ನೆಲ್ಯಾಡಿ ಗ್ರಾಮಸಭೆ

0

ಮೇಲ್ಸೇತುವೆಗೆ ಪ್ರಧಾನಿ, ಸಚಿವರಿಗೆ ಕಾರ್ಡ್ ಚಳವಳಿಗೆ ಗ್ರಾಮಸ್ಥರ ಆಗ್ರಹ

ನೆಲ್ಯಾಡಿ: ನೆಲ್ಯಾಡಿ ಪೇಟೆಯುದ್ದಕ್ಕೂ ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕಾರ್ಡ್ ಚಳವಳಿ ಮಾಡಬೇಕೆಂದು ನೆಲ್ಯಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಸಭೆ ಆ.13ರಂದು ಗ್ರಾ.ಪಂ.ಅಧ್ಯಕ್ಷ ಯಾಕೂಬು ಯಾನೆ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ವಠಾರದಲ್ಲಿ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಿವೃತ್ತ ಮುಖ್ಯಶಿಕ್ಷಕ, ಗ್ರಾಮಸ್ಥರೂ ಆದ ಆರ್. ವೆಂಕಟ್ರಮಣ ಭಟ್ ಅವರು, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ನೆಲ್ಯಾಡಿ ಪೇಟೆಯಲ್ಲಿ ಎರಡೂ ಬದಿ ತಡೆಗೋಡೆ ನಿರ್ಮಿಸಿ ಮೇಲ್ಸೇತುವೆ ಮಾಡಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ನೆಲ್ಯಾಡಿ ಪೇಟೆಯೇ ನಾಶವಾಗಲಿದೆ. ಆದ್ದರಿಂದ ನೆಲ್ಯಾಡಿ ಪೇಟೆಯಲ್ಲಿ ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಇದಕ್ಕಾಗಿ ನೆಲ್ಯಾಡಿ, ಕೌಕ್ರಾಡಿ ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕಾರ್ಡ್ ಚಳವಳಿ ಮಾಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸದಸ್ಯ ರವಿಪ್ರಸಾದ್ ಅವರು, ಮಂಗಳೂರಿನಲ್ಲಿ ಸಂಸದರ ನೇತೃತ್ವದಲ್ಲಿ ಹೋರಾಟ ಸಮಿತಿ, ಗುತ್ತಿಗೆದಾರರು, ಹೆದ್ದಾರಿ ಇಲಾಖೆಯವರ ಸಭೆ ನಡೆದಿದೆ. ಈಗಿರುವ ಅಂಡರ್‌ಪಾಸ್ ನಡುವೆ ಪಿಲ್ಲರ್ ಹಾಕಿ ಮೇಲ್ಸೇತುವೆ ಮಾಡುವ ಸಂಬಂಧ ಅಂದಾಜುಪಟ್ಟಿ ತಯಾರಿಸಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ ಎಂದರು. ನೆಲ್ಯಾಡಿ ಪೇಟೆಯಲ್ಲಿ ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಈಗಿರುವ ಸರ್ವೀಸ್ ರಸ್ತೆ ಹಾಗೂ ಅಂಡರ್‌ಪಾಸ್‌ನಲ್ಲಿರುವ ರಸ್ತೆ ಹೊಂಡಗಳಿಂದ ತುಂಬಿದ್ದು ಇದರ ದುರಸ್ತಿಗೂ ಗ್ರಾಮಸ್ಥರು ಒತ್ತಾಯಿಸಿದರು.


