ಲೈಂಗಿಕ ದೌರ್ಜನ್ಯ ಆರೋಪ: ಮಹಿಳೆ ದೂರು-ಅರುಣ್‌ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಬೆಂಗಳೂರಿನ ಹೋಟೆಲ್‌ವೊಂದಕ್ಕೆ ಕರೆಸಿಕೊಂಡು ನನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೆ ನಂಬಿಕೆ ದ್ರೋಹ, ವಂಚನೆ, ಶಾರೀರಿಕ ಮತ್ತು ಮಾನಸಿಕ ಪೀಡನೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನಂತೆ ಪುತ್ತಿಲ ಪರಿವಾರ ಟ್ರಸ್ಟ್‌ನ ಸಂಸ್ಥಾಪಕ, ಬಿಜೆಪಿ ಮುಖಂಡ ಅರುಣ್‌ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ‘ನಾನು ಅರುಣ್ ಕುಮಾರ್ ಪುತ್ತಿಲರವರ ಹಿಂದುತ್ವದ ಪ್ರತಿಪಾದನೆ ಮತ್ತು ಪ್ರಖ್ಯಾತಿಯಿಂದ ಅಭಿಮಾನ ಹೊಂದಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ನೈತಿಕ ಬೆಂಬಲ ನೀಡುತ್ತಿದ್ದೆ. ಅವರು 2023ರ ಜೂನ್ ಮೊದಲ ವಾರದಲ್ಲಿ ನನ್ನನ್ನು ಬೆಂಗಳೂರಿನ ಹೋಟೆಲ್ ಒಂದಕ್ಕೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆ ಬಳಿಕ ಬ್ಲ್ಯಾಕ್ ಮೇಲ್ ಮಾಡಿಕೊಂಡು ಅವರಿರುವ ಪ್ರದೇಶಕ್ಕೆ ಕರೆಸಿಕೊಳ್ಳುತ್ತಿದ್ದರು. ಅಬಲೆಯಾದ ನನ್ನ ಪುತ್ರಿಗೆ ಜೀವನ ಪೂರ್ತಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ ನನ್ನನ್ನು ದೈಹಿಕ ಹಾಗೂ ಮಾನಸಿಕವಾಗಿ ಬಳಸಿಕೊಳ್ಳುತ್ತಿದ್ದರು.

ಅವರೊಂದಿಗೆ ಇದ್ದ ಕ್ಷಣಗಳ ಛಾಯಾ ಚಿತ್ರ, ಸೆಲ್ಫಿ, ಆಡಿಯೋ, ವಿಡಿಯೋಗಳು ಇದೆಯೆಂದು ಹೇಳಿಕೊಂಡು ಬೆದರಿಸಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. 2024ರ ಲೋಕಸಭಾ ಚುನಾವಣೆಯ ಬಳಿಕ ಮಾತುಕತೆ ಕಡಿಮೆ ಮಾಡಿದ್ದಾರೆ. ಈಗ ಉದ್ಯೋಗ ಹಾಗೂ ವರಮಾನವಿಲ್ಲದೆ ಬಾಡಿಗೆ ಮನೆಯಲ್ಲಿದ್ದುಕೊಂಡು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ…’ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದೇವರು ಮೆಚ್ಚುವ ಕೆಲಸವಲ್ಲ: ಪುತ್ತಿಲ ಸ್ಪಷ್ಟನೆ
ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ. ಇದೊಂದು ಪೂರ್ವಯೋಜಿತ ಕೆಲಸದಂತೆ ಕಾಣುತ್ತಿದೆ. ರಾಜಕೀಯ ಷಡ್ಯಂತ್ರವೂ ಇದರಲ್ಲಿದೆ. ಯಾವುದೇ ಆರೋಪ ಮಾಡುವಾಗ ಸತ್ಯಾಸತ್ಯತೆ ಇರಬೇಕು. ಇದು ದೇವರು ಮೆಚ್ಚುವ ಕೆಲಸವಲ್ಲ. ಎಲ್ಲವನ್ನು ದೇವರು ನೋಡಲಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here