ಉಪ್ಪಿನಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ 45ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ.27ರಂದು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ನಡೆಯಲಿದೆ.
ಬೆಳಗ್ಗೆ 9ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, 9.30ರಿಂದ ಅಡ್ಡ ಜಾರುಕಂಬ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ 12 ರಿಂದ ಮುದ್ದು ಮಕ್ಕಳ ಕೃಷ್ಣ ವೇಷ ಸ್ಪರ್ಧೆ ನಡೆಯಲಿದ್ದು, 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 1.30ರಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅಪರಾಹ್ನ 2ರಿಂದ ಶೋಭಾ ಯಾತ್ರೆ ನಡೆಯಲಿದ್ದು, ಮೆರವಣಿಗೆಯು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಿಂದ ರಥಬೀದಿ, ಗಾಂಧಿಪಾರ್ಕ್, ರಾಷ್ಟ್ರೀಯ ಹೆದ್ದಾರಿ, ಮಾದರಿ ಶಾಲೆ, ಇಂದ್ರಪ್ರಸ್ಥ ವಿದ್ಯಾಲಯ ಮಾರ್ಗವಾಗಿ ದೇವಾಲಯಕ್ಕೆ ವಾಪಾಸಾಗಲಿದೆ. ಈ ಸಂದರ್ಭ ಮಾರ್ಗದುದ್ದಕ್ಕೂ ಕಟ್ಟಲಾದ ಅಟ್ಟಿ ಮಡಿಕೆ ಮತ್ತು ಮೊಸರು ಕುಡಿಕೆಗಳನ್ನು ಭಕ್ತಾದಿಗಳು ಪಿರಮಿಡ್ ರಚಿಸಿ ಒಡೆಯುವ ಅವಕಾಶ ಕಲ್ಪಿಸಲಾಗಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಅತ್ರೆಮಜಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.