ಆರ್ಲಪದವು: ಪೂಮಾಣಿ – ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನಕ್ಕೆ ದಾರಂದ ಮುಹೂರ್ತ, ನಿಧಿಕುಂಭ ಸಮರ್ಪಣೆ

0

ಶಾಸಕನಾಗಲು ಈ ಕ್ಷೇತ್ರದ ಪ್ರಾರ್ಥನೆಯೂ ಫಲಗೂಡಿದೆ – ಅಶೋಕ್ ರೈ

ಪಾಣಾಜೆ: ಇಲ್ಲಿನ ಆರ್ಲಪದವು ಶ್ರೀ ಪೂಮಾಣಿ ಕಿನ್ನಿಮಾಣಿ, ಪಿಲಿಭೂತ ದೈವಸ್ಥಾನದಲ್ಲಿ ನೂತನ ದೈವಸ್ಥಾನಕ್ಕೆ ದಾರಂದ ಮುಹೂರ್ತ ಮತ್ತು ನಿಧಿಕುಂಭ ಸಮರ್ಪಣೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಪೂರ್ವಾಹ್ನ 8.06 ರ ಸುಮುಹೂರ್ತದಲ್ಲಿ ಮುಹೂರ್ತ ಕಾರ್ಯಕ್ರಮಗಳು ನೆರವೇರಿದವು.

ಆಶೀರ್ವಚನ ನೀಡಿದ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು, ಮನುಷ್ಯರ ಬಂಗಾರದಂತಹ ಮನಸ್ಸು ಇಷ್ಟೊಂದು ದೊಡ್ಡ ಸಾನಿಧ್ಯ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಪ್ರಕ್ರಿಯೆ ಮನಸ್ಸು ಸಂಕುಚಿತವಾದರೆ ಫಲವೂ ಸಂಕುಚಿತವಾಗುತ್ತದೆ. ದೇವರ ಮೇಲೆ ವಿಶ್ವಾಸ ಮಾಡುವುದು ನಮ್ಮ ಕರ್ತವ್ಯ. ಪ್ರತಿಫಲ ನೀಡುವುದು ದೇವರ ಕಾರ್ಯ. ದೇವರ ಕೆಲಸ ಮಾಡುವ ನಮ್ಮ ಕರ್ತವ್ಯಗಳ ಮೂಲಕ ಧರ್ಮ ರಕ್ಷಿಸಲ್ಪಡಲಿ’ ಎಂದರು. ಸಚಿನ್ ಟ್ರೇಡರ್ಸ್ ಮ್ಹಾಲಕ ಮಂಜುನಾಥ ನಾಯಕ್ ರವರು ದಾರಂದ ಮುಹೂರ್ತ ನೆರವೇರಿಸಿದರು.

ನಿಧಿಕುಂಭ ಸಮರ್ಪಣೆಗೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ ‘ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗ ನನ್ನ ಪಾಲಿಗೆ ಒದಗಿದೆ. ಬೆಂಗಳೂರಿನ ಸಭೆ ಒಂದು ದಿನಕ್ಕೆ ಮುಂದೂಡಲ್ಪಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗ ನನ್ನ ಪಾಲಿಗೆ ಬಂದಿದೆ. ಶಾಸಕನಾಗಿ ಆಯ್ಜೆಯಾಗಲು ಇಲ್ಲಿನ ಪ್ರಾರ್ಥನೆ ಫಲಗೂಡಿದೆ.  ಇದು ಕಾರಣಿಕ ಕಲೆಯ ಜಾಗ. ಇಲ್ಲಿಗೆ ಬಂದಾಗ ಒಂದು ನೆಮ್ಮದಿಯ ವಾತಾವರಣ ದೊರೆಯುತ್ರದೆ. ದೇವಸ್ಥಾನದ ಬ್ರಹ್ಮಕಲಶ ನಡೆದ ರೀತಿಯಲ್ಲೇ ದೈವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶ ಊರಿಗೆ ಊರೇ ಸಾಕ್ಷಿಯಾಗುವ ರೀತಿಯಲ್ಲಿ   ‌ನಡೆಯಬೇಕು. ನನ್ನನ್ನು ಈ ಊರಿಗೆ ಕರೆತಂದವರು ಶಶಿಕುಮಾರ್ ರೈಯವರು‌. ಅವರು ಕೇಳಿಕೆಯ ಮೇರೆಗೆ ಸರಕಾರದಿಂದಲೂ ಆದಷ್ಟು ಅನುದಾನ ನೀಡುವ ಬಗ್ಗೆ ಪ್ರಯತ್ನಿಸುತ್ತೇನೆ. ಈಗಾಗಲೇ 10 ಲಕ್ಷ ರೂ. ಸರಕಾರದಿಂದ ಕೊಡಲಿದ್ದೇವೆ. ಸ್ವಂತ ನೆಲೆಯಲ್ಲಿ 5 ಲಕ್ಷ ರೂ. ನೀಡಲಿದ್ದೇನೆ. ಈ ಜಾಗ ಸಂಪೂರ್ಣ ಒಂದೇ ತಟ್ಟು ಮಾಡಿ ವಿಸ್ತಾರವಾದ ಜಾಗ ನಿರ್ಮಾಣವಾಗುವಂತಾಗಬೇಕು’ ಎಂದರು.