ಕಾಂಕ್ರಿಟ್ ರಸ್ತೆಗಳಲ್ಲೇ ಹೊಂಡ:
ಕೊಲ್ಯೊಟ್ಟು, ಗ್ರಾ.ಪಂ.ಮುಂಭಾಗದ ಕಾಂಕ್ರಿಟ್ ರಸ್ತೆಯೇ ಹೊಂಡದಿಂದ ಕೂಡಿದೆ. ಕಾಂಕ್ರಿಟ್ ರಸ್ತೆಗಳಿಗೆ ಗ್ಯಾರಂಟಿ ಇಲ್ಲವೇ ಎಂದು ಗ್ರಾಮಸ್ಥರಾದ ಗಣೇಶ್ ಪೊಸೊಳಿಗೆ, ವೆಂಕಟ್ರಮಣ ಭಟ್, ಉಮೇಶ್ ಪೊಸೊಳಿಗೆ ಮತ್ತಿತರರು ಪ್ರಶ್ನಿಸಿದರು. ಕಳಪೆ ಕಾಮಗಾರಿಯಿಂದಲೇ ಕಾಂಕ್ರಿಟ್ ರಸ್ತೆಗಳೂ ನಾಲ್ಕೈದು ವರ್ಷದಲ್ಲೇ ಕೆಟ್ಟುಹೋಗುತ್ತಿವೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೆಲ್ಯಾಡಿ-ಪಡ್ಡಡ್ಕ ರಸ್ತೆಯಲ್ಲಿ ಅರ್ಧಂಬರ್ಧ ಕಾಮಗಾರಿ ನಡೆದಿದೆ. ಚರಂಡಿ ಇಲ್ಲದೇ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇಲ್ಲಿ ನೀರಿನ ಪೈಪು ರಸ್ತೆಯ ಮೇಲೆಯೇ ಹಾದು ಹೋಗಿದೆ ಎಂದು ಗ್ರಾಮಸ್ಥ ಜೋಯಿ ಅಧಿಕಾರಿಗಳ ಗಮನಕ್ಕೆ ತಂದರು.


ಯುನಿವರ್ಸಿಟಿ ಕಾಲೇಜು ಉಳಿಯಬೇಕು:
ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ 25 ಎಕ್ರೆ ಜಾಗ ಮಂಜೂರು ಆಗಿದೆ. ಆದರೆ ಕಾಲೇಜು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈಗ ಮಕ್ಕಳ ಕೊರತೆಯೂ ಎದುರಿಸುತ್ತಿದೆ. ಈ ಕಾಲೇಜು ನೆಲ್ಯಾಡಿಯಲ್ಲಿಯೇ ಉಳಿಯಬೇಕು ಎಂದು ಕೆ.ಪಿ.ಆನಂದ, ಗಣೇಶ್ ಪೊಸೊಳಿಕೆ ಮತ್ತಿತರರು ಆಗ್ರಹಿಸಿದರು.


ಆಸ್ಪತ್ರೆ ಮೇಲ್ದರ್ಜೆಗೇರಿಸಿ:
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕೆಂದು ಗ್ರಾಮಸ್ಥ ಉಮೇಶ್ ಪೂಜಾರಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸುರಕ್ಷಾಧಿಕಾರಿ ಲೀಲಾ ಅವರು, ನೆಲ್ಯಾಡಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕೆಂದು ಇಲ್ಲಿನ ಆಡಳಿತ ವೈದ್ಯಾಧಿಕಾರಿಯವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ನೆಲ್ಯಾಡಿಗೆ ಸಮೀಪದ ಕೊಕ್ಕಡ ಹಾಗೂ ಕಡಬದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದೆ ಎಂದು ಹಿನ್ನಡೆಯಾಗಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಸಂಬಂಧ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.


ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಗಲಿ:
ದ.ಕ.ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಗಬೇಕು. ಅದರಲ್ಲೂ ಪುತ್ತೂರು ಇಲ್ಲವೇ ಸುಳ್ಯದಲ್ಲಿ ಆರಂಭಿಸಬೇಕೆಂದು ಸದಸ್ಯ ಅಬ್ದುಲ್ ಜಬ್ಬಾರ್ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ಪಡುಬೆಟ್ಟು ಸರಕಾರಿ ಪ್ರೌಢಶಾಲೆಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಗ್ರಾಮಸ್ಥ ಅಣ್ಣಿ ಎಲ್ತಿಮಾರ್ ಆಗ್ರಹಿಸಿದರು.


