ಜೀವ ರಕ್ಷಕರಾದ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಜಾರಿಯಾಗಲಿ

0

ಸಿಐಟಿಯು ನೇತೃತ್ವದ ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಪಿಕೆ ಸತೀಶನ್

ಪುತ್ತೂರು: ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಜನರ ಜೀವ ಉಳಿಸಲು ನಿತ್ಯ ದುಡಿಯುವವರಾಗಿದ್ದರೂ ಅವರಿಗೆ ಬದುಕಲು ತಕ್ಕ ಸಂಬಳ ನೀಡದಿರುವುದು ಸರಕಾರಗಳು ಮಾಡುವ ಅಕ್ಷಮ್ಯ ಅಪರಾಧ ಎಂದು ಸಿಐಟಿಯು ಮುಖಂಡರೂ ವಕೀಲರೂ ಆದ ಪಿ.ಕೆ.ಸತೀಶನ್ ಹೇಳಿದರು.


ಪುತ್ತೂರು ಮಾಜಿ ಸೈನಿಕರ ಭವನದಲ್ಲಿ ಆ.29ರಂದು ಸಿಐಟಿಯು ನೇತೃತ್ವದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಆಶಾ ಕಾರ್ಯಕರ್ತೆಯರ ಜಂಟಿ ಸಮಾವೇಶದಲ್ಲಿ ಅವರು ಮಾತನಾಡಿದರು. ದಿನ ಬೆಳಗಾದರೆ ರಾಜಕೀಯ ಮಾತಾಡುವವರು ನಿತ್ಯ ದುಡಿಯುವ ಆಶಾ ಕಾರ್ಯಕೆರ್ತೆಯರ ಬದುಕಿನ ರಾಜಕೀಯದ ಬಗ್ಗೆ ಯಾಕೆ ಮಾತಾಡುತ್ತಿಲ್ಲ .ನಮ್ಮದು ದುಡಿಯುವ ವರ್ಗದ ರಾಜಕೀಯ. ದುಡಿಯುವವರಿಗೆ ಬದುಕಲು ತಕ್ಕ ವೇತನ, ಸವಲತ್ತು ಬದುಕಿಗೆ ಭದ್ರತೆ ಒದಗಿಸುವುದೇ ನಿಜವಾದ ರಾಜಕೀಯ ಆಗಬೇಕು ಎಂದರು.


ಹೋರಾಟದ ಮೂಲಕ ನ್ಯಾಯಯುತ ಸವಲತ್ತು ಪಡೆಯೋಣ:
ಸಿಐಟಿಯು ನಾಯಕ ನ್ಯಾಯವಾದಿ ಬಿ.ಎಂ.ಭಟ್ ಅವರು ಸಿಐಟಿಯು ದುಡಿಯುವ ಜನರ ಬೆವರಿನ ಪಾಲು ನೀಡಲು ಆಗ್ರಹಿಸುವ ಸಂಘಟನೆ ಎಂದರು. ಸರಕಾರಕ್ಕೆ ಜನರ ಆರೋಗ್ಯದ ರಕ್ಷಣೆ ಆಗಬೇಕು. ಆಶಾ ಕಾರ್ಯಕರ್ತೆಯರು ದಿನಾ ಜನರ ಆರೋಗ್ಯದ ರಕ್ಷಣೆಗಾಗಿ ದುಡಿಯುತ್ತಿದ್ದರೂ ಆಶಾ ಕಾರ್ಯಕರ್ತೆಯರ ಆರೋಗ್ಯಯುತ ಬದುಕಿನ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕಾಳಜಿ ಇಲ್ಲವಾಗಿರುವುದು ಖಂಡನೀಯ. ಶಿಶು ಮರಣ, ತಾಯಿ ಮರಣದ ಪ್ರಮಾಣವನ್ನು ಇಳಿಸಿದ ಕೀರ್ತಿ ಆಶಾ ಕಾರ್ಯಕರ್ತೆಯರಿಗಿದ್ದರೂ, ಈ ಬಗ್ಗೆ ಸರಕಾರಗಳು ತಮ್ಮ ಎದೆಯನ್ನು ತಾವೇ ತಟ್ಟಿಕೊಳ್ಳುತ್ತಿದ್ದರೂ ಆಶಾ ಕಾರ್ಯಕರ್ತೆಯರ ಬದುಕು ಇವರಿಗೆ ಬೇಡವಾಗಿದೆ ಎಂದು ಟೀಕಿಸಿದರು. ಸರಕಾರವನ್ನು ಎಚ್ಚರಿಸಿಲು ಸಿಐಟಿಯು ನೇತೃತ್ವದಲ್ಲಿ ಬಲಿಷ್ಟವಾಗಿ ಸಂಘಟನೆ ಕಟ್ಟಿ ಬೆಳೆಸೋಣ ಹೋರಾಟದ ಮೂಲಕ ನ್ಯಾಯಯುತ ಸವಲತ್ತುಗಳನ್ನು ಪಡೆಯಲು ಮುಂದಾಗೋಣ ಎಂದರು.


