34 ನೆಕ್ಕಿಲಾಡಿ: ರಸ್ತೆ ಡಾಮರು ಕಾಮಗಾರಿಗೆ ಮನವಿ

0

15 ದಿನಗಳ ಗಡುವು: ತಪ್ಪಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ


ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಬೊಳಂತಿಲ ಯುನಿಕ್ ಇಂಡಸ್ಟ್ರೀಸ್‌ನಿಂದ ಪಂಪ್ ಹೌಸ್‌ಗೆ ಹೋಗುವ ದಾರಿಯು ತೀರಾ ಹದಗೆಟ್ಟಿದ್ದು, ಹೊಂಡ- ಗುಂಡಿಗಳಿಂದ ಕೂಡಿದೆ. ಇದರಿಂದಾಗಿ ವಾಹನ ಸಂಚಾರ ಹಾಗೂ ಪಾದಚಾರಿಗಳು ಹೋಗಲು ಸಂಕಷ್ಟಪಡುವಂತಾಗಿದೆ. ಈ ರಸ್ತೆಗೆ 15 ದಿನಗಳೊಳಗೆ ಗ್ರಾ.ಪಂ. ಡಾಮರು ಕಾಮಗಾರಿ ನಡೆಸಬೇಕು. ಇಲ್ಲದಿದ್ದಲ್ಲಿ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.


ಈ ಬಗ್ಗೆ ಗ್ರಾ.ಪಂ.ಗೆ ಮನವಿ ನೀಡಿದ ಸಾರ್ವಜನಿಕರು, ಇಲ್ಲಿದ್ದ ಡಾಮರು ಮಾರ್ಗವನ್ನು ಜಲಸಿರಿ ಯೋಜನೆಯ ಕಾಮಗಾರಿ ನಡೆಯುವ ಸಮಯದಲ್ಲಿ ಅಗೆಯಲಾಗಿದ್ದು, ಬಳಿಕ ಅದಕ್ಕೆ ಡಾಮರು ಕಾಮಗಾರಿ ನಡೆಸಿದ್ದಾರೆ. ಕಳಪೆ ಕಾಮಗಾರಿಯಿಂದ ಕೂಡಿದ ಈ ಡಾಮರು ಕೆಲವೇ ತಿಂಗಳಲ್ಲಿ ಎದ್ದು ಹೋಗಿದೆ. ಇಲ್ಲಿ ಹಲವಾರು ಮನೆಗಳಿದ್ದು, ಪ್ರತಿದಿನ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಿಂದಾಗಿ ಹೋಗುತ್ತಾರೆ. ಆದರೆ ಈ ಮಾರ್ಗದಲ್ಲಿ ಈಗ ವಾಹನ ಸಂಚಾರ ಹಾಗೂ ನಡೆದಾದಲೂ ಕಷ್ಟಪಡುವಂತಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳಿದ್ದು, ಕೆಲವು ಕಡೆ ಅರ್ಧ ಮಾರ್ಗವನ್ನೇ ಹೊಂಡಗಳು ನುಂಗಿ ಹಾಕಿವೆ. ಇದನ್ನು ಸರಿಪಡಿಸಲು ಗ್ರಾ.ಪಂ.ಗೆ ತಿಳಿಸಿದರೂ, ಗ್ರಾ.ಪಂ.ನವರು ಅನುದಾನವಿಲ್ಲವೆಂದು ಹೇಳುತ್ತಾರೆ. ಆದ್ದರಿಂದ ಸಾರ್ವಜನಿಕರಾದ ನಮಗೆ ಪ್ರತಿಭಟನೆ ಅನಿವಾರ್ಯವಾಗಿದ್ದು, 15 ದಿನಗಳೊಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.


ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಹಾಗೂ ಪಿಡಿಒ ಸತೀಶ್ ಬಂಗೇರ ಡಿ. ಅವರ ಉಪಸ್ಥಿತಿಯಲ್ಲಿ ಗ್ರಾ.ಪಂ.ಗೆ ಜಮಾಬಂಧಿ ಅಧಿಕಾರಿಯಾಗಿ ಬಂದಿದ್ದ ಪುತ್ತೂರು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ ಅವರು ಮನವಿ ಸ್ವೀಕರಿಸಿದರು. ಮನವಿ ನೀಡಿದ ನಿಯೋಗದಲ್ಲಿ ಅಬ್ದುರ್ರಹ್ಮಾನ್ ಯುನಿಕ್, ಅನಿ ಮಿನೇಜಸ್, ಝಕಾರಿಯಾ ಕೊಡಿಪ್ಪಾಡಿ, ಜಿ.ಎಂ. ಮುಸ್ತಾಫ, ಕಲಂದರ್ ಶಾಫಿ, ಫಯಾಜ್ ನೆಕ್ಕಿಲಾಡಿ, ಶರೀಫ್ ನೆಕ್ಕಿಲಾಡಿ, ಅಝೀಝ್ ನೆಕ್ಕಿಲಾಡಿ, ಅಬ್ದುಲ್ ಖಾದರ್ ಆದರ್ಶನಗರ ಇದ್ದರು.

LEAVE A REPLY

Please enter your comment!
Please enter your name here