ಕಡಬ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಗೋಕುಲನಗರ ಕೊಯಿಲ-ರಾಮಕುಂಜ ಇದರ ಆಶ್ರಯದಲ್ಲಿ 42ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸೆ.1ರಂದು ಕೊಯಿಲ-ಗೋಕುಲನಗರದಲ್ಲಿ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ನಿವೃತ್ತ ಶಿಕ್ಷಕ ಬಾಲಚಂದ್ರ ಮುಚಿಂತ್ತಾಯ ಅವರು ಧಾರ್ಮಿಕ ಉಪನ್ಯಾಸ ನೀಡಿ, ಶಿಷ್ಟರ ರಕ್ಷಣೆ ಮಾಡಲು, ದುಷ್ಟರಿಗೆ ಶಿಕ್ಷೆ ನೀಡಲು ನಾನಾ ಆವಾತರಗಳನ್ನು ಎತ್ತಿದ ಶ್ರೀಕೃಷ್ಣ ಪರಮಾತ್ಮನ ಸಾತ್ವಿಕ ಗುಣಗಳು ಅಧುನಿಕ ಕಾಲಘಟದಲ್ಲಿನ ನಮಗೆಲ್ಲ ಆದರ್ಶವಾಗಬೇಕು ಎಂದು ಹೇಳಿದರು. ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ. ಸುಚೇತಾ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮೋಹನ್ದಾಸ್ ಶೆಟ್ಟಿ ಬಡಿಲ ಅಧ್ಯಕ್ಷತೆ ವಹಿಸಿದ್ದರು. ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಆರುವಾರ ಉಪಸ್ಥಿತರಿದ್ದರು.
ಸನ್ಮಾನ:
ನಿವೃತ್ತ ಹಿರಿಯ ಪಶುಪರಿವೀಕ್ಷಕ ಅಶೋಕ್ ಕೊಯಿಲ, ಮೆಸ್ಕಾಂ ಪವರ್ ಮ್ಯಾನ್ ವಿಶ್ವನಾಥ ರಾಮಕುಂಜ, ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಕುಶಾಲಪ್ಪ ಗೌಡ ಆನೆಗುಂಡಿ, ಕುಶಾಲಪ್ಪ ಗೌಡ ಪಲ್ಲಡ್ಕ, ನಿವೃತ್ತ ಸೈನಿಕ ಸುಬೇದಾರ್ ಗುಣಕರ ಕೆ ಕೆರ್ನಡ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ರಾಮಕುಂಜ, ಕಡಬ ಭೂಮಾಪನ ಇಲಾಖಾ ನಿವೃತ್ತ ಸಿಬ್ಬಂದಿ ಮೋನಪ್ಪ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಪುಟಾಣಿಗಳಿಗೆ ನಡೆದ ಕೃಷ್ಣ ವೇಷ ಸ್ಪರ್ಧೆ, ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಕಾರ್ಯದರ್ಶಿ ಸುಧೀಶ್ ಪಟ್ಟೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಜತೆ ಕಾರ್ಯದರ್ಶಿಗಳಾದ ದೀಕ್ಷಿತ್ ಪೂರಿಂಗ, ವಾಮನ ಬರಮೇಲು ಸನ್ಮಾನಿತರನ್ನು ಪರಿಚಯಿಸಿದರು.
ಕಾರ್ಯದರ್ಶಿ ವಿನೋದ್ ಪಲ್ಲಡ್ಕ ವರದಿ ವಾಚಿಸಿದರು. ಕೃಷ್ಣಮೂರ್ತಿ ಕೆಮ್ಮಾರ ಸ್ವಾಗತಿಸಿ, ನಿರೂಪಿಸಿದರು. ಸಂಚಾಲಕ ಪ್ರಕಾಶ್ ಕೆಮ್ಮಾರ ವಂದಿಸಿದರು.
ಬೆಳಿಗ್ಗೆ ಅಷ್ಟಮಿ ಕಟ್ಟೆಯಲ್ಲಿ ಆತೂರು ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಪೂಜಾ ವಿಧಿ ವಿಧಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಸೇವೆ ನಡೆಯಿತು. ಎಸ್ ಆರ್ ಕೆ ಲ್ಯಾಡರ್ಸ್ ಪ್ರಾಯೋಜಕತ್ವದಲ್ಲಿ ಚಾರ್ವಾಕ ಕಪಿಲೇಶ್ವರ ಕಲಾ ಸಮಿತಿಯಿಂದ ಆಕರ್ಷಕ ಚೆಂಡೆ ಪ್ರದರ್ಶನ ನಡೆಯಿತು.