ಅದರ ಅರ್ಥವಾಗಬೇಕಾದರೆ ದೇಶಕ್ಕೆ ಸ್ವಾತಂತ್ರ್ಯದೊರಕಿಸಿಕೊಟ್ಟ ಗಾಂಧಿ ಸ್ವಾತಂತ್ರ್ಯಸಂಭ್ರಮದ 1947 ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಇದ್ದರೇ? ಎಲ್ಲಿದ್ದರು ಮತ್ತು ಯಾಕೆ? ಸ್ವಾತಂತ್ರ್ಯ ದಿನದಂದು ಅವರು ನೀಡಿದ ಸಂದೇಶವೇನು? ಎಂದು ತಿಳಿದುಕೊಳ್ಳಬೇಕು.
ದೇಶಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯತಂದು ಕೊಡುವ ಹೋರಾಟದಲ್ಲಿ ಅನೇಕರು ಭಾಗಿಯಾಗಿದ್ದಾರೆ. ಜೀವ ಕಳೆದುಕೊಂಡಿದ್ದಾರೆ. ಆದರೆ ಇಡೀ ದೇಶವನ್ನು ಕಾಲ್ನಡಿಗೆಯ ಮೂಲಕ ಹಲವಾರು ಬಾರಿ ಸುತ್ತಿ ತನ್ನ ಭಾಷಣಗಳಿಂದ, ಬರವಣಿಗೆಗಳಿಂದ, ಸಾಮಾನ್ಯ ಜನರೊಂದಿಗೆ ಬೆರೆಯುವಿಕೆಯಿಂದ ಜಾಗೃತಗೊಳಿಸಿದವರು, ಬ್ರಿಟೀಷರ ಆಡಳಿತದ ಎದುರು ಅಹಿಂಸಾತ್ಮಕವಾಗಿ ಸ್ವಾತಂತ್ರ್ಯಹೋರಾಟಕ್ಕೆ, ಬಲಿದಾನಕ್ಕೆ ಜನರನ್ನು ತಯಾರು ಮಾಡಿದ ಮಹಾನ್ ವ್ಯಕ್ತಿ ಗಾಂಧಿ. ತಾನು ಶ್ರೀಮಂತ ಕುಟುಂಬದಿಂದ ಬಂದಿದ್ದರೂ, ವಿದೇಶದಲ್ಲಿ ವ್ಯಾಸಂಗ ಮಾಡಿ ಬ್ಯಾರಿಸ್ಟರ್ (ವಕೀಲ) ಪದವಿ ಪಡೆದಿದ್ದರೂ ಬಡ ಜನರ ಶೋಷಿತರ ಕಷ್ಟವನ್ನು ಅರಿಯಲಿಕ್ಕಾಗಿ ಬಟ್ಟೆ ಬರೆಗಳನ್ನು, ಶ್ರೀಮಂತಿಕೆಯ ಜೀವನವನ್ನು ತ್ಯಜಿಸಿ ಅವರಂತೆ ಬದುಕಿದ ವ್ಯಕ್ತಿ ಗಾಂಧಿ. ತನ್ನ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಿದವರು. ಈಗಿನ ಕಾಲದಲ್ಲಿ ಬಡತನದಿಂದ ಬಂದು ರಾಜಕೀಯ ಪ್ರವೇಶ ಮಾಡಿ ಜನಸೇವೆಗೆಂದು ಬಂದ ನಾಯಕರು ರಾಜರಾಗಿ ಮೆರೆದು ಮಾಡಿರುವ ಸಂಪಾದನೆಯನ್ನು, ಭ್ರಷ್ಟಾಚಾರವನ್ನು ನೋಡಿದರೆ ಅವರು ಗಾಂಧಿಯ ಚಿಂತನೆ, ಆಶಯಗಳನ್ನು ಜೀವಂತ ಇಟ್ಟಿದ್ದಾರೆಯೇ? ಕೊಂದಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬಹುದಲ್ಲವೇ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಮೊದಲು ಮಹಾತ್ಮಗಾಂಧಿಯವರನ್ನು ಲೇವಡಿ ಮಾಡುವವರು ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯಹೋರಾಟದಲ್ಲಿ ನೇತೃತ್ವ ವಹಿಸಿದ್ದ ಗಾಂಧಿಯವರು ಸ್ವಾತಂತ್ರ್ಯದೊರಕಿದಾಗ ದೇಶದ ಪ್ರಧಾನಿ/ಅಧ್ಯಕ್ಷರು/ಸರ್ವೋಚ್ಛ ನಾಯಕನಾಗಿ ಯಾಕೆ ಆಡಳಿತ ನಡೆಸಲಿಲ್ಲ ಎಂದು ಚಿಂತಿಸಬೇಕು. ಯಾವುದೇ ಸ್ವಾತಂತ್ರ್ಯದ ಹೋರಾಟಗಳಲ್ಲಿ, ಕ್ರಾಂತಿಗಳಲ್ಲಿ, ರಾಜಕೀಯದಲ್ಲಿ ಅದರ ನೇತೃತ್ವ ವಹಿಸಿದವರು ಆ ದೇಶದ ಸರ್ವೋಚ್ಛ ನಾಯಕರಾಗಿ ಆಡಳಿತ ನಡೆಸುತ್ತಾರೆ ಎಂಬ ಹಿನ್ನಲೆಯಲ್ಲಿ ಈ ಮೇಲಿನ ಪ್ರಶ್ನೆಗೆ ಉತ್ತರವನ್ನು ಹುಡುಕಬೇಕು.