ಜೆಜೆಎಂ ಕಾಮಗಾರಿ ವಿರುದ್ಧ ಆಕ್ರೋಶ:
ಜೆಜೆಎಂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸಾರ್ವಜನಿಕ ರಸ್ತೆಯ ಚರಂಡಿಯಲ್ಲೇ ಪೈಪು ಹಾಕಿ ಮಣ್ಣು ತುಂಬಿಸಿದ್ದಾರೆ. ಇದರಿಂದ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಕೆಲವು ಕಡೆಗಳಲ್ಲಿ ಪೈಪು ಮಣ್ಣಿನಡಿ ಹಾಕಿಲ್ಲ. ಒಟ್ಟಿನಲ್ಲಿ ಕಳಪೆ ಕಾಮಗಾರಿ ಆಗಿದೆ ಎಂದು ಆರೋಪಿಸಿದ ರಮೇಶ್ ಶೆಟ್ಟಿ ಬೀದಿ, ಅಣ್ಣಿ ಎಲ್ತಿಮಾರ್ ಮತ್ತಿತರರು ಯೋಜನೆಯ ಬಗ್ಗೆ ಮಾಹಿತಿ ನೀಡಲು ಇಂಜಿನಿಯರ್ ಅವರೇ ಸಭೆಗೆ ಬಂದಿಲ್ಲ. ಅವರಿಗೆ ಗ್ರಾಮಸಭೆಗೆ ತಿಳಿಸಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಆನಂದ ಗೌಡ ಪಿಲವೂರು ಅವರು, ಇಂಜಿನಿಯರ್ ಅವರು ಕಡ್ಡಾಯವಾಗಿ ಸಭೆಗೆ ಬರುವಂತೆ ವಾರ್ಡ್‌ಸಭೆಯಲ್ಲಿ ಪ್ರಸ್ತಾಪಿಸಿ ನಿರ್ಣಯ ಮಾಡಲಾಗಿದೆ. ಅವರಿಗೆ ಮಾಹಿತಿ ನೀಡಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೆಕ್ಕ ಸಹಾಯಕ ಅಂಗು ಅವರು, ಇಂಜಿನಿಯರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಸಭೆಯ ನೋಟಿಸ್ ನೀಡಲಾಗಿದೆ. ಆದರೆ ಅವರಿಗೆ ಜಿಲ್ಲಾ ಪಂಚಾಯತ್‌ನಲ್ಲಿ ಜೆಜೆಎಂ ಕಾಮಗಾರಿ ಬಗ್ಗೆಯೇ ತುರ್ತು ಮೀಟಿಂಗ್ ಇರುವುದಾಗಿ ತಿಳಿಸಿದ್ದಾರೆ ಎಂದರು. ಪಿಡಿಒ ಮೋಹನ್‌ಕುಮಾರ್ ಅವರು ಮಾತನಾಡಿ, ಮಳೆಯಿಂದಾಗಿ ಕೆಲಸ ಸ್ಥಗಿತಗೊಂಡಿದೆ. ಸಮಸ್ಯೆ ಬಗ್ಗೆ ಗಮನ ಹರಿಸುತ್ತೇವೆ ಎಂದರು. ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ. ನಳ್ಳಿನೀರಿನಲ್ಲಿ ಮಳೆಗಾಲದಲ್ಲಿ ಕಸ, ಬೇಸಿಗೆಯಲ್ಲಿ ಜಲ್ಲಿ ಹುಡಿ ಬರುತ್ತಿದೆ ಎಂದು ಗ್ರಾಮಸ್ಥ ವಾಸುದೇವ ಹೇಳಿದರು.


ನೆಲ್ಯಾಡಿ-ಆಲಂಕಾರು ಬಸ್ಸು ಬೇಕು:
ನೆಲ್ಯಾಡಿಯಿಂದ ಮಾದೇರಿಯಾಗಿ ಆಲಂಕಾರಿಗೆ ಸರಕಾರಿ ಬಸ್ಸು ಓಡಾಟ ನಡೆಸಬೇಕೆಂದು ಗ್ರಾಮಸ್ಥ ಹೆರಾಲ್ಡ್ ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾಮಸ್ಥ ಚಂದ್ರಶೇಖರ ಭಟ್ ಅವರು, ಈ ಹಿಂದೆ ಮಾದೇರಿ ತನಕ ಸರಕಾರಿ ಬಸ್ಸು ಬರುತ್ತಿತ್ತು. ರಸ್ತೆ ಸರಿ ಇಲ್ಲ ಎಂದು ಬಸ್ಸು ಓಡಾಟ ಸ್ಥಗಿತಗೊಂಡಿದೆ. ಬಸ್ಸು ಸಂಚಾರ ಪುನರಾರಂಭಗೊಳ್ಳಬೇಕೆಂದು ಒತ್ತಾಯಿಸಿದರು. ನೆಲ್ಯಾಡಿ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸರಕಾರಿ ಬಸ್ಸುಗಳು ನೆಲ್ಯಾಡಿಯಲ್ಲಿರುವ ಬಸ್ಸು ನಿಲ್ದಾಣಕ್ಕೆ ಬಂದು ಹೋಗಬೇಕೆಂದು ವಾಸುದೇವ ಆಗ್ರಹಿಸಿದರು. ಗೋಳಿತ್ತೊಟ್ಟಿನಿಂದ ಉಪ್ಪಿನಂಗಡಿಗೆ ಬೆಳಿಗ್ಗೆ ಹೊರಡುವ ಬಸ್ಸು ನೆಲ್ಯಾಡಿಗೆ ಬಂದು ಹೋಗುವಂತೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.


