ಪುತ್ತೂರು: ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರಿಗೆ ಪ್ರಾಧಾನ್ಯತೆ ಇರೋದಿಲ್ಲ. ಆದರೆ ಯಾರು ಕೆಲಸ ಮಾಡುವುದಿಲ್ಲವೊ ಅವರಿಗೆ ಪುರಸ್ಕಾರ ದೊರೆಯುತ್ತಿರುವುದು ದೌರ್ಭಾಗ್ಯ. ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಹುದ್ದೆಯನ್ನು ಅಲಂಕರಿಸಬೇಕಾದರೆ ಎಲ್ಲರೊಂದಿಗೆ ಬೆರೆಯುವಿಕೆ ಹಾಗೂ ಧೈರ್ಯ ಬೇಕಾಗುತ್ತದೆ. ಮುಂದಿನ ದಿನಗಳಳ್ಲಿ ಕ್ರೈಸ್ತ ಸಮುದಾಯದಿಂದ ರಾಜಕೀಯದಲ್ಲಿ ಯುವಸಮೂಹ ಹೆಚ್ಚೆಚ್ಚು ಗುರುತಿಸುವಂತಾಗಬೇಕು ಜೊತೆಗೆ ಸಮುದಾಯದ ಧ್ವನಿಯಾಗಬೇಕು ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜರವರು ಹೇಳಿದರು.
ಸೆ.2ರಂದು ಅವರು ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇಲ್ಲಿಗೆ ಭೇಟಿ ನೀಡಿ ಕ್ರೈಸ್ತ ಸಮುದಾಯದ ಸದಸ್ಯರೊಂದಿಗೆ ವಿಚಾರ ವಿನಿಮಯದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂವಿಧಾನ ವಿರೋಧಿಯಾಗಿ ನಡೆದುಕೊಂಡ ಕರ್ನಾಟಕದ ರಾಜ್ಯಪಾಲರ ನಡೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನ ಮನೆಗೆ ಕಲ್ಲು ತೂರಾಟ ನಡೆದವು. ಈ ಕಲ್ಲು ತೂರಾಟ ನಡೆದ ಘಟನೆ ಬಗ್ಗೆ ಆಕ್ಷೇಪವೆತ್ತಿ ಪುತ್ತೂರು ಕ್ರಿಶ್ಚಿಯನ್ಸ್ ಯೂನಿಯನ್ ಪತ್ರಿಕಾಗೋಷ್ಟಿ ನಡೆಸಿ ನನಗೆ ಬೆಂಬಲ ನೀಡಿರುವುದು ಸಂತಸ ತಂದಿದೆ. ಜನ ವಿರೋಧಿ ಕಾನೂನಿಗೆ ಜನ ದಂಗೆ ಏಳುವುದು ಸಾಮಾನ್ಯವೇ ಸರಿ. ಈ ಹಿಂದೆ ಶ್ರೀಲಂಕಾದಲ್ಲಿ ಘಟನೆ ನಡೆದಿಲ್ಲವೇ?. ಎಂದರು.
