ಕಡಬ: ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆಯಾಗಿರುವ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದೊಂದಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಆ.21ರಂದು ಮರ್ದಾಳ ಪಾಲೆತ್ತಡ್ಕ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ವಿಜಯ ಗ್ರಾಮೀಣ ಪ್ರತಿಷ್ಠಾನ ಮಂಗಳೂರು ಇದರ ಆಡಳಿತ ಮಂಡಳಿ ಕಾರ್ಯದರ್ಶಿ ರಾಜೇಂದ್ರ ರೈ ಬೆಳ್ಳಿಪ್ಪಾಡಿ ಅವರು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಶಾಲೆಗೆ ಸ್ಮಾರ್ಟ್ ಕ್ಲಾಸ್ ತರಗತಿಗೆ ಬೇಕಾದ ಕಲಿಕೋಪಕರಣ ಕೊಟ್ಟಿದ್ದೇವೆ. ಇನ್ನೂ ಹೆಚ್ಚಿನ ಯೋಜನೆಗೆ ಪ್ರಯತ್ನಿಸುವುದಾಗಿ ಹೇಳಿದರು. ಅತಿಥಿಯಾಗಿದ್ದ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ ಅವರು ಮಾತನಾಡಿ, ಹೆಣ್ಣು ಮಕ್ಕಳಿಗೆ ಸುಕನ್ಯ ಸಮೃದ್ಧಿ ಯೋಜನೆಯನ್ನು ಬ್ಯಾಂಕ್ ಆಫ್ ಬರೋಡ ಮೂಲಕ ಮಾಡುವಂತೆ ಹೇಳಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಶಿವಪ್ರಸಾದ್ ಕೈಕುರೆ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ದುಶ್ಚಟಗಳಿಗೆ ತುತ್ತಾಗದಂತೆ ಪೋಷಕರು ಮುತುವರ್ಜಿ ವಹಿಸಬೇಕೆಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಜೀವನ್ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಮೇದಪ್ಪ ಗೌಡ ಡೆಪ್ಪುಣಿ, ಮರ್ದಾಳ ಗ್ರಾ.ಪಂ. ಅಧ್ಯಕ್ಷೆ ಪ್ರೇಮ, ಮಾಜಿ ಅಧ್ಯಕ್ಷರಾದ ಹರೀಶ್ ಕೋಡಂದೂರು, ಎ.ಪಿ.ಚೆರಿಯನ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಬ್ಯಾಂಕ್ ಆಫ್ ಬರೋಡಾ ಇದರ ಮರ್ದಾಳ ಶಾಖಾಧಿಕಾರಿ ವಿಶಾಖ್ ಎ., ಬ್ಯಾಂಕ್ ಆಫ್ ಬರೋಡಾದ ಸುಗುಣ, ಶಾಲಾಭಿವೃದ್ಧಿ ಸಮಿತಿಯ ಶ್ರೀನಿವಾಸ ರೈ ಮುಂಡ್ರಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಿಯಾಜ್, ಮುಖ್ಯಶಿಕ್ಷಕಿ ಶ್ಯಾಮಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ವಿಜಯ ಗ್ರಾಮೀಣ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಬೆಳ್ಳಿಪ್ಪಾಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ ಅವರನ್ನು ಪಾಲೆತ್ತಡ್ಕ ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಶಿಕ್ಷಕಿ ಸಂಧ್ಯಾ ಸನ್ಮಾನಪತ್ರ ವಾಚಿಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಿಸಲಾಯಿತು ಸ್ಥಳೀಯರಾದ ನಾರಾಯಣ ರೈ, ಮರ್ದಾಳ ಗ್ರಾ.ಪಂ.ಗ್ರಂಥಾಲಯ ಮೇಲ್ವಿಚಾರಕ ನಾಗೇಶ್, ಜಿಲ್ಲಾ ಛಾಯಾಗ್ರಾಹಕ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ನಿರ್ದೇಶಕರಾದ ಬಾಲಕೃಷ್ಣ ಗೌಡ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಊರವರು ಉಪಸ್ಥಿತರಿದ್ದರು. ಪಾಲೆತ್ತಡ್ಕ ಶಾಲಾ ಮುಖ್ಯಶಿಕ್ಷಕಿ ಶ್ಯಾಮಲ ಸ್ವಾಗತಿಸಿ, ಶಿಕ್ಷಕಿ ರೇಖಾ ವಂದಿಸಿದರು. ಶಿಕ್ಷಕ ಪ್ರವೀಣ್ ನಿರೂಪಿಸಿದರು.