ಸರಕಾರಿ ಜಾಗ ಅತಿಕ್ರಮಣ:
ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರಕಾರಿ ಜಾಗ ಅತಿಕ್ರಮಣ ಆಗಿದೆ ಎಂದು ಗ್ರಾಮಸ್ಥ ಉಮೇಶ್ ಪೊಸೊಳಿಕೆ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ಲಾವಣ್ಯ ಅವರು, ರಾಷ್ಟ್ರೀಯ ಹೆದ್ದಾರಿಯಿಂದ 40 ಮೀ.ತನಕ ಜಾಗಕ್ಕೆ ಈಗಾಗಲೇ ಹೆದ್ದಾರಿ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ಅಷ್ಟು ಜಾಗ ಹೆದ್ದಾರಿ ಇಲಾಖೆಗೆ ಸೇರಿದೆ ಎಂದರು. ಪಿಡಿಒ ಮೋಹನ್‌ಕುಮಾರ್ ಅವರು ಮಾತನಾಡಿ, ಹೆದ್ದಾರಿ ಪಕ್ಕದ ಜಾಗ ಒತ್ತುವರಿ ಆಗಿರುವ ಬಗ್ಗೆ ಗ್ರಾಮಸ್ಥರು ಆ ಇಲಾಖೆಗೆ ಅಥವಾ ಗ್ರಾ.ಪಂ. ಗಮನಕ್ಕೆ ತನ್ನಿ ಎಂದರು.


ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ಕೊಡಿ:
ಈ ಹಿಂದಿನ ಸರಕಾರದ ಅವಧಿಯಲ್ಲಿ ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿತ್ತು. ಈಗ ಅದು ನಿಂತಿದೆ. ಇದನ್ನು ಪುನರಾರಂಭಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.


ಅಂಬೇಡ್ಕರ್ ಭವನದ ಜಾಗದ ಗಡಿ ಗುರುತು ಮಾಡಿ:
ಗ್ರಾಮ ಪಂಚಾಯಿತಿ ಕಟ್ಟಡದ ಪಕ್ಕ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಕಾದಿರಿಸಲಾಗಿದೆ. ಆದರೆ ಜಾಗ ಗುರುತಿಸಿಲ್ಲ ಎಂದು ಗ್ರಾಮಸ್ಥ ಆನಂದ ಕೆ.ಪಿ.ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ಅವರು, ಸದ್ರಿ ಜಾಗದ ಗಡಿ ಗುರುತು ಮಾಡಿ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪಡುಬೆಟ್ಟುನಲ್ಲಿ ಸ್ಮಶಾನಕ್ಕೆ ಜಾಗ ಕಾದಿರಿಸಬೇಕೆಂದು ಆನಂದ ಕೆ.ಪಿ.ಆಗ್ರಹಿಸಿದರು.


ಸಿಸಿ ಕ್ಯಾಮರಾ ಅಳವಡಿಸಿ:
ನೆಲ್ಯಾಡಿ-ಮಾದೇರಿ ರಸ್ತೆಯ ಕೊಲ್ಯೊಟ್ಟು ಸೇತುವೆ ಪಕ್ಕ ತ್ಯಾಜ್ಯ ತಂದು ಎಸೆಯಲಾಗುತ್ತಿದೆ. ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಎಸೆಯುವವರನ್ನು ಪತ್ತೆ ಮಾಡಿ ಅವರಿಗೆ ದಂಡ ವಿಧಿಸಬೇಕು. ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ವೆಂಕಟ್ರಮಣ ಭಟ್ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸದಸ್ಯ ರವಿಪ್ರಸಾದ್ ಅವರು, ಕಸ ಎಸೆಯದಂತೆ ಎಲ್ಲಾ ಕಡೆಯೂ ನಾಮ ಫಲಕ ಹಾಕಲಾಗಿದೆ. ಆದರೂ ಅದರ ಅಡಿಯಲ್ಲಿಯೇ ತಂದು ಕಸ ಹಾಕುತ್ತಿದ್ದಾರೆ ಎಂದರು. ನೆಲ್ಯಾಡಿ ಸಂತೆಕಟ್ಟೆ ಸಮೀಪ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಗಣೇಶ್ ಪೊಸೊಳಿಕೆ ಒತ್ತಾಯಿಸಿದರು.


