ಕೊಯಿಲ ಗ್ರಾಮಸಭೆ

0

ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸುವಂತೆ ಗ್ರಾಮಸ್ಥರ ಆಗ್ರಹ

ರಾಮಕುಂಜ: ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದು ಈ ಬಗ್ಗೆ ಇಲಾಖೆಗೆ ಮನವಿ ಮಾಡಲು ಕೊಯಿಲ ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.


ಸಭೆ ಆ.14ರಂದು ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಮುಖ್ಯ ಪಶುವೈದ್ಯಾಧಿಕಾರಿ ಡಾ.ಅಜಿತ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಆರೋಗ್ಯ ಇಲಾಖೆ ಪರವಾಗಿ ಮಾಹಿತಿ ನೀಡಿದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಶಿಶಿರ ಅವರು, ವೈದ್ಯಾಧಿಕಾರಿಯವರ ಸಲಹೆ ಪಡೆದೇ ಮಾತ್ರೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥೆ ಸೆಲಿಕತ್ ಅವರು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ನಾವು ಹೇಗೆ ಸಲಹೆ ಪಡೆದುಕೊಳ್ಳುವುದು ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾಮಸ್ಥ ಝುನೈದ್ ಕೆಮ್ಮಾರ ಅವರು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತಲಿನ ಆರು ಗ್ರಾಮಗಳಿಗೆ ಸಂಬಂಧಿಸಿದೆ. ಇಲ್ಲಿ ಕಳೆದ 10 ವರ್ಷಗಳಿಂದ ಖಾಯಂ ವೈದ್ಯಾಧಿಕಾರಿಯವರು ಇಲ್ಲ. ಈ ವಿಚಾರವನ್ನು ಹಲವು ಸಲ ಇಲಾಖೆ ಗಮನಕ್ಕೆ ತಂದರೂ ವೈದ್ಯಾಧಿಕಾರಿ ನೇಮಕ ಆಗಿಲ್ಲ. ಗ್ರಾಮಸಭೆಗೆ ತಾಲೂಕು ಆರೋಗ್ಯಾಧಿಕಾರಿಯವರನ್ನೇ ಕರೆಸಬೇಕೆಂದು ವಾರ್ಡ್‌ಸಭೆಯಲ್ಲಿ ನಿರ್ಣಯಿಸಲಾಗಿದೆ. ಆದರೂ ಗ್ರಾಮಸಭೆಗೆ ತಾಲೂಕು ಆರೋಗ್ಯಾಧಿಕಾರಿಯವರು ಏನು ಬಂದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಅವರು, ತಾಲೂಕು ಆರೋಗ್ಯಾಧಿಕಾರಿಯವರಿಗೆ ಮಾಹಿತಿ ನೀಡಿ ಗ್ರಾಮಸಭೆಗೆ ಬರುವಂತೆ ಕೇಳಿಕೊಳ್ಳಲಾಗಿದೆ. ಆದರೆ ಅವರು ತಾಲೂಕು ಮಟ್ಟದ ಅಧಿಕಾರಿಯಾಗಿರುವುದರಿಂದ ಗ್ರಾಮಸಭೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು. ವೈದ್ಯಾಧಿಕಾರಿ ಡಾ.ಶಿಶಿರ ಅವರು ಮಾತನಾಡಿ, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುತ್ತಿಗೆ ಆಧಾರದ ವೈದ್ಯರ ನೇಮಕ ಆಗಿದೆ. ಆದರೆ ಅವರು ರಜೆ ಪಡೆದು ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ ಎಂದರು. ಆರೋಗ್ಯ ರಕ್ಷಾ ಸಮಿತಿ ಸಭೆ ಕರೆಯದೇ ಇರುವುದಕ್ಕೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಮೋಹನದಾಸ್ ಶೆಟ್ಟಿ ಬಡಿಲ, ಅಬೂಬಕ್ಕರ್ ಸಿದ್ದೀಕ್ ಮುನೀರ್ ಆತೂರು, ಎ.