ಧ್ವೇಷದಿಂದ ಮನೆ ಮೇಲೆ ಕಲ್ಲು ತೂರಾಟ:
ಮುಂದುವರೆಸಿ ಮಾತನಾಡಿದ ಐವನ್ ಡಿ’ಸೋಜರವರು, ಒಂದೇ ಒಂದು ಕೇಸು ಇಲ್ಲದ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಬಗ್ಗೆ ಮಾತನಾಡಿ ಎಂದರೆ ಬಿಜೆಪಿಗರ ಬಳಿ ಉತ್ತರವಿಲ್ಲ. ಕಾನೂನುಬದ್ಧವಾಗಿಯೇ ಅಂದಿನ ಬಿಜೆಪಿ ಸರಕಾರ ಜಾಗ ಕೊಟ್ಟಿದ್ದಲ್ಲವೇ ಎಂದು ಹೇಳಿದ ಅವರು ನಾನು ವಿಧಾನಪರಿಷತ್‌ಗೆ ಮಂತ್ರಿಗಳ ಮತಗಳ ಮುಖಾಂತರ ಬಂದಿದ್ದು, ಹಿಂದಿನ ಬಾಗಿಲಿನಿಂದ ಅಲ್ಲ. ಆದರೆ ರಾಜ್ಯಪಾಲರು ಯಾವ ಬಾಗಿಲಿನಿಂದ ಬಂದಿದ್ದು. ಜೆರೋಸಾ ಶಾಲೆಯ ಪ್ರಕರಣದಲ್ಲಿ ನಾನೇ ಖುದ್ದಾಗಿ ಮುಂದೆ ನಿಂತು ಶಾಸಕ ವೇದವ್ಯಾಸ ಕಾಮತ್‌ರವರ ಮೇಲೆ ಹಾಗೂ ಅಸೆಂಬ್ಲಿಯಲ್ಲಿ ರಾಹುಲ್ ಗಾಂಧಿಯ ಕೆನ್ನೆಗೆ ಬಾರಿಸುತ್ತೇನೆ ಎಂದ ಭರತ್ ಶೆಟ್ಟಿಯವರ ಮೇಲೆ ಎಫ್‌ಐಆರ್ ದಾಖಲಿಸಲು ಒತ್ತಾಯಿಸಿದ್ದಕ್ಕೆ ನನ್ನ ಮನೆ ಮೇಲೆ ಕಲ್ಲು ತೂರಾಟ ಮಾಡಲಾಯಿತು ಎಂದರು. ನನ್ನ ಸಮುದಾಯಕ್ಕೆ ಏನಾದರೂ ಅನ್ಯಾಯವಾದರೆ ಅದನ್ನು ನಾನು ಎಂದಿಗೂ ಪ್ರತಿಭಟಿಸುತ್ತೇನೆ. ಯಾಕೆಂದರೆ ನಾನು ಹೋರಾಟ ಮಾಡಿ ಬಂದವನು ಎಂದು ಅವರು ಹೇಳಿದರು.
ಕ್ರೈಸ್ತ ಸಮುದಾಯದ ಮೇಲೆ ಹಲ್ಲೆಗಳಾದಾಗ ಕ್ರೈಸ್ತ ಸಮುದಾಯ ಎಲ್ಲಿದೆ-ಮೌರಿಸ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ ಮಾತನಾಡಿ, ದ್ವಿತೀಯ ಬಾರಿಗೆ ಎಂಎಲ್‌ಸಿಯಾಗಿ ಆಯ್ಕೆಯಾದ ಐವನ್ ಡಿ’ಸೋಜರವರು ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಬಹಳ ಆಪ್ತರು. ಸರಕಾರಿ ನೌಕರರ ಸಂಘದ ಸಮುದಾಯ ಭವನದ ನಿರ್ಮಾಣದ ವೇಳೆ ಐವನ್ ಡಿ’ಸೋಜರವರು ಸರಕಾರದಿಂದ ರೂ.25 ಲಕ್ಷ ಅನುದಾನವನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಸ್ಲಿಂ ಸಮುದಾಯದ ಮೇಲೆ ಹಲ್ಲೆಯಾದರೆ, ಮುಸ್ಲಿಂ ಸಮುದಾಯ ಪ್ರತಿಭಟನೆ ಮಾಡುತ್ತದೆ. ಆದರೆ ಕ್ರೈಸ್ತ ಸಮುದಾಯದ ಮೇಲೆ ಹಲ್ಲೆಗಳಾದಾಗ ಕ್ರೈಸ್ತ ಸಮುದಾಯ ಎಲ್ಲಿದೆ?. ಸಮುದಾಯವು ರಾಜಕೀಯವಾಗಿ ಮೇಲೆ ಬರಬೇಕಾದರೆ ರಾಜಕೀಯದಲ್ಲಿ ನಾವು ಸಕ್ರಿಯರಾಗಬೇಕು. ಸಕ್ರಿಯರಾದಾಗ ರಾಜಕೀಯದಲ್ಲಿ ಉನ್ನತ ಹಂತ ತಲುಪಲು ಸಾಧ್ಯ ಮತ್ತು ಸರಕಾರದಿಂದ ಸಮುದಾಯಕ್ಕೆ ಸೌಲಭ್ಯ ಸಿಗಲು ಸಾಧ್ಯ ಎಂದರು.
