ನೇತ್ರಾವತಿ ನದಿಯಲ್ಲಿ ತೇಲಿ ಹೋದ ಮೃತದೇಹ

0

ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಯ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ತೇಲಿ ಹೋಗಿದ್ದು, ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಪ್ರವಾಹ ರಕ್ಷಣಾ ತಂಡದವರಿಗೆ ದೋಣಿಗೆ ಒಬಿಎಂ (ಎಂಜಿನ್) ಸಿಕ್ಕಿಸಿ ದೋಣಿ ಚಲಾಯಿಸಲು ಸಾಧ್ಯವಾಗದಿರುವುದರಿಂದ ಅವರ ಕೈಗೂ ಮೃತದೇಹ ಸಿಗದೇ ಮುಂದಕ್ಕೆ ಸಾಗಿದೆ.


ನೀಲಿ ಬಣ್ಣದ ಒಳ ಉಡುಪನ್ನು ತೊಟ್ಟಿರುವ ಮೃತದೇಹವೊಂದು ನದಿಯಲ್ಲಿ ತೇಲಿ ಹೋಗುತ್ತಿರುವುದನ್ನು ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ನೇತ್ರಾವತಿ ಸೇತುವೆಯ ಮೇಲಿನಿಂದ ಸಾರ್ವಜನಿಕರು ನೋಡಿದ್ದು, ಬಳಿಕ ಈ ಬಗ್ಗೆ ಉಪ್ಪಿನಂಗಡಿ ದೇವಾಲಯದ ಬಳಿಯಿರುವ ಗೃಹರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಯಿತು.

ಅಷ್ಟರಲ್ಲಾಗಲೇ ಮೃತದೇಹ ನದಿಯಲ್ಲಿ ತೇಲಿಕೊಂಡು ಮುಂದಕ್ಕೆ ಸಾಗಿತ್ತು. ದೇವಾಲಯದ ಬಳಿ ದೋಣಿಯೊಂದಿಗೆ ನದಿಗಿಳಿದು ಮೃತದೇಹವನ್ನು ಹಿಡಿಯಲು ಪ್ರವಾಹ ರಕ್ಷಣಾ ತಂಡದವರು ಕಾದು ಕುಳಿತಿದ್ದರಾದರೂ, ಮೃತದೇಹ ನದಿಯ ಮತ್ತೊಂದು ಬದಿಯಿಂದ ತೇಲಿಕೊಂಡು ಮುಂದಕ್ಕೆ ಸಾಗಿ ಹೋಗಿದ್ದರಿಂದ ಅವರಿಗೂ ಮೃತದೇಹವನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಈ ಮೃತದೇಹ ಗಂಡಸಿನದ್ದಾಗಿರಬೇಕೆಂದು ಶಂಕಿಸಲಾಗಿದೆ.


ಒಬಿಎಂ ಸಿಕ್ಕಿಸಲು ಸಾಧ್ಯವಿಲ್ಲ:
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಪ್ರವಾಹ ರಕ್ಷಣಾ ತಂಡದವರು, ನಮ್ಮದು 30 ಎಚ್‌ಪಿ ಮೋಟಾರಿನ ರಬ್ಬರ್ ದೋಣಿಯಾಗಿದ್ದು, ನದಿಯಲ್ಲಿ ಹೆಚ್ಚು ನೀರಿದ್ದಷ್ಟು, ದೋಣಿಗೆ ಒಬಿಎಂ (ಎಂಜಿನ್) ಸಿಕ್ಕಿಸಿ, ಆರಾಮವಾಗಿ ಚಲಾಯಿಸಬಹುದು. ಆದರೆ ದೋಣಿಗೆ ಒಬಿಎಂ ಸಿಕ್ಕಿಸಲು ನದಿಯಲ್ಲಿ 25.05 ಮೀ.ನಷ್ಟು ನೀರು ಇರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಈ ಒಬಿಎಂನ ಫ್ಯಾನ್‌ಗಳು ನದಿ ಒಡಲಲ್ಲಿರುವ ಕಲ್ಲು, ಕುರುಚಲು ಗಿಡಗಳಿಗೆ ಸಿಕ್ಕಿ ಅದರ ಫ್ಯಾನ್ ಬೆಲ್ಟ್ ತುಂಡಾಗುವ ಸಂಭವವಿದೆ. ಆದರೆ ಇವತ್ತು ನದಿಯಲ್ಲಿ 24.08ಮೀ. ಮಾತ್ರ ನೀರಿತ್ತು. ಆದ್ದರಿಂದ ಈ ನೀರಿನಲ್ಲಿ ಒಬಿಎಂ ಸಿಕ್ಕಿಸಿ ದೋಣಿಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಮೃತದೇಹ ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಬರುವಾಗ ಸೇತುವೆಯಿಂದ ಅದು ತುಂಬಾ ದೂರ ಮುಂದಕ್ಕೆ ಕ್ರಮಿಸಿ ಆಗಿದೆ. ಆದರೂ ನಾವು ಒಬಿಎಂ ಸಿಕ್ಕಿಸದೇ ದೋಣಿಯನ್ನು ಹುಟ್ಟಿನ ಮೂಲಕ ನದಿಗಿಳಿಸಿದ್ದೇವೆ. ಆದರೆ ಮೃತದೇಹ ನದಿಯ ಮತ್ತೊಂದು ಬದಿಯಿಂದಾಗಿ ಹೋಗಿರುವುದರಿಂದ ಅದನ್ನು ಹಿಡಿಯಲು ಸಾಧ್ಯವಾಗಿಲ್ಲ. ನದಿಯ ಮಧ್ಯದಲ್ಲಿ ನೀರಿನ ಹರಿವು ರಭಸದಿಂದ ಕೂಡಿತ್ತು. ಹಾಗಾಗಿ ಹುಟ್ಟಿನ ಮೂಲಕ ದೋಣಿಯನ್ನು ನದಿಯ ಮತ್ತೊಂದು ಬದಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here