ಕೆ.ಬಶೀರ್ ಆತೂರು ಮತ್ತಿತರರು ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆದು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶೀಘ್ರ ಖಾಯಂ ವೈದ್ಯಾಧಿಕಾರಿ ನೇಮಕಗೊಳಿಸುವಂತೆ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ರಸ್ತೆ ಬಂದ್ ಆರೋಪ:
ಬೂಡಲೂರು ಬೈಲಿನ 9 ಮನೆಯವರಿಗೆ ಹಿರಿಯರ ಕಾಲದಿಂದಲೂ ಕೃಷಿ ಜಮೀನಿಗೆ ಹೋಗಲು ಸರಕಾರಿ ಜಾಗದಲ್ಲಿ ಇದ್ದ ರಸ್ತೆ ಬಂದ್ ಮಾಡಿ ಸರಕಾರಿ ಜಮೀನನ್ನೂ ಅಕ್ರಮವಾಗಿ ದಿನೇಶ್ ಶೆಟ್ಟಿ ಎಂಬವರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ಏನೂ ಕ್ರಮ ಕೈಗೊಂಡಿದ್ದೀರಿ ಎಂದು ಸುಪ್ರೀತ್ ರೈ, ದಿನೇಶ್ ಬಿ., ಕೃಷ್ಣಪ್ಪ ಗೌಡ, ದಾಮೋದರ ಗೌಡ, ರಾಜೇಶ ಮತ್ತಿತರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಪುಷ್ಪಾ ಸುಭಾಶ್ ಶೆಟ್ಟಿ ಅವರು, ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ. ಈ ವಿವಾದ ಕೋರ‍್ಟ್‌ನಲ್ಲಿ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀತ್ ರೈ ಹಾಗೂ ಇತರರು ಕೇಸು ಇರುವುದೇ ಬೇರೆ, ರಸ್ತೆ ಬಂದ್ ಮಾಡಿರುವ ವಿಚಾರವೇ ಬೇರೆ ಎಂದರು. ಈ ಬಗ್ಗೆ ಚರ್ಚೆ, ಗದ್ದಲವೂ ನಡೆಯಿತು. 1 ವರ್ಷದಿಂದ ಈ ವಿವಾದವಿದೆ. ಆದಷ್ಟೂ ಬೇಗ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ರಾಮಕುಂಜ ಶಾಲೆಗೆ ಹೊಸಕಟ್ಟಡ ನೀಡಿ:
ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಟ್ಟಡದ ಛಾವಣಿ ಸೋರುತ್ತಿದ್ದು ಇಲ್ಲಿಗೆ ಹೊಸ ಕಟ್ಟಡ ನೀಡಬೇಕೆಂದು ಮುನೀರ್ ಆತೂರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್‌ಪಿ ಮಹೇಶ್ ಅವರು, ಇಲ್ಲಿನ ಮೂರು ಕೊಠಡಿ ನಾದುರಸ್ತಿಯಲ್ಲಿದೆ. ಕ್ಲಸ್ಟರ್ ಕೇಂದ್ರವೂ ಆಗಿರುವುದರಿಂದ ಇಲ್ಲಿಗೆ ಹೊಸ ಕಟ್ಟಡ ಆಗಬೇಕಾಗಿದೆ ಎಂದರು. ಕೊಲ ಸದಾಶಿವ ದೇವಸ್ಥಾನದಿಂದ ಕೊಲ ಕೆ.ಸಿ.ಫಾರ್ಮ್ ಸರಕಾರಿ ಶಾಲೆಗೆ ನೇರ ರಸ್ತೆ ಇದ್ದು ಇದರ ದುರಸ್ತಿ ಮಾಡಬೇಕೆಂದು ಎ.ಕೆ.ಬಶೀರ್ ಆತೂರು ಒತ್ತಾಯಿಸಿದರು. ಶಾಲೆಯ ಆವರಣ, ಕೆ.ಸಿ.ಫಾರ್ಮ್ ಜಾಗದಲ್ಲಿ ಬೈಕ್‌ನಲ್ಲಿ ಬಂದು ಫೋಟೋ, ವಿಡಿಯೋ ಮಾಡುವವರಿಗೆ ಕಡಿವಾಣ ಹಾಕಬೇಕೆಂದು ವಿನೋದ್ ಪಲ್ಲಡ್ಕ ಒತ್ತಾಯಿಸಿದರು.

