ಅವರನ್ನು ಅಮಾನತು ಮಾಡಬೇಕು ಎಂದು ಪ್ರಕಾಶ್ ಬೋರ್ಕರ್ ಮತ್ತಿತರರು ಆಗ್ರಹಿಸಿದರು. ಪಂಚಾಯತ್ ನ ಕೆಲವು ಸದಸ್ಯರು ಕೂಡ ಧ್ವನಿ ಗೂಡಿಸಿ ಸಮರ್ಪಕವಾಗಿ ಕಾಮಗಾರಿ ನಡೆದಿಲ್ಲ ಮತ್ತು ಹಳೆ ಪೈಪು ಲೈನಿಗೆ ಇವರು ಸಂಪರ್ಕ ಜೋಡಿಸಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದಾರೆ ಎಂದು ದೂರಿದರು. ಕೆಲವು ಕಡೆ ಮಣ್ಣಿನ ಒಳಗೆ ಹಾಕಿದ ಪೈಪುಗಳು ಹೊರಗೆ ಕಾಣುತ್ತಿದೆ ಎಂದರು.
ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ಗ್ರಾಮ ಸಭೆಗೆ ನೀವು ಬರಬೇಕು ಎಂದು ಇಂಜಿನಿಯರ್ ಗೆ ನಾವು ಹೇಳಿದ್ದು, ನಿಮ್ಮಿಂದ ಅಗತ್ಯ ಮಾಹಿತಿ ಬೇಕು ಎಂದು ಹೇಳಿದ್ದೇನೆ. ಆದರೆ ಬರಲಿಲ್ಲ ಎಂದರು. ಕಾಮಗಾರಿ ಪೂರ್ಣಗೊಳಿಸದೆ ಬಿಲ್ಲು ಪೆಂಡಿಂಗ್ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಬರೆಯುವ ಎಂದು ಅಧ್ಯಕ್ಷರು ಸಮಾಧಾನ ಪಡಿಸಿದರು. ನಂತರ ಚರ್ಚಿಸಿ ಅವರ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬರೆಯುವ ಬಗ್ಗೆ ನಿರ್ಣಯಿಸಲಾಯಿತು. ಇಂಜಿನಿಯರ್ ಅವರಿಗೆ ದೂರವಾಣಿ ಮೂಲಕ ಸತ್ಯನಾರಾಯಣ ರೈ ವಿಚಾರಿಸಿದ ಘಟನೆಯೂ ನಡೆಯಿತು. ವಿಚಾರಿಸಿದಾಗ ನನಗೆ ಬೇರೆ ಮೀಟಿಂಗ್ ಇತ್ತು. ಇನ್ನು ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿದ ಇಂಜಿನಿಯರ್ ಸಭೆ ಮುಗಿಯುವವರೆಗೂ ಬರಲಿಲ್ಲ.
ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಲಿ- ನೀರುಕ್ಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಅಲ್ಲಿ ಪರಿಶಿಷ್ಟ ಪಂಗಡದ ಮನೆಗಳು ಜಾಸ್ತಿ ಇದ್ದು ನೀರಿನ ಕೊರತೆ ಇದೆ ಅಲ್ಲಿ ನೀರಿನ ಲಭ್ಯತೆ ಕಡಿಮೆ ಇದೆ ಎಂದು ಗ್ರಾಮಸ್ಥ ಕೆ.ಎನ್.ಪಾಟಾಳಿ ಹೇಳಿದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು ನೀರಿನ ಲಭ್ಯತೆ ಕಡಿಮೆ ಇದ್ದು ಅದರ ಬದಲಿ ವ್ಯವಸ್ಥೆಗೆ ಅನುದಾನ ಇಟ್ಟು ವ್ಯವಸ್ಥೆ ಮಾಡ ಬೇಕಾಗಿದೆ ಎಂದು ಹೇಳಿದರು. ನೀರುಕ್ಕು ಬಿಟ್ಟರೆ ಬೇರೆ ಎಲ್ಲಿಯೂ ಅಷ್ಟು ಸಮಸ್ಯೆ ಇಲ್ಲ ಎಂದು ಉತ್ತರಿಸಿದ ಅಧ್ಯಕ್ಷರು ಸಮಸ್ಯೆ ಸರಿ ಪಡಿಸಲು ಕ್ರಮ ಕೈಗೊಳ್ಳುವ ಎಂದರು. ಪಂಪು ಚಾಲಕರು ಮತ್ತು ಸಾರ್ವಜನಿಕರ ಸಹಕಾರ ಇದ್ದರೆ ಸಮಸ್ಯೆ ಪರಿಹರಿಸಬಹುದು ಎಂದರು. ನೀರು ಪೋಲಾಗುವುದನ್ನು ನಿಲ್ಲಿಸಬೇಕು. ಪಂಪು ಸ್ಟಾರ್ಟ್ ಮಾಡಿ ಹೋದರೆ ಟ್ಯಾಂಕ್ ತುಂಬಿ ಹರಿದು ಹೋಗುತ್ತಾ ಇರುತ್ತದೆ ಎಂದು ಗ್ರಾಮಸ್ಥರು ಹೇಳಿದರು.
