ಬೆಟ್ಟಂಪಾಡಿ: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿ 7ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯು ಆ. 27 ರಂದು ವಿಜ್ರಂಭಣೆಯಿಂದ ನೆರವೇರಿತು.
ಮುದ್ದುಕೃಷ್ಣನ ತೊಟ್ಟಿಲಶಾಸ್ತ್ರ
ಶ್ರೀ ಅಯ್ಯಪ್ಪ ಭಜನಾ ಮಂದಿರ ಶ್ರೀ ರಾಮನಗರ ಇಲ್ಲಿ ಮುದ್ದು ಕೃಷ್ಣನ ತೊಟ್ಟಿಲಶಾಸ್ತ್ರ ನಡೆದು, ಕೃಷಿಕರೂ, ಶಾಲಾ ಪೋಷಕರು ಆದ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮವನ್ನು ತೆಂಗಿನಕಾಯಿ ಒಡೆದು ಉದ್ಘಾಟಿಸಿ, ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರು ಸ್ವಾಮಿಗಳಾದ ಶ್ರೀ ಕೃಷ್ಣಪ್ಪಗೌಡ ಇವರು ದೀಪ ಬೆಳಗಿಸಿ ತೊಟ್ಟಿಲ ಶಾಸ್ತ್ರಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದ ಅತಿಥಿಗಳಾದ ಬಿಪಿನ್ ಸಾಲಿಯಾನ್ ನೆಲ್ಲಿತಡ್ಕ ಹಾಗೂ ದಯಾನಂದ ವಿನಾಯಕ ನಗರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 350ಕ್ಕೂ ಮಿಕ್ಕಿ ರಾಧಾಕೃಷ್ಣ ವೇಷಧಾರಿಗಳಿಗೆ ಮುತ್ತೈದೆಯರು ಆರತಿ ಬೆಳಗಿದರು. ಗಿರೀಶ್ವರ ಭಟ್ ಹಾಗೂ ಅಪರ್ಣ ಬಾಳೆಗುಳಿ ಇವರ ಪುತ್ರ ಎಲ್ ಕೆ ಜಿ ವಿಭಾಗದ ಅಮೇಯ ಗಣಪತಿಗೆ ಅದೃಷ್ಟ ಕೃಷ್ಣನಾಗುವ ಸುಯೋಗ ಒಲಿದು ತೊಟ್ಟಿಲಶಾಸ್ತ್ರ ನಡೆಯಿತು.
ಮೆರುಗು ನೀಡಿದ ಶೋಭಾಯಾತ್ರೆ
ಸಾವಿರಾರು ಸಂಖ್ಯೆಯಲ್ಲಿ ಶ್ರೀಕೃಷ್ಣ ರಾಧಾ ವೇಷಧಾರಿಗಳು ಸಿಂಗಾರಿ ಮೇಳದೊಂದಿಗೆ ಅಯ್ಯಪ್ಪ ಭಜನಾ ಮಂದಿರದಿಂದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯತ್ತ ಸಂಭ್ರಮದ ಶೋಭಾ ಯಾತ್ರೆಯಲ್ಲಿ ತೊಡಗಿದರು. ಶೋಭಾ ಯಾತ್ರೆಯಲ್ಲಿ ಕುಣಿತ ಭಜನೆ ಎಲ್ಲರ ಗಮನ ಸೆಳೆದಿತ್ತು.
ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು
ಬೆಳಗ್ಗಿನಿಂದ ಸಂಜೆಯವರೆಗೆ ಪೋಷಕರಿಗೆ ಹಗ್ಗಜಗ್ಗಾಟ, ಗೋಣಿಚೀಲದ ಓಟ, ಮಡಕೆ ಹೊಡೆಯುವುದು, ಭಕ್ತಿಗೀತೆ ಸ್ಪರ್ಧೆಗಳು ನಡೆದವು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಪೋಷಕರ ಸಹಕಾರವನ್ನು ಪ್ರಶಂಸಿದರು. ಮುಖ್ಯ ಅತಿಥಿಗಳಾದ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಅಧ್ಯಕ್ಷ ಸುರೇಶ ಪಿ ಇವರು ಮಾತನಾಡುತ್ತಾ ಕೃಷ್ಣನ ಬಾಲಲೀಲೆ ಹಾಗೂ ಅವನ ಆದರ್ಶಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಹಲವಾರು ನೃತ್ಯ ಪ್ರದರ್ಶನ ನಡೆಯಿತು.
ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜಯಶಾಲಿಯಾದ ಪೋಷಕರಿಗೆ ಮತ್ತು ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ವೇದಿಕೆಯಲ್ಲಿ 7ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಅತಿಥಿ ಎಲೆಕ್ಟ್ರಾನಿಕ್ ಕುಂಬ್ರ ಇದರ ಮಾಲಕ ಸಂಪತ್ ಕುಮಾರ್, ಶ್ರೀನಿಧಿ ಫಾರ್ಮ್ಸ್ ರೆಂಜ ಇದರ ಮಾಲಕರಾದ ಸಂತೋಷ್ ಕುಲಾಲ್ ಉಡ್ಡಂಗಳ, ಶಾಲಾ ಹಿರಿಯ ವಿದ್ಯಾರ್ಥಿ ಸಿವಿಲ್ ಇಂಜಿನಿಯರ್ ದಿಲೀಪ್ ರಾವ್ ಉಪಸ್ಥಿತರಿದ್ದರು.
ಮುಖ್ಯಗುರು ರಾಜೇಶ್ ಎನ್ ಸ್ವಾಗತಿಸಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸತೀಶ್ ರೈ ಕಟ್ಟಾವು ವಂದಿಸಿದರು. ಸಹ ಶಿಕ್ಷಕಿಯರಾದ ಸಂಧ್ಯಾ ಕುಮಾರಿ, ಭವ್ಯ ದಿವ್ಯಪ್ರಭು ಕಾರ್ಯಕ್ರಮ ನಿರೂಪಿಸಿದರು.