ನಿರೀಕ್ಷೆಗೂ ಮೀರಿದ ಭಕ್ತರ ಸ್ಪಂದನೆ

ನಿಧಿಕುಂಭ ಸಮರ್ಪಣೆಗೆ ಭಕ್ತರಿಂದ ಸಮಿತಿಯವರ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ‌. ನಿಧಿಕುಂಭಕ್ಕೆ ಕೇವಲ ಚಿನ್ನ ಮತ್ತು ಬೆಳ್ಳಿಯ ನಾಣ್ಯ ಸಮರ್ಪಣೆಗೆ ಅವಕಾಶವಿತ್ತು. ಮುಂಗಡವಾಗಿ ತರಿಸಲಾಗಿದ್ದ ಎಲ್ಲಾ ನಾಣ್ಯಗಳೂ ಮುಗಿಯುವುದರೊಂದಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ತಮ್ಮ ಜೀವಮಾನದ ಸುಯೋಗ ಎಂದು ಭಾವಿಸಿ ನಿಧಿ ಸಮರ್ಪಿಸಿದ್ದಾರೆ‌. ಇದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಕಾರ್ಯಗಳಿಗೆ ಸಮಿತಿಯವರಿಗೆ ಇನ್ನಷ್ಟು ಉತ್ತೇಜನ ಉತ್ಸಹ ನೀಡಿದಂತಾಗಿದೆ ಎಂದು ಸಮಿತಿಯವರು ಇದೇ ವೇಳೆ ತಿಳಿಸಿದರು.

10 ಲಕ್ಷ ರೂ.ಗಳಿಗೂ ಮಿಕ್ಕಿದ ಕರಸೇವೆ

ದೈವಸ್ಥಾನದ ನಿರ್ಮಾಣ ಕಾರ್ಯಗಳು ಶೇ. 75 ರಷ್ಟು ಪೂರ್ಣಗೊಂಡಿದ್ದು, ಸುಮಾರು 10 ಲಕ್ಷ ರೂ. ಗಳಿಗೂ ಮಿಕ್ಕಿ ವೆಚ್ಚದಷ್ಟು ಕೆಲಸಗಳು ಕರಸೇವೆಯಲ್ಲಿ ನಡೆದಿರುವುದು ಬಹಳ ವಿಶೇಷ ಎನಿಸಿದೆ.


ಸರಕಾರದ ಕಡೆಯಿಂದ 10 ಲಕ್ಷ ರೂ., ಶಾಸಕರ ಸ್ವಂತದಿಂದ ರೂ.‌ 5 ಲಕ್ಷ ಘೋಷಣೆ
ಈ ದೈವಸ್ಥಾನದ ಜೀರ್ಣೋದ್ಧಾರಗಳಿಗೆ ಸರಕಾರದ ಕಡೆಯಿಂದ ರೂ. 10 ಲಕ್ಷ ಅನುದಾನದ ಜೊತೆಗೆ ಸ್ವಂತದ ನೆಲೆಯಲ್ಲಿ ರೂ. 5 ಲಕ್ಷ ನೀಡಲಿದ್ದೇನೆ ಎಂದು ಶಾಸಕ ಅಶೋಕ್ ರೈಯವರು ಇದೇ ವೇಳೆ ಘೋಷಿಸಿದರು.

ಸಭಾಂಗಣ ನಿರ್ಮಾಣಕ್ಕೆ ಸರಕಾರದಿಂದ ಅನುದಾನಕ್ಕೆ ಮನವಿ
ದೈವಸ್ಥಾನ ಜೀರ್ಣೋದ್ಧಾರದ ಜೊತೆ ಜೊತೆಗೆ ನೂತನ ಸಭಾಭವನ ನಿರ್ಮಾಣಕ್ಕೂ ಯೋಜನೆ ಹಾಕಿಕೊಳ್ಳಲಾಗಿದ್ದು, ಸರಕಾರದ ಕಡೆಯಿಂದ ಇದಕ್ಕೂ ವಿಶೇಷ ಅನುದಾನ ಕಲ್ಪಿಸಿಕೊಡುವಂತೆ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಶಾಸಕ ರೈಯವರಲ್ಲಿ ಮನವಿ ಮಾಡಿದರು.