ಅಂಬೇಡ್ಕರ್ ಭವನ ಕಟ್ಟಡ ಪೂರ್ತಿ ಗೊಳಿಸಲು ಸಮಾಜ ಕಲ್ಯಾಣ ಇಲಾಖೆಗೆ ಬರೆಯುವುದು; ಗ್ರಾಮದ ನಾಕುಡೇಲು ಸಮೀಪ ನಿರ್ಮಿಸಲು ಉದ್ದೇಶಿಸಿದ ಅಂಬೇಡ್ಕರ್ ಭವನ ಕಟ್ಟಡ ಅರ್ಧದಲ್ಲಿ ನಿಂತಿದೆ. ಇದಕ್ಕೆ ಕಾರಣವೇನು? ಎಂದು ಗ್ರಾಮಸ್ಥ ಕೃಷ್ಣ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ಅರ್ಧ ಕಾಮಗಾರಿ ಮಾಡಿ ನಿಂತ ಕಟ್ಟಡದ ಕಾಮಗಾರಿಯಲ್ಲಿ ಕಳಪೆಯಾಗಿದೆ ಎಂದು ಮಾತು ಕೇಳಿ ಬರುತ್ತಿದೆ. ಬೇರೆ ಭವನ ಹಾಗಿದ್ದರೆ ಕಟ್ಟಡ ಪೂರ್ತಿಯಾಗುತ್ತಿತ್ತು. ಅಂಬೇಡ್ಕರ್ ಭವನ ಆಗಿದ್ದರಿಂದ ಅರ್ಧದಲ್ಲಿ ನಿಂತಿದ್ದು ಅಂಬೇಡ್ಕರ್ ರವರಿಗೆ ಮಾಡಿದ ಅವಮಾನ. ಈ ಬಗ್ಗೆ ಯಾವ ಜನಪ್ರತಿನಿಧಿಗಳೂ ಧ್ವನಿ ಎತ್ತುತ್ತಿಲ್ಲ ಎಂದು ಕೃಷ್ಣ ಹೇಳಿದರು. ಕಟ್ಟಡ ಅರ್ಧದಲ್ಲಿ ನಿಂತ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಈ ಬಗ್ಗೆ ಇಲಾಖೆಗೆ ತಿಳಿಸುತ್ತೇನೆ ಎಂದು ಅಧಿಕಾರಿ ಹೇಳಿದರು. ಈ ಬಗ್ಗೆ ಚರ್ಚಿಸಿದ ನಂತರ ಕಟ್ಟಡ ಪೂರ್ತಿಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಬರೆಯುವ ಎಂದು ಅಧ್ಯಕ್ಷರು ಸೂಚಿಸಿ ಅಂತೆಯೇ ನಿರ್ಣಯಿಸಲಾಯಿತು.
