ಪುತ್ತೂರು: ಯುವಕ ಮಂಡಲಗಳು ಸಮಾಜದಲ್ಲಿ ಕಲೆ, ಸಂಸ್ಕೃತಿ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಯುವ ಜನತೆಯನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರೇರೇಪಿಸುತ್ತದೆ. ಸರ್ವೆ ಷಣ್ಮುಖ ಯುವಕ ಮಂಡಲವು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಹೇಳಿದರು.
ಆ.26ರಂದು ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಮತ್ತು ಶ್ರೀ ಗೌರಿ ಮಹಿಳಾ ಮಂಡಲ ಸರ್ವೆ ವತಿಯಿಂದ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಆವರಣದಲ್ಲಿ ನಡೆದ ೨೩ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ ಮಾತನಾಡಿ ಷಣ್ಮುಖ ಯುವಕ ಮಂಡಲದವರು ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅದೆಲ್ಲವೂ ಸಮಾಜಕ್ಕೆ ಪೂರಕವಾಗಿದೆ, ಮುಂದಕ್ಕೂ ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕು, ನಮ್ಮ ಬೆಂಬಲ ಸದಾ ಇದೆ ಎಂದು ಹೇಳಿದರು.
ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರ ಶ್ರೀನಿವಾಸ ಎಚ್.ಬಿ ಮಾತನಾಡಿ ಷಣ್ಮುಖ ಯುವಕ ಮಂಡಲವು ಒಳ್ಳೆಯ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದು, ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಕೂಡಾ ಇದು ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇದ್ದಾಗ ಎಲ್ಲವೂ ಚೆನ್ನಾಗಿರುತ್ತದೆ, ಯುವಕ ಮಂಡಲದ ಜೊತೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಸಾಧಕ ಡಾಕ್ಟರ್‌ಗೆ ಸನ್ಮಾನ:
ಗ್ರಾಮದ ಯಾವುದೇ ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಬೆಂಬಲ ನೀಡುತ್ತಿರುವ ಮತ್ತು ವೈದ್ಯಕೀಯ ವೃತ್ತಿಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಜನಮೆಚ್ಚಿದ ವೈದ್ಯ ಎಂದೇ ಪ್ರಸಿದ್ದಿ ಪಡೆದಿರುವ ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರು, ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರೂ ಆಗಿರುವ ಡಾ.ಸೀತಾರಾಮ ಭಟ್ ಕಲ್ಲಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಯುವಕ ಮಂಡಲದ ಸದಸ್ಯ ಚಿರಾಗ್ ರೈ ಮೇಗಿನಗುತ್ತು ಸನ್ಮಾನ ಪತ್ರ ವಾಚಿಸಿದರು.
ಸನ್ಮಾನ ಸ್ವೀಕರಿಸಿದ ಡಾ.ಸೀತಾರಾಮ ಭಟ್ ಕಲ್ಲಮ ಮಾತನಾಡಿ, ನನಗೆ ಸನ್ಮಾನ ಮಾಡುವ ವಿಚಾರ ಕೊನೆಯವರೆಗೂ ನನಗೆ ಗೊತ್ತೇ ಇರಲಿಲ್ಲ, ನಾನು ಸನ್ಮಾನಕ್ಕೆ ಅರ್ಹನೋ ಎಂಬುವುದು ನನಗೆ ಗೊತ್ತಿಲ್ಲ, ಆದರೂ ಯುವಕ ಮಂಡಲದವರು ಕೊಟ್ಟ ಈ ಪ್ರೀತಿಯ ಸನ್ಮಾನ ನನ್ನ ಪಾಲಿಗೆ ಅವಿಸ್ಮರಣೀಯವಾಗಲಿದೆ ಎಂದು ಹೇಳಿದರು. ತಾವು ಜೀವನದಲ್ಲಿ ನಡೆದು ಬಂದ ಹಾದಿಯ ಬಗ್ಗೆ ಸಂಕ್ಷಿಪ್ತವಾಗಿ ಮೆಲುಕು ಹಾಕಿದ ಡಾ.ಸೀತಾರಾಮ ಭಟ್ ಅವರು ಷಣ್ಮುಖ ಯುವಕ ಮಂಡಲದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
‘ಸ್ನೇಕ್ ಮನೋಜ್’ಗೆ ಸನ್ಮಾನ:
ಶೌರ್ಯ ವಿಪತ್ತು ದಳದ ಪುತ್ತೂರು ತಾಲೂಕು ಅಧ್ಯಕ್ಷರು, ಷಣ್ಮುಖ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮನೋಜ್ ಸುವರ್ಣ ಸೊರಕೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮನೋಜ್ ಸುವರ್ಣ ಅವರು ಇತ್ತೀಚಿನ ವರ್ಷಗಳಲ್ಲಿ ಹಲವಾರು ಹಾವುಗಳನ್ನು ರಕ್ಷಣೆ ಮಾಡಿದ್ದು ಸ್ಥಳೀಯವಾಗಿ ಉರಗಗಳನ್ನು ಹಿಡಿದು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ‘ಸ್ನೇಕ್ ಮನೋಜ್’ ಎಂದೇ ಪ್ರಸಿದ್ದಿ ಪಡೆದಿದ್ದಾರೆ.