ಅದಕ್ಕಿಂತ ಮುಖ್ಯವಾಗಿ ದೇಶಕ್ಕೆ ಸ್ವಾತಂತ್ರ್ಯದೊರಕಿದ ದಿನ 1947 ಆಗಸ್ಟ್ 15ರಂದು ಸ್ವಾತಂತ್ರ್ಯಸಂಭ್ರಮದ ದಿನ ಕೆಂಪುಕೋಟೆಯಲ್ಲಿ ಗಾಂಧಿಜಿ ಇದ್ದರೇ? ಇರದಿದ್ದರೆ ಅವರು ಯಾಕೆ ಇರಲಿಲ್ಲ. ಅವರು ಅಂದು ಎಲ್ಲಿದ್ದರು ಮತ್ತು ಯಾಕೆ? ಏನು ಮಾಡುತ್ತಿದ್ದರು ಎಂದು ಹೇಳಬೇಕು. ಸ್ವಾತಂತ್ರ್ಯ ದಿನದಂದು ಅವರು ನೀಡಿದ ಸಂದೇಶವೇನು? ಎಂಬುದನ್ನು ತಿಳಿದರೆ ಗಾಂಧಿಜಿಯವರ ಜೀವನದ ಉದ್ದೇಶವೇನು? ಅವರು ಹೇಳಿದ ಸ್ವಾತಂತ್ರ್ಯಏನು ಎಂದು ಅರ್ಥವಾಗಬಹುದು.
ಸ್ವಾತಂತ್ರ್ಯದೊರಕಿ 78 ವರ್ಷಗಳಾದರೂ ನಮ್ಮ ದೇಶದ ಪರಿಸ್ಥಿತಿ ನೋಡಿದಾಗ ಗಾಂಧಿಜಿ ಹೇಳಿದ ಸ್ವಾತಂತ್ರ್ಯದೊರಕಿದೆಯೇ ಎಂದು ಯೋಚಿಸಿದರೆ, ನಾಥೂರಾಂ ಗೋಡ್ಸೆ ಗಾಂಧಿಯರನ್ನು ಕೊಂದಿದ್ದರೆ ನಾವು ಗಾಂಧಿಯವರ ಆಶಯಗಳನ್ನು ಚಿಂತನೆಗಳನ್ನು ಪಾಲಿಸುತ್ತಿದ್ದೇವೆಯೇ, ನಾಶಗೊಳಿಸುತ್ತಿದ್ದೇವೆಯೇ, ಸಮಾಧಿ ಮಾಡಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರ ದೊರಕಬಹುದು.
ಈ ಸರಣಿ ಮಾಲಿಕೆಯಲ್ಲಿ ಮಹಾತ್ಮ ಗಾಂಽಯವರ ಅಂತಹ ಒಂದೊಂದು ಚಿಂತನೆಗಳನ್ನು ಬಿಚ್ಚುತ್ತಾ ಬರಲಿದ್ದೇವೆ. ಸ್ವಾತಂತ್ರ್ಯದಿನದಂದು ಮಹಾತ್ಮಗಾಂಧಿ ಎಲ್ಲಿದ್ದರು ಮತ್ತು ಏನು ಮಾಡುತ್ತಿದ್ದರು, ಏನು ಹೇಳಿದ್ದರು ಎಂಬ ಪ್ರಶ್ನೆಗೆ ಜನತೆ ಉತ್ತರವನ್ನು ತಿಳಿದುಕೊಳ್ಳಬೇಕು. ಆ ಬಗ್ಗೆ ಮುಂದಿನ ವಾರ ಚರ್ಚಿಸೋಣ ಆಗದೇ?
|ಡಾ.ಯು.ಪಿ. ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ, ಮೊ:9986398949, E-mail:ups@suddi.net
ವಿ.ಸೂ: ಗಾಂಧಿ ಚಿಂತನಾ ವೇದಿಕೆಗೆ ಸೇರಲಿಚ್ಛಿಸುವವರು ಸಂಪರ್ಕಿಸಿರಿ