ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ನಿರ್ಮಾಣಗೊಂಡಿರುವ ಸರ್ವೀಸ್ ರಸ್ತೆ ದುರಸ್ತಿಗೆ ಒತ್ತಾಯಿಸಿ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿರುವ ಕೆಎನ್‌ಆರ್ ಕಂಪನಿಯವರಿಗೆ ಸೋಶಿಯಲ್ ಡೆಮೋಕ್ರೇಟಿಕ್ ಟ್ರೇಡ್ ಯೂನಿಯನ್(ಎಸ್‌ಡಿಟಿಯು) ವತಿಯಿಂದ ಆ.27ರಂದು ಮನವಿ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಪೇಟೆಯ ಎರಡೂ ಬದಿ ನಿರ್ಮಾಣಗೊಂಡಿರುವ ಸರ್ವೀಸ್ ರಸ್ತೆಯಲ್ಲಿಯೇ ಘನ ವಾಹನಗಳೂ ಸಂಚರಿಸುತ್ತಿರುವುದರಿಂದ ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿ ಲಘು ವಾಹನಗಳಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೇ ದಿನ ನಿತ್ಯ ಪೇಟೆಗೆ ಬರುವ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಓಡಾಟಕ್ಕೂ ಅಡಚಣೆ ಉಂಟಾಗುತ್ತಿದೆ. ಮಳೆ ನೀರು ಹೊಂಡದಲ್ಲಿ ತುಂಬಿ ಪಾದಚಾರಿಗಳಿಗೆ, ಅಂಗಡಿಯವರಿಗೆ ಕೆಸರಿನ ಸಮಸ್ಯೆ ಉಂಟಾಗಿದೆ. ಮಳೆಬಿಟ್ಟು ಬಿಸಿಲು ಬಂದಲ್ಲಿ ಧೂಳಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸರ್ವೀಸ್ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಿ ಈ ಎಲ್ಲಾ ಸಮಸ್ಯೆ ಪರಿಹರಿಸುವಂತೆ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‌ಆರ್ ಕಂಪನಿಯವರಿಗೆ ನೆಲ್ಯಾಡಿ ಹೊರ ಠಾಣೆ ಪೊಲೀಸರ ಸಮ್ಮುಖದಲ್ಲಿ ಮನವಿ ಮಾಡಲಾಗಿದೆ.
10 ದಿನದೊಳಗೆ ದುರಸ್ತಿ ಮಾಡಿ ಕೊಡುವುದಾಗಿ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತಪ್ಪಿದ್ದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವ ಬಗ್ಗೆ ಎಸ್‌ಡಿಟಿಯು ಎಚ್ಚರಿಕೆ ನೀಡಿದೆ ಎಂದು ಎಸ್‌ಡಿಟಿಯು ನೆಲ್ಯಾಡಿ-ಕೌಕ್ರಾಡಿ ಅಧ್ಯಕ್ಷ ಹನೀಫ್ ಬೈಲು ತಿಳಿಸಿದ್ದಾರೆ. ಮನವಿ ಸಲ್ಲಿಕೆ ವೇಳೆ ಸಂಘದ ಕಾರ್ಯದರ್ಶಿ ಸಿದ್ದೀಕ್, ಎಸ್‌ಡಿಟಿಯು ಆಟೋ ಯೂನಿಯನ್ ಅಧ್ಯಕ್ಷ ರಹಿಮಾನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.