ಕಾಂಗ್ರೆಸ್ ಜಿಲ್ಲಾ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ’ಸೋಜ, ಕ್ರಿಶ್ಚಿಯನ್ ಯೂನಿಯನ್ ಪುತ್ತೂರು ಇದರ ಗೌರವ ಸಲಹೆಗಾರ ವಲೇರಿಯನ್ ಡಾಯಸ್, ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಾರ್ಯಾಧ್ಯಕ್ಷ ಝೇವಿಯರ್ ಡಿ’ಸೋಜ, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ನೆಕ್ಕಿಲಾಡಿಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ಡೆನ್ನಿಸ್ ಮಸ್ಕರೇನ್ಹಸ್ ಸೇಡಿಯಾಪು, ವಾಲ್ಟರ್ ಸಿಕ್ವೇರಾ ಪರ್ಲಡ್ಕ, ವಾಲ್ಟರ್ ಡಿ’ಸೋಜ ಸಿದ್ಯಾಳ, ಸೈಮನ್ ಗೊನ್ಸಾಲ್ವಿಸ್ ಕೃಷ್ಣನಗರ, ಹೆನ್ರಿ ರೆಬೆಲ್ಲೋ ಮರೀಲು, ಅಲೆಕ್ಸ್ ಗೊನ್ಸಾಲ್ವಿಸ್ ಕೃಷ್ಣನಗರ, ಓಸ್ವಾಲ್ಡ್ ಸಲ್ದಾನ್ಹಾ ಸಾಮೆತ್ತಡ್ಕ, ಪ್ಯಾಟ್ರಿಕ್ ಲೋಬೋ ಪುತ್ತೂರು, ಜೆರಾಲ್ಡ್ ಮಸ್ಕರೇನ್ಹಸ್ ಉಪ್ಪಿನಂಗಡಿ, ಜೋಕಿಂ ಲೂಯಿಸ್ ಬೆದ್ರಾಳ, ಪಾವ್ಲ್ ಮೊಂತೇರೋ ಕಲ್ಲಾರೆ, ವಿನ್ಸೆಂಟ್ ತಾವ್ರೋ ಎಪಿಎಂಸಿ ರಸ್ತೆ, ಮೆಲ್ವಿನ್ ಮಸ್ಕರೇನ್ಹಸ್ ಎಪಿಎಂಸಿ ರಸ್ತೆ, ಮನೋಜ್ ಡಾಯಸ್ ಎಪಿಎಂಸಿ ರಸ್ತೆ, ರೋಶನ್ ಡಾಯಸ್ ಬಪ್ಪಳಿಗೆ, ಕಾಂಗ್ರೆಸ್ ಮುಖಂಡ ವಿಕ್ಟರ್ ಪಾಯಿಸ್, ಜೋಸೆಫ್ ಮಸ್ಕರೇನ್ಹಸ್ ನೆಕ್ಕಿಲಾಡಿ, ವಲೇರಿಯನ್ ಡಿ’ಸೋಜ ಚಿಕ್ಕಪುತ್ತೂರು, ವಿಲ್ರೋಯ್ ಡಿ’ಸೋಜ ಸಿದ್ಯಾಳ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುತ್ತೂರು ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್ ವಂದಿಸಿದರು.