ಸೋಲಾರ್ ಲೈಟ್ ಉರಿಯುತ್ತಿಲ್ಲ:
ಕೊಲ್ಯೊಟ್ಟು ಎಂಬಲ್ಲಿ ಅಳವಡಿಸಿದ್ದ ಸೋಲಾರ್ ಲೈಟ್ ಒಂದೇ ವಾರ ಉರಿದಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಜಯಾನಂದ ಬಂಟ್ರಿಯಾಲ್ ಅವರು, ಸೋಲಾರ್ ಲೈಟ್ ಕೆಟ್ಟು ಹೋಗಿದೆ. ಇದರ ದುರಸ್ತಿಗೆ ಹೆಚ್ಚುವರಿ ಅನುದಾನ ಇಡಲಾಗಿದೆ. ದುರಸ್ತಿಗೊಳಿಸಲಾಗುವುದು ಎಂದರು. ಕೆಲವು ಬೀದಿದೀಪಗಳು ಉರಿಯುತ್ತಿಲ್ಲ. ಕೆಲವೆಡೆ ಹಗಲಿನಲ್ಲೂ ಉರಿಯುತ್ತಲೇ ಇದೆ ಎಂದು ಗ್ರಾಮಸ್ಥ ರಮೇಶ್ ಶೆಟ್ಟಿ ಬೀದಿ ಹೇಳಿದರು. ಕೆಲವೊಂದು ಬೀದಿ ದೀಪಗಳು ತಾಂತ್ರಿಕ ಕಾರಣದಿಂದ ಸ್ವಿಚ್ ಆಫ್ ಆದರೂ ಉರಿಯುತ್ತಿವೆ. ಮೆಸ್ಕಾಂಗೆ ತಿಳಿಸಿ ಸರಿಪಡಿಸಲಾಗುವುದು ಎಂದು ಅಧ್ಯಕ್ಷ ಸಲಾಂ ಬಿಲಾಲ್ ತಿಳಿಸಿದರು.


ತಂತಿ ಬದಲಾವಣೆಗೆ ಆಗ್ರಹ:
ಕೊಲ್ಯೊಟ್ಟು-ಪರಾರಿ ಭಾಗದಲ್ಲಿ ವಿದ್ಯುತ್ ತಂತಿ ನೇತಾಡುತ್ತಿರುವುದಾಗಿ ರಮೇಶ್ ಶೆಟ್ಟಿ ಅವರು ಮೆಸ್ಕಾಂ ಜೆಇ ಅವರ ಗಮನಕ್ಕೆ ತಂದರು. ಹಳೆಯ ವಿದ್ಯುತ್ ತಂತಿ ಬದಲಾವಣೆ ಮಾಡುವಂತೆ ಇಚ್ಚೂರು ಗ್ರಾಮಸ್ಥರು ಆಗ್ರಹಿಸಿದರು.


ಖಾಯಂ ಪಿಡಿಒ ಬೇಕು:
ನೆಲ್ಯಾಡಿ ಗ್ರಾ.ಪಂ.ಗೆ ಖಾಯಂ ಪಿಡಿಒ ಬೇಕು. ಇಲ್ಲವೇ ಈಗ ಪ್ರಭಾರ ಪಿಡಿಒ ಆಗಿರುವ ಮೋಹನ್‌ಕುಮಾರ್ ಅವರನ್ನೇ ನೆಲ್ಯಾಡಿ ಗ್ರಾ.ಪಂ.ಗೆ ಖಾಯಂ ಪಿಡಿಒ ಮಾಡಬೇಕೆಂದು ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಜಯಾನಂದ ಬಂಟ್ರಿಯಾಲ್ ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸಲಾಂ ಬಿಲಾಲ್ ಅವರು, ಮೋಹನ್‌ಕುಮಾರ್ ಅವರನ್ನೇ ನೆಲ್ಯಾಡಿ ಗ್ರಾ.ಪಂ.ಗೆ ಖಾಯಂ ಪಿಡಿಒ ಆಗಿ ನೇಮಕ ಮಾಡುವಂತೆ ಕೇಳಿಕೊಳ್ಳುವುದಾಗಿ ಹೇಳಿದರು.