ಕೋಡಿ ಕೊಂತಿಮೂಲೆ ಮುಂಡಕೊಚ್ಚಿ ಕಾಲುದಾರಿಯನ್ನು ಸರಿಪಡಿಸಿ ಕೊಡುವಂತೆ ಸಂಬಂಧ ಪಟ್ಟವರಿಗೆ ಬರೆಯುವುದು; ನೂರಾರು ವರ್ಷಗಳಿಂದ ಇದ್ದ ಕೋಡಿ ಕೊಂತಿಮೂಲೆ ಮುಂಡಕೊಚ್ಚಿ ಹೋಗುವ ಪಂಚಾಯತ್ ಕಾಲುದಾರಿಯನ್ನು ಕೊಂತಿಮೂಲೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬಂದ್ ಮಾಡಿದ್ದು ಸಮಸ್ಯೆಯಾಗಿದೆ ಎಂದು ಗ್ರಾಮಸ್ಥ ದಯಾನಂದ ರೈ ಆರೋಪಿಸಿದರು. ದಾರಿ ಸಮಸ್ಯೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಬಂದು ಮಾತುಕತೆ ಮೂಲಕ ಪರಿಹರಿಸಿ ಸರಿಯಾದ ವ್ಯವಸ್ಥೆ ಮಾಡಿಕೊಡುವಂತೆ ಆ ವ್ಯಕ್ತಿಯಲ್ಲಿ ಹೇಳಿದ್ದು ಬರವಣಿಗೆ ಮೂಲಕ ಒಪ್ಪಿ ಕೊಂಡಿದ್ದರು. ಆದರೆ ಅವರು ಒಂದು ಕಡೆಯಿಂದ ಬರುವ ದಾರಿಯನ್ನು ಮುಚ್ಚಿ ಇನ್ನೊಬ್ಬ ಬಡವನ ಜಾಗದಲ್ಲಿ ದಾರಿ ಮಾಡಿದ್ದು ಅದು ಸಮಸ್ಯೆಯಿಂದ ಕೂಡಿದೆ ಎಂದ ದಯಾನಂದ ರೈ, ಹಿಂದೆ ಇದ್ದ ಜಾಗದಲ್ಲಿಯೇ ದಾರಿ ಮಾಡಿ ಕೊಡಬೇಕು ಎಂದರು. ಉತ್ತರಿಸಿದ ಗ್ರಾಮ ಆಡಳಿತ ಅಧಿಕಾರಿ ದಾರಿ ಸಮಸ್ಯೆ ಇತ್ಯರ್ಥ ಮಾಡಿ ದಾರಿ ಕೊಡುತ್ತೇನೆ ಎಂದು ಒಪ್ಪಿ ಕೊಂಡಿದ್ದರು ಎಂದು ಹೇಳಿದರು. ಈ ಬಗ್ಗೆ ಚರ್ಚಿಸಿದ ಸಭೆ ವ್ಯಕ್ತಿ ಹಿಂದೆ ಒಪ್ಪಿಕೊಂಡ ಹಾಗೆ ಅದೇ ಜಾಗದಲ್ಲಿ ದಾರಿಯನ್ನು ಸರಿಪಡಿಸಿ ಕೊಡುವಂತೆ ಅವರಿಗೆ ಪಂಚಾಯತಿನಿಂದ ನೋಟೀಸ್ ನೀಡುವ ಎಂದು ಅಧ್ಯಕ್ಷರು ಹೇಳಿದರು.
ರಸ್ತೆ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯ ಅನುದಾನ ಏನಾಯಿತು…?
ಚೂರಿಪದವು ಶಾಲಾ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಾಸಕರ ಅನುದಾನ 10 ಲಕ್ಷದಲ್ಲಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅನುದಾನ 10 ಲಕ್ಷದಲ್ಲಿ ಒಟ್ಟು 20 ಲಕ್ಷದಲ್ಲಿ ಕಾಂಕ್ರೀಟ್ ಮಾಡಲು ಅನುದಾನ ಬಿಡುಗಡೆ ಆಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಅಲ್ಲಿ ಕೇವಲ ರೂ.10 ಲಕ್ಷದಲ್ಲಿ ಶಾಸಕರ ಅನುದಾನದಲ್ಲಿ ಕಾಂಕ್ರೀಟ್ ಆಗಿದೆ ಎಂದು ಅಲ್ಲಿ ಫಲಕ ಹಾಕಿರುತ್ತದೆ. 20 ಲಕ್ಷದ ಕಾಮಗಾರಿಯಲ್ಲಿ ಶಾಲೆವರೆಗೆ ಕಾಂಕ್ರೀಟ್ ಆಗುತ್ತದೆ ಎಂದು ಇಲಾಖೆಯವರು ಹೇಳಿದ್ದರು. ಹಾಗಿದ್ದರೆ ಸಮಾಜ ಕಲ್ಯಾಣ ಇಲಾಖೆಯ ಅನುದಾನ ಏನಾಯಿತು ಎಂದು ಗ್ರಾಮಸ್ಥ ಕೆ.ಎನ್.ಪಾಟಾಳಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು. ಆದರೆ ಅದರ ಬಗ್ಗೆಯೂ ಸಭೆಗೆ ಬಂದಿದ್ದ ಅಧಿಕಾರಿಗೆ ಸ್ಪಷ್ಟ ಮಾಹಿತಿ ಇರದ ಕಾರಣ ಇದರ ಬಗ್ಗೆ ಇಲಾಖೆಯ ಗಮನಕ್ಕೆ ತಂದು ಅದನ್ನು ಪರಿಶೀಲಿಸಲಿ ಎಂದು ಕೆ.ಎನ್.ಪಾಟಾಳಿ ಅಧಿಕಾರಿಯಲ್ಲಿ ಹೇಳಿದರು. ಈಗ ಕಾಂಕ್ರೀಟ್ ಆದಷ್ಟು ಮಾತ್ರ ಅನುದಾನ ಬಿಡುಗಡೆಯಾಗಿರುವುದು ಎಂದು ಹೇಳಿದರೂ ನಮಗೆ ಸಮಾಧಾನ ಆಗುತ್ತದೆ ಎಂದರು.
