ಪುತ್ತೂರು: ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾಟದ ಸಂದರ್ಭ ರಾತ್ರಿ ದೇವಳದ ಗದ್ದೆಯಲ್ಲಿ ಸುತ್ತಾಡುತ್ತಿದ್ದ ಛತ್ತೀಸ್ ಗಡ ಮೂಲದ ಮಾನಸಿಕ ಅಸ್ವಸ್ಥನನ್ನು ಹಿಂದೂ ಸಂಘಟೆನೆಯ ಕಾರ್ಯಕರ್ತರು ಮಂಗಳೂರಿಗೆ ಆತನ ಸಂಬಂಧಿಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಛತ್ತೀಸ್ ಗಡ ಮೂಲದ ಮಾನಸಿಕ ಅಸ್ವಸ್ಥ ಸಂಜಯ್ ಎಂಬವರು ಬೆಂಗಳೂರಿನಲ್ಲಿ ತನ್ನ ಸಂಬಂಧಿಕರೊಂದಿಗೆ ಮೀನು ರಫ್ತು ಕೆಲಸ ಮಾಡಿಕೊಂಡಿದ್ದು, ಅಲ್ಲಿಂದ ರೈಲು ಏರಿ ಪುತ್ತೂರಿಗೆ ಬಂದಿದ್ದರು. ಆ.24ರಂದು ಬೆಳಗ್ಗಿನಿಂದ ದೇವಳದ ಗದ್ದೆಯಲ್ಲಿ ಸುತ್ತಾಡುತ್ತಿದ್ದ ಸಂಜಯ್ ರಾತ್ರಿ ದೇವಳದ ಪಕ್ಕದಲ್ಲಿರುವ ಮನೆಗಳಿಗೆ ಹೋಗಿ ಬಾಗಿಲು ಬಡಿದಿದ್ದಾರೆಂದು ಆರೋಪಿಸಲಾಗಿದೆ. ಈ ವೇಳೆ ಕಬಡ್ಡಿ ಪಂದ್ಯಾಟದ ಬಳಿ ಇದ್ದ ಕಾರ್ಯಕರ್ತರು ಅಲ್ಲಿ ತೆರಳಿ ಆತನನ್ನು ವಿಚಾರಿಸಿ ಆತನ ಮೂಲಕ ಸಂಬಂಧಿಕರ ಮೊಬೈಲ್ ಪೋನ್ ನಂಬರ್ ಪಡೆದು ಕರೆ ಮಾಡಿ ತಿಳಿಸಿದರು. ಆ ವೇಳೆ ಸಂಜಯ್ ಮಾನಸಿಕ ಅಸ್ವಸ್ಥನಾಗಿದ್ದು, ಈತ ಬೆಂಗಳೂರಿನಿಂದ ನಾಪತ್ತೆಯಾಗಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಬಳಿಕ ಹಿಂದು ಸಂಘಟನೆಯ ಕಾರ್ಯಕರ್ತರಾದ ಧನ್ಯ ಕುಮಾರ್ ಬೆಳಂದೂರು, ವಿನಯ್ ಸಹಿತ ಹಲವಾರು ಮಂದಿ ಸಂಜಯ್ ನನ್ನು ಮಂಗಳೂರಿನಲ್ಲಿರುವ ಆತನ ಸಂಬಂಧಿಕರಲ್ಲಿ ಬಿಟ್ಟು ಬಂದಿದ್ದಾರೆ.