ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ದ.ಕ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ಕಾರ್ಯಾಗಾರ

0

ಪುತ್ತೂರು : ರಾಜ್ಯಶಾಸ್ತ್ರದ ವಿಷಯವು ಬಹಳ ಆಸಕ್ತಿಯ ವಿಷಯವಾಗಿದೆ. ಪ್ರಸ್ತುತ ದೇಶಕ್ಕೆ ರಾಜಕೀಯ ಶಾಸ್ತ್ರ ಬಹು ಮುಖ್ಯವಾದ ವಿಷಯ. ದೇಶಕ್ಕೆ ಉತ್ತಮ ರಾಜಕಾರಣಿಯ ಅವಶ್ಯಕತೆ ಇದೆ. ಪ್ರತಿಯೊಬ್ಬರಿಗೂ ರಾಜ್ಯಶಾಸ್ತ್ರದ ತಿಳುವಳಿಕೆ ಅಗತ್ಯ. ನಮ್ಮ ದೇಶದಲ್ಲಿ ಕಾನೂನಿಗಿಂತ ಸಂಪ್ರದಾಯ ಬಲಿಷ್ಠವಾಗಿದೆ. ಸಂವಿಧಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ, ದಕ್ಷಿಣ ಕನ್ನಡ ಪ ಪೂ ಪ್ರಾಂಶುಪಾಲರ ಸಂಘ ಮತ್ತು ಸಂತ ಫಿಲೋಮಿನಾ ಪ.ಪೂ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಆ29 ರಂದು ಸಂತ ಫಿಲೋಮಿನಾ ಪ.ಪೂ ಕಾಲೇಜಿನಲ್ಲಿ ಒಂದು ದಿನದ ರಾಜ್ಯಶಾಸ್ತ್ರದ ಕಾರ್ಯಾಗಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರಿಷ್ಕೃತ ನೂತನ ಪ್ರಶ್ನೆ ಪತ್ರಿಕೆ ‘ರಾಜ್ಯಶಾಸ್ತ್ರ ಮಾರ್ಗದರ್ಶಿ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ ನಮ್ಮ ಪ್ರತಿ ಕೆಲಸ ಉತ್ತಮವಾಗಿದ್ದರೆ ನಮ್ಮ ದೇಶ ಸಮರ್ಪಕವಾಗಿ ಬೆಳೆಯುತ್ತದೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ಕೂಡ ರಾಜ್ಯಶಾಸ್ತ್ರದ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳಿಗೆ ರಾಜಕೀಯ ವಿಚಾರದೊಂದಿಗೆ ವರ್ತಮಾನದ ರಾಜಕೀಯ ವ್ಯವಸ್ಥೆಯನ್ನು ತಿಳಿಸುವ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ಆಸಕ್ತಿಯನ್ನು ಮೂಡಿಸುವ ಕೆಲಸ ನಡೆಯಬೇಕು. ರಾಜ್ಯಶಾಸ್ತ್ರ ರಾಜಕೀಯಕ್ಕೆ ಮಾತ್ರ ಸೀಮಿತವಾಗದೆ, ದೇಶದ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳಲ್ಲಿ ಕಾಲೇಜು ಮಟ್ಟದಲ್ಲಿ ಹೆಚ್ಚು ಹೆಚ್ಚು ರಾಜಕೀಯ ಮತ್ತು ಸಾಮಾಜಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆಯನ್ನು ನೀಡಬೇಕು ಎಂದು ಹೇಳಿದರು


ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಎಲ್ ಧರ್ಮ ಅವರು ರಾಜ್ಯಶಾಸ್ತ್ರದ ಪರಿಷ್ಕೃತ ಕೈಪಿಡಿಯ ಬಿಡುಗಡೆ ಮಾಡಿ ಮಾತನಾಡಿ ನಮ್ಮ ದೇಶದ ಇತಿಹಾಸದ ಪ್ರಮುಖ ಲಕ್ಷಣ ವೈವಿಧ್ಯತೆಯಲ್ಲಿ ಏಕತೆ. ಆದರೆ ಅದು ಇದೀಗ ಏಕತೆಯಲ್ಲಿ ವೈವಿಧ್ಯತೆಯ ಕಡೆಗೆ ಹೋಗುತ್ತಿದೆ. ಅಂದರೆ ಈಗ ನಮ್ಮ ದೇಶದ ಲಕ್ಷಣವನ್ನೇ ತಿರುಚಲು ಹೊರಟಿದ್ದೇವೆ. ಅದು ನಮ್ಮ ದೇಶದ ದೊಡ್ಡ ದುರಂತವೇ ಸರಿ. ಪ್ರಸ್ತುತ ವೈವಿಧ್ಯತೆಯಲ್ಲಿ ವೈರುಧ್ಯತೆಯನ್ನು ಕಾಣುತ್ತಿದ್ದೇವೆ. ಪ್ರತಿಯೊಂದು ದಿಕ್ಕಲ್ಲಿಯೂ ನಾವು ನೀವಲ್ಲ, ನೀವು ನಾವಲ್ಲ ಎಂಬ ಮೇಲು ಕೀಳು ಭಾವನೆಯನ್ನು ಸೃಷ್ಟಿಸುವ ಮನೋಭಾವನೆ ನಮ್ಮದು. ನಮ್ಮ ದೇಶದಲ್ಲಿ ರಾಜಕೀಯ ಸಂಸ್ಕೃತಿಯ ವೈವಿಧ್ಯತೆಯಲ್ಲಿ ವೈರುಧ್ಯತೆಯನ್ನು ಕಾಣುತ್ತಿದ್ದೇವೆ. ಇವತ್ತಿನ ದಿನಗಳಲ್ಲಿ ನಾವು ಮಕ್ಕಳಿಗೆ ಪ್ರೀತಿಯನ್ನು ಹೇಳಿಕೊಡುತ್ತಿಲ್ಲ. ಎಲ್ಲವನ್ನೂ ಮರೆತು ಹೋಗುವ, ಎಲ್ಲವನ್ನೂ ದೂರೀಕರಣ ಮಾಡುವ ಈ ಕಾಲದಲ್ಲಿ ನಾವು ಮತ್ತೊಮ್ಮೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಬೋಧಿಸಬೇಕಿದೆ. ಇಂದಿನ ದಿನಗಳಲ್ಲಿ ಮಾನವಿಕ ವಿಭಾಗಗಳು ವಿದ್ಯಾರ್ಥಿಗಳಲ್ಲಿ ಬದುಕಿನ ಪಾಠ, ಬದುಕುವ ಶೈಲಿಯನ್ನು ಹೆಚ್ಚು ತಿಳಿಸಿಕೊಡುವ ಅಗತ್ಯತೆ ಇದೆ ಎಂದು ಹೇಳಿದರು.


ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ ದ.ಕ ಜಿಲ್ಲಾ ಪ. ಪೂ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಚಂದ್ರನಾಥ ಎಂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಪ ಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಜಯಾನಂದ ಸುವರ್ಣ ಮಾತನಾಡಿ ಪ್ರತಿ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗೂ ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸಬೇಕು. ಕಲಿಕೆ ನಿರಂತರ ಪ್ರತಿಕ್ಷಣವೂ ಅನೇಕ ವಿಚಾರಗಳನ್ನು ನಾವು ತಿಳಿದುಕೊಳ್ಳುತ್ತೇವೆ. ರಾಜ್ಯ ಶಾಸ್ತ್ರದಂತಹ ವಿಷಯವೂ ನಮ್ಮ ಸುತ್ತಮುತ್ತಲಿನ ಜಗತ್ತನ್ನು ತಿಳಿಯಲು, ವೈಚಾರಿಕ ಚಿಂತನೆಯನ್ನು ವೃದ್ಧಿಗೊಳಿಸಲು, ನಾವು ಮಾನವರಾಗಿ ಈ ಸಮಾಜದಲ್ಲಿ ಹೇಗೆ ಬದುಕಬಹುದು ಎಂಬುದನ್ನು ತಿಳಿಸುತ್ತದೆ ಎಂದರು.
ಫಿಲೋಮಿನಾ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪ ಸಂಪಾದಕರಾದ ಆರ್.ಸಿ ಭಟ್, ಮೈಸೂರು ಶ್ರೀ ಡಿ ದೇವರಾಜ್ ಅರಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಆರ್.ಜಿ. ಚಿದಾನಂದ ಹಾಗೂ ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಸಹ ಪ್ರಾಧ್ಯಾಪಕರಾದ ಐವನ್ ಲೋಬೊ ಪಾಲ್ಗೊಂಡರು.


ಇದೇ ಸಂದರ್ಭದಲ್ಲಿ 2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಶೇ100 ಫಲಿತಾಂಶವನ್ನು ಪಡೆದ ಕಾಲೇಜಿನ ಉಪನ್ಯಾಸಕರನ್ನು ಮತ್ತು ಅತಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪ. ಪೂ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಉಪಾಧ್ಯಕ್ಷರಾದ ಚಿತ್ರಲೇಖ, ಸೂರಜ್ ಚಾಲ್ಸ್ ನ್ಯೂನ್ಸ್, ಮೀನಾಕ್ಷಿ, ಕಾರ್ಯದರ್ಶಿ ದಿವ್ಯಾ ಕುಮಾರಿ, ಖಜಾಂಜಿ ಸ್ವಪ್ನಾ ಮತ್ತು ದ.ಕ ಜಿಲ್ಲೆಯ ವಿವಿಧ ಪ. ಪೂ ಕಾಲೇಜುಗಳ ಪ್ರಾಂಶುಪಾಲರು ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕರು ಉಪಸ್ಥಿತರಿದ್ದರು.


ಸಂತ ಫಿಲೋಮಿನಾ ಪ.ಪೂ ಕಾಲೇಜಿನ ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ದ.ಕ ಜಿಲ್ಲಾ ಪ. ಪೂ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಚಂದ್ರನಾಥ ಎಂ ಸ್ವಾಗತಿಸಿದರು. ದ.ಕ ಜಿಲ್ಲಾ ಪ. ಪೂ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿಗಳಾದ ದಿವ್ಯಾ ಕುಮಾರಿ ವಂದಿಸಿ, ಸ.ಪ.ಪೂ ಕಾಲೇಜು ಮೂಡ ಇಲ್ಲಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here