ಆರೋಗ್ಯ ಕಾರ್ಯಕರ್ತೆ ಎ.ವಿ.ಕುಸುಮಾವತಿ, ಉಪವಲಯ ಅರಣ್ಯಾಧಿಕಾರಿ ಮದನ್.ಬಿ.ಕೆ, ಹಿರಿಯ ಪಶು ವೈದ್ಯ ಪರೀಕ್ಷಕ ವೀರಪ್ಪ, ಗ್ರಾಮಾಂತರ ಪೊಲೀಸ್ ಠಾಣಾ ಎ.ಎಸ್ ಐ ಮಹಮ್ಮದಾಲಿ, ಮೆಸ್ಕಾಂ ಕಿರಿಯ ಇಂಜಿನಿಯರ್ ಪುತ್ತು.ಜೆ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ, ಗ್ರಾಮ ಆಡಳಿತ ಅಧಿಕಾರಿ ಸುನೀತಾ ಕುಮಾರಿ.ಕೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೆಲ್ವೀಚಾರಕಿ ಎಸ್. ಸುಜಾತ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀದೇವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪವಿತ್ರ ನಂದ್ರಾಳ ಇವರು ತಮ್ಮ ಇಲಾಖಾ ಮಾಹಿತಿ ನೀಡಿದರು. ಜನ ಸುರಕ್ಷಾ ಯೋಜನೆಯಾದ ಪಿ.ಎಂ.ಜೆ.ಜೆ.ವಿ.ವೈ, ಪಿ.ಎಂ.ಎಸ್.ಬಿ.ವೈ ಮತ್ತು ಎ.ಪಿ.ವೈ ಬಗ್ಗೆ ಎಫ್ಎಲ್ ಸಿ ಗೀತಾ ವಿಜಯನ್ ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಜ್ಞಾ.ಬಿ, ಸುರೇಶ್ ಬಾಬು, ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖೆಯ ಮೆನೇಜರ್ ಅನೂಪ್ ಎಸ್.ನಾಯ್ಕ್, ಪೊಲೀಸ್ ಸಿಬ್ಬಂದಿ ಮಾರುತಿ.ಕೆ, ಪಾಲ್ಗೊಂಡಿದ್ದರು. ಪಂಚಾಯತ್ ಉಪಾಧ್ಯಕ್ಷೆ ಸೀತಾ, ಸದಸ್ಯರಾದ ಬಾಲಚಂದ್ರ ನಾಯ್ಕ, ಸತೀಶ್ ಶೆಟ್ಟಿ, ನಂದಿನಿ ಅರ್.ರೈ,ಗ್ರೆಟಾ ಡಿ’ಸೋಜಾ, ಗೀತಾ.ಡಿ, ತುಳಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿ ರೇವತಿ, ಸಂಶೀನಾ ವರದಿ ವಾಚಿಸಿದರು. ವಿನೀತ್ ಕುಮಾರ್ ವಾರ್ಡ್ ಸಭೆಗೆ ಬಂದ ಬೇಡಿಕೆಯ ಪಟ್ಟಿ ವಾಚಿಸಿದರು. ಜಯಕುಮಾರಿ ಸಹಕರಿಸಿದರು. ಸಿ.ಎಚ್.ಒ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡರು.