ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಾಟೆ ,ಹಿಂದೂಗಳ ಮೇಲಿನ ಕ್ರೌರ್ಯವನ್ನು ಖಂಡಿಸಿ ಅಶ್ರು ತರ್ಪಣ, ಮೌನ ಪ್ರಾರ್ಥನೆ ನಡೆಯಿತು.
ಹಿಂದೂಗಳ ವಿರುದ್ಧದ ಅತ್ಯಾಚಾರ, ಅನಾಚಾರ, ಆಕ್ರಮಣ, ಅಮಾನವೀಯ ಹಿಂಸಾತ್ಮಕ ಚಟುವಟಿಕೆಗಳ ವಿರುದ್ಧವಾಗಿ ಪ್ರತಿಭಟನೆ ನಡೆಯಿತು. ಈ ಸಂದರ್ಬದಲ್ಲಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಮ್ಮ ದೇಶದ ಪ್ರಧಾನ ಮಂತ್ರಿಯವರಿಗೆ ಬಾಂಗ್ಲಾದ ಹಿಂದೂಗಳ ಹಿತರಕ್ಷಣೆಗಾಗಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪತ್ರ ಬರೆಯುವ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಉಪನ್ಯಾಸಕ ಆದರ್ಶ ಗೋಖಲೆ ಬಾಂಗ್ಲಾದೇಶದಲ್ಲಿ ಆಗುತ್ತಿರುವ ಅನ್ಯಾಯ ಮುಂದೊಂದು ದಿನ ನಮ್ಮ ಭಾರತದಲ್ಲಿ ಆಗದಂತೆ ಜಾಗೃತರಾಗಿರಬೇಕು. ಪ್ರಪಂಚದಾದ್ಯಂತ ಇರುವ ಯಾವೊಬ್ಬ ಹಿಂದೂವಿನ ಕೂದಲೂ ಕೊಂಕದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಇದಕ್ಕಾಗಿ ಎಲ್ಲರೂ ಒಂದಾಗಬೇಕು ಎಂದರು. ವಿದ್ಯಾರ್ಥಿನಿ ಪೂರ್ವಿ ಸ್ವಾಗತಿಸಿದರು. ವಿದ್ಯಾರ್ಥಿ ವಿಕಾಸ್ ಕಾರ್ಯಕ್ರಮ ನಿರೂಪಿಸಿದರು.