ಪಡಿತರ ಪಡೆಯಲು ಸಮಸ್ಯೆ:
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಲ ಶಾಖೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಪಡಿತರ ಪಡೆಯಲು ಸಮಸ್ಯೆಯಾಗುತ್ತಿದೆ. ಸಿಂಟೆಕ್ಸ್ ಟ್ಯಾಂಕ್‌ಗಳನ್ನೂ ಶಾಖೆಯ ಮುಂಭಾಗದಲ್ಲೇ ಇಡಲಾಗಿದೆ. ಗೊಬ್ಬರದ ಲಾರಿಯೂ ಬಂದಲ್ಲಿ ಸರದಿ ಸಾಲಿನಲ್ಲಿ ನಿಂತು ಪಡಿತರ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಹಂಝ ಕೆಮ್ಮಾರ ಹೇಳಿದರು. ಈ ಬಗ್ಗೆ ಸಂಘಕ್ಕೆ ಮನವಿ ಮಾಡಲಾಗುವುದು ಎಂದು ಪಿಡಿಒ ಸಂದೇಶ್ ಅವರು ತಿಳಿಸಿದರು. ಯಶಸ್ವಿನಿ ವಿಮಾ ಯೋಜನೆಯಡಿ ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸಿಗಬೇಕೆಂದು ಅಬೂಬಕ್ಕರ್ ಸಿದ್ಧೀಕ್ ಮುನೀರ್ ಆತೂರು ಒತ್ತಾಯಿಸಿದರು. ಈ ಬಗ್ಗೆ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು.

ಹೆಚ್ಚುವರಿ ಬಸ್ಸು ಓಡಿಸಿ:
ಬೆಳಿಗ್ಗೆ ಹಾಗೂ ಸಂಜೆಯ ಸಮಯ ಉಪ್ಪಿನಂಗಡಿ-ಕಡಬ ಮಧ್ಯೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟ ಮಾಡಬೇಕೆಂದು ಝುನೈದ್ ಕೆಮ್ಮಾರ ಒತ್ತಾಯಿಸಿದರು. ನಿರ್ವಾಹಕರು ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ದೂರುಗಳು ಇವೆ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿ ಅಬ್ಬಾಸ್ ಕೋಚಕಟ್ಟೆ ಅವರು, ಚಾಲಕ, ನಿರ್ವಾಹಕರು ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತನೆಗೆ ಅವಕಾಶ ಇಲ್ಲ. ಈ ಬಗ್ಗೆ ಚಾಲಕ, ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿದೆ. ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಹೊಳೆನರಸಿಪುರ ಬಸ್ಸು ಕೊಲದಲ್ಲಿ ನಿಲುಗಡೆ ಆಗಬೇಕೆಂದು ಪುರುಷೋತ್ತಮ ಕೊಲ ಒತ್ತಾಯಿಸಿದರು. ಈ ಬಗ್ಗೆ ಅಲ್ಲಿನ ಡಿಪೋ ಮ್ಯಾನೇಜರ್‌ಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಶಾಖೆಪುರಕ್ಕೆ ಸಂಜೆ ವೇಳೆಗೆ ಬರುವ ಕೆಎಸ್‌ಆರ್‌ಟಿಸಿ ಬಸ್ಸನ್ನು ಕೊಲದ ತನಕ ಬಂದು ಹೋಗುವಂತೆ ಮಾಡಬೇಕೆಂದು ಗ್ರಾ.ಪಂ.ಸದಸ್ಯ ನಝೀರ್ ಪೂರಿಂಗ ಒತ್ತಾಯಿಸಿದರು.