ಸಂಬಳ ಬಾರದಿದ್ದರೂ ದುಡಿಯುವ ಅನಿವಾರ್ಯತೆ:
ಪ್ರಸ್ತಾವಿಕವಾಗಿ ಮಾತಾಡಿದ ಆಶಾ ಕಾರ್ಯರ್ಕೆಯರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲೂಕು ಅದ್ಯಕ್ಷೆ ದೇವಕಿ ಆಶಾ ಕಾರ್ಯಕರ್ತೆಯರ ಸಂಕಷ್ಟ, ನೋವು, ದುಮ್ಮಾನಗಳನ್ನು ಬಿಚ್ಚಿಟ್ಟರು. ಸಂಬಳ ಬಾರದಿದ್ದರೂ ದುಡಿಯುವ ಅನಿವಾರ್ಯತೆಯ ಬದುಕಿನ ಮಾಹಿತಿ ನೀಡಿದರು. ಸಿಐಟಿಯು ನೇತೃತ್ವದಲ್ಲಿ ಸಂಘಟನೆ ಮತ್ತು ಹೋರಾಟದಿಂದ ನಮ್ಮ ಬದುಕನ್ನು ಬದಲಾವಣೆ ಮಾಡಿಕೊಳ್ಳೋಣ ಎಂದರು. ಭವಾನಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ನಾಯಕಿ ಈಶ್ವರಿ ಶಂಕರ್ ಮುಂಡೂರು ಉಪಸ್ಥಿತರಿದ್ದರು. ಸುಲೋಚನ ಸ್ವಾಗತಿಸಿದರು. ರೇಖಾ ಕುದ್ಯಾಡಿ ಅವರು ಕಾರ್ಯಕ್ರಮ ನಿರೂಪಿಸಿದರು. ವೇದಾವತಿ ವಂದಿಸಿದರು.


ಪುತ್ತೂರು, ಕಡಬ ತಾಲೂಕಿನ ಸಮಿತಿ ರಚನೆ:
ಸಭೆಯ ಕೊನೆಯಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ನೂತನ ಸಮಿತಿ ರಚಿಸಲಾಯಿತು. ಸಿಐಟಿಯು ನೇತೃತ್ವದಲ್ಲಿ ಆಶಾಕಾರ್ಯಕರ್ತೆಯರ ಸಂಘಕ್ಕೆ ತಾತ್ಕಾಲಿಕ ಸಮಿತಿ ರಚಿಸಲಾಗಿ ಪುತ್ತೂರು ತಾಲೂಕು ಅದ್ಯಕ್ಷರಾಗಿ ಭವಾನಿ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಾವತಿ ಡಿ.ಆರ್. ಕೋಶಾಧಿಕಾರಿಯಾಗಿ ತುಳಸಿ, ಸಲಹೆಗಾರರಾಗಿ ವಕೀಲರಾದ ಪಿಕೆ ಸತೀಶನ್, ಮತ್ತು ಉಪಾದ್ಯಕ್ಷರಾಗಿ ಸುಲೋಚನ, ಸಹಕಾರ್ಯದರ್ಶಿಯಾಗಿ ಸಾವಿತ್ರಿ ಕಾರ್ಯಾಕಾರಿಣಿ ಸದಸ್ಯರಾಗಿ ಚಂದ್ರಾವತಿ, ಉಷಾ, ಸುಜಾತ, ಪ್ರಮೀಳಾ, ಬೇಬಿ ಅವರುಗಳು ಆಯ್ಕೆಯಾದರು. ಅದೇ ರೀತಿ ಸಿಐಟಿಯು ನೇತೃತ್ವದ ಆಶಾ ಕಾರ್ಯಕರ್ತೆಯರ ಸಂಘದ ಕಡಬ ತಾಲೂಕು ಅದ್ಯಕ್ಷರಾಗಿ ಆಶಾ, ಪ್ರಧಾನ ಕಾರ್ಯದರ್ಶಿಯಾಗಿ ಶ್ಯಾಮಲ ರೈ, ಖಜಾಂಜಿಯಾಗಿ ಲೋಲಾಕ್ಷಿ, ಉಪಾದ್ಯಕ್ಷರಾಗಿ ಭಾರತಿ, ಸಹಕಾರ್ಯದರ್ಶಿಯಾಗಿ ವೇದಾವತಿ, ಸಲಹೆಗಾರರಾಗಿ ಬಿ.ಎಂ.ಭಟ್ ಮತ್ತು ಕಾರ್ಯಾಕಾರಿಣಿ ಸದಸ್ಯರಾಗಿ ಗೀತಾ, ಲೀಲಾವತಿ, ಗೀತಾ.ಕೆ ಅವರುಗಳು ಆಯ್ಕೆಯಯಾದರು. ಸೆ.೧೩ಕ್ಕೆ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಾವೆಶ ನಡೆಯಲಿದ್ದು, ಬಳಿಕ ನೂತನ ತಾಲೂಕು ಮಟ್ಟದ ಪ್ರತ್ಯೇಕ ಪ್ರತ್ಯೇಕ ಸಮಾವೇಶ ನಡೆಸಲು ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here