ಮೆಸ್ಕಾಂ ಜೆಇ ವರ್ಗಾವಣೆ ಸರಿಯಲ್ಲ:
ಮೆಸ್ಕಾಂ ನೆಲ್ಯಾಡಿ ಶಾಖಾ ಕಿರಿಯ ಅಭಿಯಂತರ ರಮೇಶ್ ಅವರನ್ನು ಏಕಾಏಕಿ ನೆಲ್ಯಾಡಿಯಿಂದ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಒತ್ತಡವಿದೆ ಎಂಬ ಆರೋಪ ಕೇಳಿಬಂದಿದೆ. ರಮೇಶ್ ಅವರು ಬಳಕೆದಾರರ ಸಮಸ್ಯೆಗೆ 24 ಗಂಟೆಯೂ ತಕ್ಷಣ ಸ್ಪಂದನೆ ನೀಡುತ್ತಿದ್ದರು. ಅವರನ್ನೇ ನೆಲ್ಯಾಡಿ ಶಾಖೆಗೆ ಮರು ವರ್ಗಾವಣೆ ಮಾಡಬೇಕೆಂದು ರಮೇಶ್ ಶೆಟ್ಟಿ ಬೀದಿ, ಅಣ್ಣಿ ಎಲ್ತಿಮಾರ್, ಗಣೇಶ್ ಪೊಸೊಳಿಕೆ ಮತ್ತಿತರರು ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸಲಾಂ ಅವರು, ಗ್ರಾಮಸ್ಥರ ಮನವಿಯಂತೆ ಕಿರಿಯ ಅಭಿಯಂತರ ರಮೇಶ್ ಅವರನ್ನು ಮತ್ತೆ ನೆಲ್ಯಾಡಿ ಶಾಖೆಗೆ ವರ್ಗಾವಣೆ ಮಾಡುವಂತೆ ಇಲಾಖೆಗೆ ಮನವಿ ಮಾಡಲು ನಿರ್ಣಯಿಸುವುದಾಗಿ ಹೇಳಿದರು. ಇದಕ್ಕೆ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಬೆಂಬಲಿಸಿದರು. ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್ ಅವರು ಮಾತನಾಡಿ, ಕಿರಿಯ ಅಭಿಯಂತರ ರಮೇಶ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ರೀತಿ ಸಿಬ್ಬಂದಿಗಳು, ಈಗಿನ ಪ್ರಭಾರ ಜೆ.ಇ.ಯವರೂ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಅವರಿಗೆ ಗ್ರಾಮ ಪಂಚಾಯಿತಿ ಹಾಗೂ ಬಳಕೆದಾರರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಗಣೇಶ್ ಪೊಸೊಳಿಕೆ, ಆರ್.ವೆಂಕಟ್ರಮಣ ಭಟ್ ಅವರು ಸಹ ಮೆಸ್ಕಾಂ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿದರು.

ರಸ್ತೆ ದುರಸ್ಥಿಗೆ 50 ಸಾವಿರ ರೂ.ಕೊಡ್ತೇನೆ:
ಬೆಥನಿ-ತಿಪ್ಪೆಮಜಲು ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇದರ ದುರಸ್ತಿಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು. 50 ಸಾವಿರ ರೂ. ನಾನೇ ಕೊಡ್ತೇನೆ ಎಂದು ಗ್ರಾಮಸ್ಥ ಬಾಳಪ್ಪ ಗೌಡ ಅಗರ್ತ ಸಭೆಯಲ್ಲಿ ಹೇಳಿದರು.

ಗ್ರಾಮ ಆಡಳಿತಾಧಿಕಾರಿ ಲಾವಣ್ಯ, ಮೆಸ್ಕಾಂ ಕಿರಿಯ ಅಭಿಯಂತರ ರಾಜನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲೀಲಾ, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್ ಪ್ರವೀಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಕೃಷಿ ಇಲಾಖೆಯ ಸಾಯಿನಾಥ್, ಪಶುಸಂಗೋಪನೆ ಇಲಾಖೆಯ ಹನುಮಂತ ಅವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಅಬ್ದುಲ್ ಜಬ್ಬಾರ್, ಚೇತನಾ, ಆನಂದ ಪಿಲವೂರು, ಉಷಾ ಒ.ಕೆ., ಜಯಲಕ್ಷ್ಮೀಪ್ರಸಾದ್, ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಪುಷ್ಪಾ, ಪ್ರಕಾಶ್, ಜಯಂತಿ, ಜಯಾನಂದ ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಶಿವಪ್ರಸಾದ್ ವರದಿ ವಾಚಿಸಿದರು. ಪಿಡಿಒ ಮೋಹನ್‌ಕುಮಾರ್ ಸ್ವಾಗತಿಸಿ, ಲೆಕ್ಕ ಸಹಾಯಕ ಅಂಗು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here