ಮಂಜುನಾಥ ನಾಯಕ್ ರವರಿಂದ ದಾರಂದ ಮುಹೂರ್ತ
ನೂತನ ದೈವಸ್ಥಾನಕ್ಕೆ ಪುತ್ತೂರು ಸಚಿನ್ ಟ್ರೇಡರ್ಸ್ ಮ್ಹಾಲಕ ಮಂಜುನಾಥ ನಾಯಕ್ ರವರು ದಾರಂದ ಮುಹೂರ್ತ ನೆರವೇರಿಸಿದರು.

ಶಶಿಕುಮಾರ್ ರೈಯವರ ಮರೆಯಲಾಗದ ಸಹಕಾರ – ಶ್ರೀಕೃಷ್ಣ ಬೋಳಿಲ್ಲಾಯ
ಸಭಾಧ್ಯಕ್ಷತೆ ವಹಿಸಿದ್ದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆಯವರು ಮಾತನಾಡಿ ‘ಅಶೋಕ್ ರೈಯವರ ವಿಶೇಷ ಸಹಕಾರ ಮತ್ತು ಊರ ಪರವೂರ ಭಕ್ತರ ಸಹಕಾರದಿಂದ ದೇವಸ್ಥಾನ ಬೆಳಗುತ್ತಿದೆ. ಅದೇ ರೀತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಹೊರಟಾಗಲೂ ಶಶಿಕುಮಾರ್ ರೈಯವರ ಅವರ ಮರೆಯಲಾಗದ ಸಹಕಾರದೊಂದಿಗೆ ಕಾರ್ಯಗಳು ನಡೆಯುತ್ತಿವೆ. ಆರ್ಥಿಕ ಕ್ರೋಢೀಕರಣದಲ್ಲೂ ಪ್ರಯತ್ನ ಮಾಡುತ್ತಿದ್ದೇವೆ. ಗ್ರಾಮದ ಸರ್ವ ಭಕ್ತರೂ ಒಂದೇ ರೀತಿಯಲ್ಲಿ ನಮ್ಮೊಂದಿಗೆ ಕೈ ಜೋಡಿಸುತ್ತಿರುವುದು ಸಂತಸ ತಂದಿದೆ.

ಕ್ಷೇತ್ರದ ಮಹಿಮೆ ವೃದ್ಧಿಯಾಗಿದೆ – ಹೇಮನಾಥ ಶೆಟ್ಟಿ ಕಾವು
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ‘ಈ ಕ್ಷೇತ್ರದ ಉತ್ಸವದ ಸಂದರ್ಭದಲ್ಲಿ ಸೇರುವ ಭಕ್ತಸಮೂಹ, ದೈವಗಳ ಕಾರಣಿಕತೆಗೆ ಸಾಕ್ಷಿಯಾಗಿವೆ. ಕ್ಷೇತ್ರದ ಮೊಕ್ತೇಸರರು ದೈವಗಳ‌ ಪ್ರತಿನಿಧಿಯಾಗಿ ಊರಿನಲ್ಲಿ ನ್ಯಾಯ ಕೊಡುವವರಾಗಿರುವುದರಿಂದ ಇಲ್ಲಿನ ಮಹಿಮೆ ಇನ್ನಷ್ಟು ವೃದ್ಧಿಯಾಗಿದೆ’ ಎಂದರು.

ಉದ್ಯಮಿ ಬಾಲಕೃಷ್ಣ ರೈಯವರು ಮಾತನಾಡಿ ಇಲ್ಲಿನ ದೈವಗಳ ಶಕ್ತಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಾಸ್ತುಶಿಲ್ಪಿ ವೇ. ಮೂ. ಮಹೇಶ್ ಮುನಿಯಂಗಳ, ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ವಿಠಲ ರೈ ಬೈಲಾಡಿ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉದ್ಯಮಿ ಆನಂದ ರೈ ಸೂರಂಬೈಲು,  ವಿಜಯಾ ಬ್ಯಾಂಕ್‌ ನಿವೃತ್ತ ಅಧಿಕಾರಿ ಹರೀಶ್ಚಂದ್ರ ಪಕ್ಕಳ, ಕೆವಿಜಿ ಶಿಕ್ಷಣ ಸಂಸ್ಥೆಗಳ ಡಾ. ಲೀಲಾಧರ ಗೌಡ, ಹಿರಿಯರಾದ ಶೈಲಿನಿ ಭಾಸ್ಕರ್,  ಕೆಎಂಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಉದ್ಯಮಿ ಹೇಮಚಂದ್ರ ಮುರ, ಕೆಎಸ್.ಆರ್‌ಟಿಸಿ ನಿವೃತ್ತ ಅಧಿಕಾರಿ ತಮ್ಮಣ್ಣ ನಾಯ್ಕ್, ನಿವೃತ್ತ ಆರ್‌ಟಿಒ ಅಧಿಕಾರಿ ಪುರುಷೋತ್ತಮ ಮಣಿಯಾಣಿ, ಪುತ್ತೂರು ಅರಣ್ಯಾಧಿಕಾರಿ ಕಿರಣ್ ಕುಮಾರ್,  ನಿವೃತ್ತ ಅರಣ್ಯಾಧಿಕಾರಿ ಕೃಷ್ಣಪ್ಪ ಕೆ., ಯಜ್ಞಪುರುಷ ಬಜಕೂಡ್ಲು

