ಉಪ್ಪಿನಂಗಡಿ: 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ದೇವ ಸಂಕಲ್ಪದೆದುರು ಎಲ್ಲವೂ ನಗಣ್ಯ: ಮಹೇಶ್ ಕಜೆ

ಉಪ್ಪಿನಂಗಡಿ: ದೇವ ಸಂಕಲ್ಪದೆದುರು ಎಲ್ಲವೂ ನಗಣ್ಯ. ಆದ್ದರಿಂದ ನಾನು, ನನ್ನದೆಂಬ ಅಹಂಕಾರ ನಮ್ಮಲ್ಲಿರಬಾರದು. ದೇವರ ಸನ್ನಿಧಿಯಲ್ಲಿ ನಾವೆಲ್ಲ ಚಾಕರಿಯವರು ಎಂದು ನ್ಯಾಯವಾದಿ ಮಹೇಶ್ ಕಜೆ ತಿಳಿಸಿದರು.


ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸೆ.8ರಂದು ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.


ಗಣಪತಿ ದೇವರು ಭೂತ, ವರ್ತಮಾನ, ಭವಿಷ್ಯತ್ ಎಂಬ ಮೂರು ಕಾಲಗಳನ್ನು ಮೀರಿದ ಸ್ವರೂಪ ಶಕ್ತಿಯಾಗಿದ್ದು, ಗಣಪತಿ ದೇವರ ಕಥೆಯಲ್ಲಿ, ಆರಾಧನೆಯಲ್ಲಿ, ದೇಹದ ರೂಪದಲ್ಲಿ ಜ್ಞಾನವೂ ಇದೆ. ವಿಜ್ಞಾನವೂ ಅಡಕವಾಗಿದೆ. ಇದರಲ್ಲಿ ಜೀವನ ಮೌಲ್ಯದ ಸಂದೇಶಗಳಿವೆ. ಆದ್ದರಿಂದಲೇ ಗಣಪತಿಯು ನಾಡು- ನುಡಿ- ಗಡಿಯನ್ನು ಮೀರಿ ಬೆಳಗಿದ ವಿಶ್ವನಾಯಕ. ಆದ್ದರಿಂದ ನಮ್ಮನ್ನು ನಾವು ಮೊದಲು ಅರಿತುಕೊಂಡು ನಡೆ- ನುಡಿಯಲ್ಲಿ ಗಣಪತಿಯಂತಾಗಬೇಕು. ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ದೇವರಂತಾಗಬೇಕು ಎಂದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ಮಾತನಾಡಿ, ಜೀವನದಲ್ಲಿ ಸಾಧನೆ ಮುಖ್ಯ. ದೇವರ ಅನುಗ್ರಹವಿಲ್ಲದೆ ಯಾವ ಕೆಲಸವೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಜೀವನದಲ್ಲಿ ಭಕ್ತಿ, ಶೃದ್ಧೆ, ನಿಷ್ಠೆ ನಮ್ಮದಾದಾಗ ಭಗವಂತನ ಒಳುಮೆ ದೊರೆಯಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತೀಯ ಭೂಸೇನೆಯ ಅಧಿಕಾರಿ ಸುಧೀರ್ ಶೆಟ್ಟಿ, ಭಾರತೀಯ ಸೇನೆ ಸೇರಲು ಯುವ ಪಡೆ ಮುಂದೆ ಬರಬೇಕಿದೆ. ಸೇನೆ ಎಂದರೆ ಸಾವು ಎಂಬ ಭ್ರಮೆ ನಾವು ಮೊದಲು ಬಿಡಬೇಕು. ಭಗತ್‌ಸಿಂಗ್‌ರಂತವರು ಬೇಕು. ಆದರೆ ಅವರು ಪಕ್ಕದ ಮನೆಯಲ್ಲಿ ಹುಟ್ಟಲಿ ಎಂದು ಆಶಿಸುವ ನಮ್ಮ ಮನಸ್ಸುಗಳು ಬದಲಾಗಿ, ಪ್ರತಿ ಮನೆ- ಮನೆಯಲ್ಲೂ ಭಗತ್‌ಸಿಂಗ್‌ರಂತವರು ಹುಟ್ಟಬೇಕೆಂಬ ಕನಸು ನಮ್ಮದಾಗಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ಉಪ್ಪಿನಂಗಡಿಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಆನಂದ, ಸುಂದರ, ತನಿಯ, ಮನೋಜ್, ಯಮುನಾ, ಪ್ರೇಮಾ, ಆನಂದ, ರಾಕೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಸಮಿತಿಯ ಕೋಶಾಧಿಕಾರಿ ಚಂದ್ರಹಾಸ ಹೆಗ್ಡೆ, ಉಪಾಧ್ಯಕ್ಷ ಯು. ಯತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶರತ್ ಕೋಟೆ, ಕೀರ್ತನ್ ಕುಮಾರ್ ಕೊಯಿಲ, ಪ್ರಮುಖರಾದ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ರವೀಶ್ ಎಚ್.ಟಿ., ಜಗದೀಶ್ ಶೆಟ್ಟಿ, ಗೋಪಾಲ ಹೆಗ್ಡೆ, ವಿಶ್ವನಾಥ ಶೆಟ್ಟಿ ಕಂಗ್ವೆ, ಉಷಾಚಂದ್ರ ಮುಳಿಯ, ವಿದ್ಯಾಧರ ಜೈನ್, ಶಶಿಧರ ಶೆಟ್ಟಿ, ಬಿಪಿನ್, ಗಂಗಾಧರ ಟೈಲರ್, ಸ್ವಣೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಸ್ವಾಗತಿಸಿದರು. ಪ್ರಕೃತಿ ದೇವಾಡಿಗ ಪ್ರಾರ್ಥಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ವಂದಿಸಿದರು. ಉದಯಕುಮಾರ್ ಯು.ಎಲ್. ಕಾರ್ಯಕ್ರಮ ನಿರೂಪಿಸಿದರು.

ಇಂದು ಶೋಭಾಯಾತ್ರೆ
ಸೆ.9ರಂದು 10ಕ್ಕೆ ಗಣಹೋಮ, ಕುಣಿತ ಭಜನಾ ಸೇವೆ ನಡೆಯಲಿದೆ. 11:30ರಿಂದ ಡಿ.ಪಿ. ಮ್ಯೂಸಿಕಲ್ ರಾಮನಗರ ಇವರಿಂದ ಭಕ್ತಿ- ಭಾವ- ಜನಪದ ಹಾಡುಗಳ ರಸಮಂಜರಿ ನಡೆಯಲಿದೆ. ಮಧ್ಯಾಹ್ನ 12:45ಕ್ಕೆ ಮಹಾಪೂಜೆಯಾಗಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಭಜನಾ ಸೇವೆ ನಡೆದು, ಸಂಜೆ 6ಕ್ಕೆ ಮಹಾಪೂಜೆಯಾಗಿ, ಶ್ರೀ ಗಣಪತಿ ದೇವರ ವಿಗ್ರಹ ವಿಸರ್ಜನೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

LEAVE A REPLY

Please enter your comment!
Please enter your name here