ರಸ್ತೆ ಪಕ್ಕವೇ ಮರ:
ಆತೂರಿನಲ್ಲಿ ಬಿಎಸ್‌ಎನ್‌ಎಲ್ ಕಚೇರಿ ಮುಂದೆ, ರಾಮಕುಂಜ ಗ್ರಾ.ಪಂ.ನ ಮುಂಭಾಗದಲ್ಲಿದ್ದ ಅಪಾಯಕಾರಿ ಮರ ತೆರವುಗೊಳಿಸಿದ್ದರೂ ಮರದ ತುಂಡು ಈಗಲೂ ಅಲ್ಲಿ ಹೆದ್ದಾರಿ ಬದಿಯಲ್ಲಿಯೇ ಇದೆ. ಇದರಿಂದ ಅಪಘಾತ ಆಗುವ ಸಾಧ್ಯತೆಯೂ ಇದೆ ಎಂದು ಅಶೋಕ್ ಕೊಲ, ಮುನೀರ್ ಆತೂರು ಮತ್ತಿತರರು ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದರು. ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಉಪ ವಲಯಾರಣ್ಯಾಧಿಕಾರಿಯವರು ಭರವಸೆ ನೀಡಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಪಿಡಿಒ ಸಂದೇಶ್ ಅವರು, ಸಬಳೂರು, ಗಂಡಿಬಾಗಿಲು, ಆತೂರಿನಲ್ಲಿದ್ದ ಅಪಾಯಕಾರಿ ಮರ ತೆರವುಗೊಳಿಸಲಾಗಿದೆ. ಬೇರೆ ಕಡೆ ಇದ್ದಲ್ಲಿ ಗ್ರಾಮಸ್ಥರು ಮಾಹಿತಿ ನೀಡಿದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಎಲ್ಯಂಗ ಎಂಬಲ್ಲಿ ಹೊಸ ಅಂಗನವಾಡಿ ಕೇಂದ್ರ ಆರಂಭಿಸಬೇಕೆಂದು ಮುನೀರ್ ಆತೂರು ಒತ್ತಾಯಿಸಿದರು. ಖಾಯಂ ಗ್ರಾಮ ಆಡಳಿತಾಧಿಕಾರಿ ನೇಮಕಕ್ಕೆ ಗ್ರಾಮಸ್ಥರು ಒತ್ತಾಯಿಸಿದರು. ಮೆಸ್ಕಾಂ, ಜೆಜೆಎಂ ಕಾಮಗಾರಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು. ವೈದ್ಯಾಧಿಕಾರಿ ಡಾ.ಶಿಶಿರ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಲ ಶಾಖಾ ಸಿಬ್ಬಂದಿ ಲೋಕನಾಥ ರೈ, ರಾಮಕುಂಜ ಕ್ಲಸ್ಟರ್ ಸಿಆರ್‌ಪಿ ಮಹೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಉಮಾವತಿ, ಉಪವಲಯಾರಣ್ಯಾಧಿಕಾರಿ ಕಾಂತರಾಜು, ಕೆಎಸ್‌ಆರ್‌ಟಿಸಿಯ ಅಬ್ಬಾಸ್ ಕೋಚಕಟ್ಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶೋಭಾ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ, ಕಡಬ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹರೀಶ್, ಮೆಸ್ಕಾಂ ಸಹಾಯಕ ಅಭಿಯಂತರ ನಿತಿನ್‌ಕುಮಾರ್ ಅವರು ಇಲಾಖಾವಾರು ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷ ಯತೀಶ್ ಕುಮಾರ್ ಹೆಚ್., ಸದಸ್ಯರಾದ ಹರ್ಷಿತ್‌ಕುಮಾರ್, ನೀತಾ ಎನ್., ಸಫಿಯಾ, ಹಸನ್ ಸಜ್ಜಾದ್, ಜೊಹರಾಬಿ, ನಝೀರ್ ಪೂರಿಂಗ, ಕಮಲಾಕ್ಷಿ, ಸೀತಾರಾಮ ಬಲ್ತಕುಮೇರು, ಲತಾ, ಭಾರತಿ, ಶಶಿಕಲಾ ಎಂ., ಚಿದಾನಂದ ಪಿ., ಚಂದ್ರಶೇಖರ ಮಾಳ ಉಪಸ್ಥಿತರಿದ್ದರು. ಪಿಡಿಒ ಸಂದೇಶ್ ಸ್ವಾಗತಿಸಿ, ವರದಿ ಮಂಡಿಸಿದರು. ಕಾರ್ಯದರ್ಶಿ ಪಮ್ಮು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here