ಪಾಣಾಜೆ ಸಿಎ ಬ್ಯಾಂಕ್ ನಿರ್ದೇಶಕ ತಿಮ್ಮಣ್ಣ ರೈ ಆನಾಜೆ, ನಿವೃತ್ತ ಶಿಕ್ಷಕಿ ಪ್ರತಿಭಾ ಓಕುಣ್ಣಾಯ ಬೊಳ್ಳಿಂಬಳ, ಕೃಷ್ಣಪ್ರಕಾಶ್ ಅರ್ಧಮೂಲೆ, ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉದ್ಯಮಿ ಉಪೇಂದ್ರ ಬಲ್ಯಾಯ, ನಿವೃತ್ತ ಉಪಸಹಾಯಕ ಪೊಲೀಸ್ ಆಯುಕ್ತ ಚಂದ್ರಕಾಂತ್, ಹೆಡ್‌ಕಾನ್‌ಸ್ಟೇಬಲ್ ರಾಧಾಕೃಷ್ಣ ಕುಲಾಲ್,  ಗ್ರಾ‌ಪಂ. ಸದಸ್ಯೆ ಶ್ರೀಮತಿ ಸುಲೋಚನಾ, ಸ್ನೇಹ ಟೆಕ್ಸ್‌ಟೈಲ್ಸ್ ಮ್ಹಾಲಕ ವರದರಾಜ ನಾಯಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಜನರ ಹೃದಯ ಶ್ರೀಮಂತಿಕೆ ಮೆಚ್ಚತಕ್ಕದ್ದು – ಶಶಿಕುಮಾರ್ ರೈ

ಪ್ರಾಸ್ತಾವಿಕದೊಂದಿಗೆ ಮಾತನಾಡಿದ ಶಶಿಕುಮಾರ್ ರೈಯವರು ‘ಜೀರ್ಣೋದ್ಧಾರದ ಕಾರ್ಯಗಳು ಆರಂಭಿಸಿದ ಬಳಿಕ ಇಲ್ಲಿಯವರೆಗೆ ನಿರಂತರವಾಗಿ ನಡೆದು ಬಹಳ ಶೀಘ್ರ ಪ್ರಕ್ರಿಯೆಯಲ್ಲಿ ನಡೆಯಲಿದೆ. ಅರಣ್ಯ ಇಲಾಖೆ, ಮೊಕ್ತೇಸರರು ಮತ್ತು ಊರ ಭಗವದ್ಭಕ್ತರ ಸಹಕಾರದಿಂದ ಮರ ಮುಂಗಟ್ಟುಗಳು ಉಚಿತವಾಗಿ ದೈವಸ್ಥಾನಕ್ಕೆ ಲಭಿಸಿದೆ. ಈ ಗ್ರಾಮದ ಜನರ ಹೃದಯ ಶ್ರೀಮಂತಿಕೆ ಮೆಚ್ಚತಕ್ಕದ್ದು‌’ ಎಂದರು.
ದೈವನರ್ತಕ ನೇಮು ಪರವ ರವರಿಗೆ ಶಾಲು ಹಾಕಿ ಗೌರವಿಸಲಾಯಿತು.

ಪ್ರೇಮ ಪ್ರಾರ್ಥಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಗನ್ಮೋಹನ ರೈ ಸೂರಂಬೈಲು ವಂದಿಸಿದರು. ಶಿಕ್ಷಕ ಮನೋಜ್ ರೈ ಸೂರಂಬೈಲು ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ರೈ ಕೆದಂಬಾಡಿ, ಸದಾಶಿವ ರೈ ಸೂರಂಬೈಲು, ಶ್ರೀಹರಿ ನಡುಕಟ್ಟ, ಭಾಸ್ಕರ ಪೂಜಾರಿ ನಡುಕಟ್ಟ, ಶಾರದಾ ಪಾಟಾಳಿ, ಪ್ರತಿಭಾ ಶೆಟ್ಟಿ ಸೂರಂಬೈಲು ಮತ್ತಿತರರು ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು.

ದೇಣಿಗೆ ಹಸ್ತಾಂತರ
ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ಊರ ಪರವೂರ ಭಕ್ತಾಭಿಮಾನಿಗಳು ದೇಣಿಗೆಯನ್ನು ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here