ಹಿರೆಬಂಡಾಡಿ: ಉಪ್ಪಿನಂಗಡಿ-ಹಿರೆಬಂಡಾಡಿ ರಸ್ತೆಯ ನೂಜಿ ಎಂಬಲ್ಲಿ ಬರೆ ಜರಿದು ಮಣ್ಣು ರಸ್ತೆಗೆ ಬಿದ್ದು 20 ದಿನ ಕಳೆದರೂ ರಾಶಿ ಬಿದ್ದ ಮಣ್ಣು ತೆರವುಗೊಳಿಸಿಲ್ಲ. ಇಲ್ಲಿ ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸುವವರು ಯಾರು ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಆ.1ರಂದು ಸುರಿದ ಭಾರೀ ಮಳೆಗೆ ಉಪ್ಪಿನಂಗಡಿ-ಹಿರೆಬಂಡಾಡಿ ರಸ್ತೆಯ ಹಿರೆಬಂಡಾಡಿ ಗ್ರಾಮದ ನೂಜಿ ಎಂಬಲ್ಲಿ ರಸ್ತೆ ಪಕ್ಕದ ಬರೆ ಜರಿದು ಮಣ್ಣು ರಸ್ತೆಗೆ ಬಿದ್ದಿದೆ. ಇದರಿಂದಾಗಿ ರಸ್ತೆಯ ಅರ್ಧ ಭಾಗ ಮಣ್ಣಿನಿಂದ ಮುಚ್ಚಿದೆ. ಮಣ್ಣು ಬಿದ್ದ ಜಾಗ ತಿರುವು ಆಗಿರುವುದರಿಂದ ಇಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.
ಮಣ್ಣು ರಸ್ತೆಯ ಅರ್ಧ ಭಾಗ ಆವರಿಸಿಕೊಂಡಿರುವುದರಿಂದ ಎರಡೂ ಕಡೆಯಿಂದ ವಾಹನಗಳು ಬಂದಲ್ಲಿ ಸೈಡ್ ಕೊಡಲು ಇಲ್ಲಿ ಜಾಗವಿಲ್ಲ. ಹಿರೆಬಂಡಾಡಿಯು ಉಪ್ಪಿನಂಗಡಿ ಗ್ರಾಮಕ್ಕೆ ಸಮೀಪವಿರುವುದರಿಂದ ಈ ರಸ್ತೆಯಲ್ಲಿ ದಿನಾಲೂ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ. ಹಿರೆಬಂಡಾಡಿ ಗ್ರಾಮದ ನೂರಾರು ಮಂದಿ ದಿನನಿತ್ಯ ಉಪ್ಪಿನಂಗಡಿಗೆ ಈ ರಸ್ತೆಯ ಮೂಲಕವೇ ಓಡಾಟ ನಡೆಸುತ್ತಾರೆ. ಕೆಎಸ್ಆರ್ಟಿಸಿ ಬಸ್ಸು ಸೇರಿದಂತೆ ಜೀಪು, ರಿಕ್ಷಾ, ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಬಿಡುವಿಲ್ಲದೇ ಸಂಚರಿಸುತ್ತಲೇ ಇರುತ್ತವೆ. ದಿನದಲ್ಲಿ ನೂರಾರು ವಾಹನಗಳು ಸಂಚರಿಸುತ್ತಲೇ ಇರುವ ಈ ರಸ್ತೆಗೆ ಬಿದ್ದ ಮಣ್ಣು ಇನ್ನೂ ತೆರವುಗೊಳಿಸದೇ ಇರುವುದು ಅಚ್ಚರಿ ಮೂಡಿಸಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.