ಸ್ವಾಗತಿಸಿದ ಶ್ರೀ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು ಮಾತನಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಮ್ಮ ಯುವಕ ಮಂಡಲವು ಸಾಮಾಜಿಕ, ಶೈಕ್ಷಣಿಕ ಕುಂದು ಕೊರತೆಗಳಿಗೆ ಸ್ಪಂಧಿಸುವ, ಸಾಮಾಜಿಕ ಬದ್ದತೆ ಮತ್ತು ಕಳಕಳಿಯುಳ್ಳ ಕ್ರಿಯಾಶೀಲ ಯುವಕರ ತಂಡವಾಗಿದ್ದು, ರಾಜ್ಯದ ಅತ್ಯುತ್ತಮ ಯುವಕ ಮಂಡಲಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಎಂದು ಹೇಳಿದರು. ವಿಶೇಷವಾಗಿ ಸರ್ವೆ ಗ್ರಾಮಸ್ಥರ ಸಹಕಾರದಿಂದ ಕಳೆದ 23 ವರ್ಷಗಳಿಂದ ನಮ್ಮ ಯುವಕ ಮಂಡಲವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. 2018 ಮತ್ತು 2019ರಲ್ಲಿ ನಡೆದ ಸ್ವಚ್ಛ ಭಾರತ್ ಸಮ್ಮರ್ ಇಂಟರ್‌ಶಿಪ್ ಪ್ರೋಗ್ರಾಮ್ ಅಡಿಯಲ್ಲಿ ಸತತ ಎರಡು ಬಾರಿ ದ.ಕ ಜಿಲ್ಲೆಯಲ್ಲಿ ಪ್ರಥಮ ಮತ್ತು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು ಕೇಂದ್ರ ಸರಕಾರದಿಂದ ನಗದು ಪುರಸ್ಕಾರವನ್ನೂ ಪಡೆದುಕೊಂಡಿದೆ, ಮುಂದಕ್ಕೂ ವಿವಿಧ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.
ಯುವಕ ಮಂಡಲದ ಸಂಚಾಲಕ ರಾಮಣ್ಣ ಪೂಜಾರಿ ಭಕ್ತಕೋಡಿ, ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಎಸ್.ಡಿ, ಭಕ್ತಕೋಡಿ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸೀತಾ ಸರ್ವೆ, ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರ ವೀರಪ್ಪ ಗೌಡ ಕರುಂಬಾರು, ಇನ್ನೋರ್ವ ಗೌರವ ಸಲಹೆಗಾರ ಶಶಿಧರ್ ಎಸ್.ಡಿ ಸಮಯೋಚಿತವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಷಣ್ಮುಖ ಯುವಕ ಮಂಡಲದ ಗೌರವಾಧ್ಯಕ್ಷ ವಸಂತ ಎಸ್.ಡಿ ಮಾತನಾಡಿ ದೇವರು ನೀಡಿರುವ ಸಂದೇಶವನ್ನು ಮೊಸರು ಕುಡಿಕೆ ಉತ್ಸವದ ಮೂಲಕ ಯುವಕ ಮಂಡಲ ಅನುಷ್ಠಾನಗೊಳಿಸುತ್ತಿದೆ, ಇದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ನಾವು ಕೆಲಸ ಮಾಡುವ ಮೂಲಕ ಗುರುತಿಸಿಕೊಳ್ಳಬೇಕು, ನಾವು ಮಾಡಿರುವ ಒಳ್ಳೆಯ ಕೆಲಸ ನಮ್ಮನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ ಎಂದ ಅವರು ಎಲ್ಲ ಜಾತಿ, ಧರ್ಮ, ಪಂಗಡಗಳನ್ನು ಗೌರವಿಸುತ್ತಾ ನಾವೆಲ್ಲರೂ ಪರಸ್ಪರ ಅನ್ಯೋನ್ಯತೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸರ್ವೆ ಶ್ರೀ ಗೌರಿ ಮಹಿಳಾ ಮಂಡಲದ ಕಾರ್ಯದರ್ಶಿ ಕುಶಾಲ ನಾಗೇಶ್ ಉಪಸ್ಥಿತರಿದ್ದರು.
ಯುವಕ ಮಂಡಲದ ಪ್ರ.ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಂ ಶರೀಫ್ ಸರ್ವೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಭಕ್ತಕೋಡಿ ಅಂಗನವಾಡಿ ವಠಾರದಿಂದ ಭಕ್ತಕೋಡಿ ಭಜನಾ ಮಂದಿರದವರೆಗೆ ಶ್ರೀ ಕೃಷ್ಣ ವೇಷಧಾರಿ ಪುಟಾಣಿಗಳ ಜೊತೆ ಭಜನಾ ಮೆರವಣಿಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಊರವರು ಪಾಲ್ಗೊಂಡಿದ್ದರು.